ಅಂತರಂಗ, ಬಹಿರಂಗ ಶುದ್ಧಿಯಿಂದ ಭಗವಂತನೊಲುಮೆ ಸಾಧ್ಯ

ಅಂತರಂಗ, ಬಹಿರಂಗ ಶುದ್ಧಿಯಿಂದ ಭಗವಂತನೊಲುಮೆ ಸಾಧ್ಯ

ಸಾಣೇಹಳ್ಳಿಯಲ್ಲಿನ ಮಕ್ಕಳ ಹಬ್ಬ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸಾಣೇಹಳ್ಳಿ, ಏ.13- ದೇವರನ್ನು ಒಲಿಸಲು ಪೂಜೆ, ಪುನಸ್ಕಾರ, ಗುಡಿಗುಂಡಾರಗಳಿಗೆ ಹೋಗುವ ಅಗತ್ಯವಿಲ್ಲ; ಬಸವಣ್ಣನವರು ಹೇಳಿದಂತೆ ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಯಾದರೆ ಸಾಕು ಎಂದು ಸಾಣೇಹಳ್ಳಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿಯ ಹುಣಸೇಮರ ಬಯಲು ರಂಗಮಂದಿರದಲ್ಲಿ ಶ್ರೀ ಶಿವಕುಮಾರ ಕಲಾಸಂಘ ಆಯೋಜಿಸಿರುವ ಮಕ್ಕಳ ಹಬ್ಬದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

ಇಂದು ಜನರಲ್ಲಿ ಅಂತರಂಗ ಮತ್ತು ಬಹಿರಂಗ ಶುದ್ಧಿಯನ್ನು ಕಾಣಲು ಸಾಧ್ಯವಿಲ್ಲದಂತಾಗಿದೆ. ವ್ಯಕ್ತಿಯ ನಡವಳಿಕೆಗಳು ಬದಲಾವಣೆಯಾದರೆ ಮಾತ್ರ ವ್ಯಕ್ತಿತ್ವ ಅರಳಲು ಸಾಧ್ಯ. ಇಂದಿನ ಮಕ್ಕಳು ಬುದ್ಧಿವಂತರಾಗಿರುವಂತೆ ತುಂಟರೂ ಹೌದು. ತುಂಟತನ ಸಕಾರಾತ್ಮಕವಾಗಿ, ಕ್ರಿಯಾಶೀಲವಾಗಿರಬೇಕೇ ಹೊರತು ಪೋಷಕರಿಗೆ, ಇತರರಿಗೆ ಹಾನಿಯನ್ನುಂಟು ಮಾಡುವಂತಿರಬಾರದು ಎಂದು ಶ್ರೀಗಳು ಹೇಳಿದರು. 

ಮಕ್ಕಳು ಹೆಚ್ಚು ಹೆಚ್ಚು ದುಶ್ಚಟಗಳ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿ. ಮುಕ್ತವಾಗಿ, ಸ್ವಚ್ಛವಾಗಿ, ಪಾರದರ್ಶಕವಾಗಿ ಬದುಕುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಜಾತಿ, ಮತ, ದೇಶ, ಭಾಷೆಗಳ ಭಿನ್ನತೆಯನ್ನು ತೊರೆದು ಪರಸ್ಪರ ಪ್ರೀತಿಸುವ ಗುಣವನ್ನು ಬೆಳೆಸುವ ಉದ್ದೇಶ ಈ ಶಿಬಿರದ್ದು. 

ಹಣ ಗಳಿಸುವುದು ಮುಖ್ಯವಲ್ಲ; ಸರಳವಾಗಿ ಬದುಕುವುದು, ಸ್ವಾವಲಂಬಿಯಾಗಿ ಬದುಕುವುದು ಬಹಳ ಮುಖ್ಯ. ಸರಳತೆ ಬದುಕಿನ ಉಸಿರಾಗಬೇಕು ಎಂದರು.      

ಮಕ್ಕಳ ಹಬ್ಬ ಶಿಬಿರವನ್ನು ಡೋಲು ಭಾರಿಸುವ ಮೂಲಕ ಉದ್ಘಾಟಿಸಿದ ನಾಟಕಕಾರ ಡಾ. ಕೆ.ವೈ. ನಾರಾಯಣಸ್ವಾಮಿ ಮಾತನಾಡಿ, ಕಳೆದ 27 ವರ್ಷಗಳಿಂದ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ `ಮಕ್ಕಳ ಹಬ್ಬ’ ಮಕ್ಕಳ ರಂಗಭೂಮಿಯನ್ನು ವಿಸ್ತಾರವಾಗಿ ಬೆಳೆಸಿದೆ. ಇದುವರೆಗೆ ಸುಮಾರು 50 ನಾಟಕಗಳನ್ನು ಪ್ರದರ್ಶಿಸಿದೆ. ಸಾವಿರಾರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಗೊಂಡಿದೆ. ಕಥೆ, ಕವನಗಳಿಲ್ಲದೆ ಮಕ್ಕಳ ಮನಸ್ಸನ್ನು ಗೆಲ್ಲುವುದು ಕಷ್ಟಕರ ಕೆಲಸ. ಕಥೆ, ಹಾಡುಗಳು ಇಲ್ಲದೇ ಇರುವ ಜೀವನದಲ್ಲಿ ಸಂತೋಷವೂ ಇರುವುದಿಲ್ಲ. ಮಕ್ಕಳಿಗೆ ಸಂತೋಷದಾಯಕ ಬಾಲ್ಯ ಸಿಗುವುದು ಪರಿಸರದೊಡನೆ ಬೆಸೆದುಕೊಂಡಾಗ ಮಾತ್ರ ಸಾಧ್ಯ ಎಂದು ಸಾರಿದವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರು. ಬಾಲ ವನ ಎನ್ನುವ ಪ್ರಾಯೋಗಿಕ ಶಾಲೆಯನ್ನು ಅವರು ತೆರೆದಿದ್ದರು. ಅದರಿಂದ ಪ್ರೇರಣೆಗೊಂಡ ಅನೇಕರು ಬೇಸಿಗೆ ಶಿಬಿರಗಳನ್ನು ಶುರು ಮಾಡಿದರು. ಆದರೆ ಅದರಲ್ಲಿ ಹಲವು ವ್ಯಾವಹಾರಿಕವಾಗಿರುವುದು ದುರದೃಷ್ಟಕರ ಸಂಗತಿ. 

ಮಕ್ಕಳು ಇಂದು ಶಾಲೆ, ಮನೆಗಳಲ್ಲಿ ಬಂಧಿಯಾಗಿದ್ದಾರೆ. ಟಿವಿ ಮೂಲಕ ಪ್ರಾಣಿಗಳನ್ನು ನೋಡುವ ದುಃಸ್ಥಿತಿ ಬಂದಿದೆ. ಪರಿಸರದ ಜೊತೆ ಸಹಜ ಅನುಭವವನ್ನು ಹೊಂದುವ ಶಿಕ್ಷಣ ನಮಗೆ ಇಂದು ಬೇಕಾಗಿದೆ. ಇದರ ಪ್ರಯೋಗವನ್ನು ಸಾಣೇಹಳ್ಳಿಯಲ್ಲಿ ಪಂಡಿತಾರಾಧ್ಯ ಶ್ರೀಗಳು ಮಕ್ಕಳ ಹಬ್ಬದ ಮೂಲಕ ನೀಡುತ್ತಿರುವುದು ಶ್ಲ್ಯಾಘನೀಯ ಸಂಗತಿ. ಚಾರ್ಲಿ ಚಾಪ್ಲಿನ್ ಮಕ್ಕಳಿಗಾಗಿ ಅನೇಕ ಸಿನೆಮಾ ಮಾಡಿದ್ದಾರೆ. ಆ ಕಾರಣಕ್ಕಾಗಿ ಅವರು ಸದಾ ಸ್ಮರಣೀಯರು. ಮಕ್ಕಳ ಬಾಲ್ಯ ಕಳೆದು ಹೋಗದಿರಲಿ ಮತ್ತು ಇದುವರೆಗೆ ಇಲ್ಲದೇ ಇರುವ ಬಾಲ್ಯ ಮತ್ತೆ ಹಿಂದಿರುಗಿ ಬರಲಿ ಎಂದು ಆಶಿಸಿದರು.

ಸಂಗೀತ ಶಿಕ್ಷಕ ಹೆಚ್.ಎಸ್. ನಾಗರಾಜ್ ವಚನಗೀತೆ ಮತ್ತು ಪ್ರೇರಣಾದಾಯಕ ಗೀತೆಗಳನ್ನು ಹಾಡಿದರು. ನಟರಾಜ್ ಹೊನ್ನವಳ್ಳಿ ಸ್ವಾಗತಿಸಿದರು. ಹೆಚ್.ಎಸ್. ದ್ಯಾಮೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಮೇಲೆ ರಂಗಶಾಲೆಯ ಪ್ರಾಚಾರ್ಯರಾದ ಶ್ವೇತಾರಾಣಿ ಇದ್ದರು.  

ಕಾರ್ಯಕ್ರಮದ ನಂತರ ಡಾ. ಕೆ.ವೈ. ನಾರಾಯಣ ಸ್ವಾಮಿ ರಚಿಸಿದ, ಶ್ವೇತಾರಾಣಿ ಮತ್ತು ವಿನೀತ್ ಕುಮಾರ್ ನಿರ್ದೇಶಿಸಿದ, ರಂಗಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ಅಕ್ಕಮಹಾದೇವಿ ಕುರಿತ `ನೀವು ಕಾಣಿರೇ’ ನಾಟಕ ಪ್ರದರ್ಶನಗೊಂಡಿತು.

error: Content is protected !!