ರಾಣೇಬೆನ್ನೂರು, ಮೇ 21- ಪ್ರತಿ ವರ್ಷ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನಡೆಯುವ ಶ್ರೀ ಸದ್ಗುರು ಗುರುನಾಥರೂಢರ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ರಾಣೇಬೆನ್ನೂರಿನಿಂದಲೇ ಒಂದು ವಿಶೇಷ ರೈಲು ವ್ಯವಸ್ಥೆ ಮಾಡಲಾಗುವುದು ಎಂದು ರೈತ ಮುಖಂಡ, ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ವಾಗ್ದಾನ ಮಾಡಿದರು.
ರಾಣೇಬೆನ್ನೂರಿನ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಸಹಸ್ರಾರು ಸಂಖ್ಯೆಯಲ್ಲಿ ಹುಬ್ಬಳ್ಳಿಗೆ ಗುರುನಾಥರೂಢರ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದರು.
ವರ್ಷದಿಂದ ವರ್ಷಕ್ಕೆ ರಾಣೇಬೆನ್ನೂರು, ರಟ್ಟಿಹಳ್ಳಿ, ಹಿರೇಕೆರೂರು ತಾಲೂಕಿನಿಂದ ಹುಬ್ಬಳ್ಳಿಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಿಳೆಯರು, ವಯೋವೃದ್ಧರು ಸಣ್ಣ ಸಣ್ಣ ಮಕ್ಕಳ ಅನುಕೂಲಕ್ಕಾಗಿ ರಾಣೇಬೆನ್ನೂರಿನಿಂದಲೇ ಒಂದು ವಿಶೇಷ ರೈಲನ್ನು ಬಿಡುವ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸಲಾಗುವುದೆಂದರು.
ನೇತೃತ್ವ ವಹಿಸಿದ್ದ ಪ್ರಕಾಶಗೌಡ ಆರ್. ಪಾಟೀಲ ಮಾತನಾಡಿ, ವರ್ಷದಿಂದ ವರ್ಷಕ್ಕೆ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ, ನಾಯಕ ಸಮಾಜದ ಅಧ್ಯಕ್ಷರಾದ ಚಂದ್ರಣ್ಣ ಎಚ್. ಬೇಡರ, ಸೋಮಣ್ಣ ದೊಡ್ಡಮನಿ, ರಾಯಣ್ಣ ಡಿ. ತಳವಾರ, ಕುಮಾರ ಓಲೇಕಾರ, ಅರುಣ ಯಲ್ಲಕ್ಕನವರ ಮುಂತಾದವರು ಭಾಗವಹಿಸಿದ್ದರು.