ದಾವಣಗೆರೆ,ಮೇ 11- ಸ್ಥಳೀಯ ವಿನೋಬನಗರದ 4ನೇ ಮುಖ್ಯ ರಸ್ತೆಯಲ್ಲಿರುವ ಕೆ.ಎಸ್.ವೈನ್ಲ್ಯಾಂಡ್ ಎಂಬ ಹೆಸರಿನ ಮದ್ಯದ ಅಂಗಡಿಯಲ್ಲಿ ಪರವಾನಗಿ ಷರತ್ತನ್ನು ಉಲ್ಲಂಘಿಸಿ ಮದ್ಯ ಸೇವನೆೆಗೆ ಅವಕಾಶ ನೀಡಲಾಗುತ್ತಿದೆ ಇದರಿಂದಾಗಿ ಅಕ್ಕ-ಪಕ್ಕದ ನಾಗರಿಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ಈ ಮದ್ಯದಂಗಡಿಯನ್ನು ಸ್ಥಳಾಂತರಿಸುವಂತೆ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಅಲ್ಲಿನ ಮಹಿಳೆಯರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮದ್ಯ ಸೇವನೆಗೆ ಬರುವ ಜನರು ತಮ್ಮ ವಾಹನಗಳನ್ನು 3 ಮತ್ತು 4ನೇ ಕ್ರಾಸ್ನಲ್ಲಿರುವ ಮನೆ ಮುಂದೆ ನಿಲ್ಲಿಸುತ್ತಾರೆ. ಮಹಿಳೆಯರು ವಾಹನ ತೆಗೆಯಿರಿ ಎಂದರೆ ಜಗಳಕ್ಕೇ ನಿಲ್ಲುತ್ತಾರೆ.
ಮದ್ಯಸೇವನೆ ಮಾಡಿ ಎಚ್ಚರವಿಲ್ಲದೆ ಮನೆಯ ಬಾಗಿಲ ಮುಂದೆಯೇ ಮೂತ್ರ ಮಾಡುತ್ತಾರೆ. ಅಲ್ಲದೇ ವಾಂತಿ ಹಾಗೂ ಉಗುಳುವುದು ಮಾಡುತ್ತಾರೆ. ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ನೆಮ್ಮದಿಯಿಂದ ಇರಲು ಆಗುತ್ತಿಲ್ಲ.
ಈ ಮದ್ಯದ ಅಂಗಡಿ 30 ವರ್ಷಗಳ ಹಿಂದೆ ತೆರೆದಿದ್ದು, ಆಗ ಇಲ್ಲಿ ವಾಸದ ಮನೆಗಳು ಇರಲಿಲ್ಲ. ಈಗ ಬಹಳಷ್ಟು ಮನೆಗಳು ಇವೆ. ಹಾಗಾಗಿ ಮಕ್ಕಳಿಗೆ, ವಯಸ್ಕರರಿಗೆ, ಕಾಯಿಲೆ ಇರುವವರಿಗೆ ಮಾನಸಿಕ ಹಿಂಸೆಯಾಗುತ್ತಿದೆ.
ಹಾಗಾಗಿ ಈ ಮದ್ಯದಂಗಡಿಯನ್ನು ಸ್ಥಳಾಂತರಿಸುವಂತೆ ಅವರು ಒತ್ತಾಯಿಸಿದ್ದಾರೆ.
ಈ ಸಂಬಂಧ ಅಲ್ಲಿನ ನಿವಾಸಿ ಸೈಯದ್ ಸೈಫುಲ್ಲಾ ಸಹ ಪೋಲಿಸರಿಗೆ ದೂರು ಸಲ್ಲಿಸಿದ್ದರು. ಆಗ ಬಾರ್ ಮಾಲಿಕರು ಆರು ತಿಂಗಳ ಕಾಲಾವಕಾಶ ನೀಡಿ, ಬಾರ್ ಅನ್ನು ಸ್ಥಳಾಂತರಿಸಲಾಗು ವುದು ಎಂದು ಮುಚ್ಚಳಿಕೆ ಪತ್ರ ಬರೆದ ಕೊಟ್ಟಿದ್ದರು. ಅವರು ಕೇಳಿದ ಅವಧಿ ಮೀರಿದರೂ ಇನ್ನೂ ಸ್ಥಳಾಂತರಿಸಿ ರುವುದಿಲ್ಲ ಎಂದು ಸೈಪುಲ್ಲಾ ದೂರಿದ್ದಾರೆ.