ರಾಣೇಬೆನ್ನೂರು: ವಿಮೆ ಹಣ ಸಾಲದ ಖಾತೆಗೆ ಬ್ಯಾಂಕ್‌ ಕ್ರಮ ವಿರೋಧಿಸಿ 26ಕ್ಕೆ ಹೆದ್ದಾರಿ ಬಂದ್

ರಾಣೇಬೆನ್ನೂರು: ವಿಮೆ ಹಣ ಸಾಲದ ಖಾತೆಗೆ ಬ್ಯಾಂಕ್‌ ಕ್ರಮ ವಿರೋಧಿಸಿ 26ಕ್ಕೆ ಹೆದ್ದಾರಿ ಬಂದ್

 ರೈತ ಮುಖಂಡರಾದ ರವೀಂದ್ರಗೌಡ ಪಾಟೀಲ, ಈರಣ್ಣ ಹಲಗೇರಿ ಎಚ್ಚರಿಕೆ

ರಾಣೇಬೆನ್ನೂರು, ಮೇ 23- ರೈತರ ಖಾತೆಗೆ ಜಮಾ ಆಗಿರುವ ಬೆಳೆವಿಮೆ ಹಣದ ಜೊತೆಗೆ ವಿಧವಾ ವೇತನ, ಪಿಂಚಣಿ, ಮಾಸಾಶನ ಉದ್ಯೋಗ ಖಾತ್ರಿಯಂತಹ ವಿವಿಧ ಯೋಜನೆಗಳ ಹಣವನ್ನು  ರೈತರು ಡ್ರಾ ಮಾಡಿಕೊಳ್ಳದಂತೆ ‘ಲಾಕ್’ ಮಾಡಿಕೊಂಡಿರುವ ಬ್ಯಾಂಕಿನವರ ಕ್ರಮ ಖಂಡಿಸಿ   ಇದೇ ದಿನಾಂಕ 26ರ ಶುಕ್ರವಾರ ಬೆಳಗ್ಗೆ 10 ಘಂಟೆಗೆ ಮಾಕನೂರು ಕ್ರಾಸ್ ಹತ್ತಿರ ಹೆದ್ದಾರಿ ತಡೆ ಮಾಡಿ ಏಕಕಾಲಕ್ಕೆ ತಾಲ್ಲೂಕಿನ ಎಲ್ಲಾ ಬ್ಯಾಂಕ್‍ಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ರೈತ ಮುಖಂಡರಾದ ರವೀಂದ್ರಗೌಡ ಎಫ್. ಪಾಟೀಲ, ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಎಚ್ಚರಿಕೆ ನೀಡಿದ್ದಾರೆ. 

ಹಾವೇರಿಯಲ್ಲಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಮತ್ತು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ  ಅಣ್ಣಯ್ಯ ಇವರಿಗೆ ನೊಂದ ರೈತರ ಪರವಾಗಿ ಮನವಿ ಸಲ್ಲಿಸಿ ಮಾತನಾಡಿದ ಅವರು ರೈತರ, ಕೃಷಿ ಕಾರ್ಮಿಕರ ಸಂಕಷ್ಟಕ್ಕೆ ಅನುಕೂಲವಾಗಲೆಂದೇ ಇರುವ ಬೆಳೆ ವಿಮೆ ಉದ್ಯೋಗ ಖಾತ್ರಿ, ಬೆಳೆ ಪರಿಹಾರ ಮತ್ತು ಸರ್ಕಾರದ ಪಿಂಚಣಿ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನದಂತಹ ಯೋಜನೆಗಳಲ್ಲಿ ಜಮಾ ಆಗುತ್ತಿರುವ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಂಡಿರುತ್ತಾರೆ. 

ಅತಿವೃಷ್ಟಿ, ಬೆಲೆ ಏರಿಕೆ, ಕೊರೊನಾ, ಲಾಕ್‍ಡೌನ್‍ನಿಂದ ಆರ್ಥಿಕವಾಗಿ ಬಳಲಿ ಬೆಂಡಾಗಿರುವ ರೈತ ಸಮುದಾಯಕ್ಕೆ ಬ್ಯಾಂಕಿನವರ ಈ ವರ್ತನೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಳೆಗಾಲದ ಬಿತ್ತನೆಯ ಈ ಸಂದರ್ಭದಲ್ಲಿ ರೈತರಿಗೆ ಈ ಯೋಜನೆಗಳಿಂದ ಬರುವ ಹಣವೇ ಬೀಜ, ರಸಗೊಬ್ಬರಕ್ಕೆ ಆಧಾರ.

ಕಳೆದ 15 ದಿನಗಳಿಂದ ರೈತರ ಖಾತೆಗೆ ಜಮಾ ಆಗಿರುವ ಬೆಳೆ ವಿಮೆ ಯೋಜನೆಯ ಹಣವನ್ನು ಬ್ಯಾಂಕಿನವರು ‘ಲಾಕ್’ ಮಾಡಿ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಹಣವನ್ನೇ ನಂಬಿದ ರೈತರು  ಜಿಗುಪ್ಸೆಗೊಂಡಿದ್ದಾರೆ. ರೈತ ಆತ್ಮಹತ್ಯಾ ಪ್ರಕರಣಗಳು ಹೆಚ್ಚಾಗಲಿಕ್ಕೆ ಇಂತಹ ಘಟನೆಗಳು ಕೂಡಾ ಕಾರಣಗಳಾಗಿವೆ. ರಾಜ್ಯದಲ್ಲಿ ರೈತ ಆತ್ಮಹತ್ಮಾ ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಆಗಲಿಕ್ಕೆ ಜಿಲ್ಲಾಡಳಿತ ರೈತರ ಬಗ್ಗೆ ತಾಳಿರುವ ನಿರ್ಲಕ್ಷ್ಯವೂ ಕೂಡಾ ಕಾರಣವಾಗಿದೆ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಹರಿಹರ ಗೌಡ ಪಾಟೀಲ, ದಿನೇಶ ಪಾಟೀಲ, ಭೀಮಣ್ಣ ಓಲೇಕಾರ, ಯಲ್ಲಪ್ಪ ಡಿ. ಓಲೇಕಾರ, ಜಮಾಲಸಾಬ್ ಶೇತ ಸನದಿ, ಶಿವರಾಜ ಎಚ್.ಎಂ. ಭಾಗವಹಿಸಿದ್ದರು.