ನಾಗರಿಕರ ಸೌಹಾರ್ದ ಸಭೆಯಲ್ಲಿ ಎಸ್ಪಿ ಹನುಮಂತರಾಯ ಕರೆ
ದಾವಣಗೆರೆ, ಜು. 28 – ಕೊರೊನಾ ಈಗಾಗಲೇ ಉಲ್ಬಣಿಸುತ್ತಿದ್ದು, ಮುಂಬರುವ ದಿನಗಳು ಇನ್ನೂ ಕಠೋರವಾಗಿರಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಗಳ ಅನ್ವಯವೇ ಸಾಮಾಜಿಕ ಅಂತರದಲ್ಲಿ ಬಕ್ರೀದ್ ಆಚರಣೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸೂಚನೆ ನೀಡಿದ್ದಾರೆ.
ತಮ್ಮ ಕಚೇರಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ನಾಗರಿಕರ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ವೈದ್ಯರಲ್ಲೇ ಈಗ ಸೋಂಕು ಕಾಣಿಸಿಕೊಂಡಿದೆ. ಎಲ್ಲ ಕಡೆಗಳಲ್ಲೂ ಕೊರೊನಾ ಹರಡಿರುವುದರಿಂದ ಹೊರಗಿನಿಂದಲೂ ವೈದ್ಯರನ್ನು ಕರೆಸಲಾಗದು. ಹೀಗಿರುವಾಗ ಕೊರೊನಾಗೆ ಚಿಕಿತ್ಸೆ ನೀಡುವುದು ಹೇಗೆ? ಎಂಬ ಗಂಭೀರ ಪ್ರಶ್ನೆ ಮುಂದಿಟ್ಟ ಎಸ್ಪಿ, ಸೋಂಕಿನ ತೀವ್ರತೆಯನ್ನು ಸರಿಯಾಗಿ ಅರಿತುಕೊಳ್ಳಬೇಕಿದೆ ಎಂದರು. ಬಕ್ರೀದ್ ಅನ್ನು ಶಾಂತಿಯುತವಾಗಿ ಆಚರಿಸಬೇಕು ಹಾಗೂ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು. ಇತ್ತೀಚೆಗಷ್ಟೇ ಗ್ರಾಮಾಂತರದಲ್ಲಿ ಏಳು ಹಸುಗಳ ಕಳ್ಳಸಾಗಣೆ ಮಾಡುತ್ತಿದ್ದುದು ಪತ್ತೆಯಾಗಿದೆ. ಇಂತಹ ಪ್ರಕರಣಗಳನ್ನು ತಡೆಯಲು 20 ಚೆಕ್ಪೋಸ್ಟ್ಗಳನ್ನು ರೂಪಿಸಲಾಗುವುದು ಎಂದವರು ತಿಳಿಸಿದರು.
ಸರ್ಕಾರದ ಆದೇಶದ ಅನ್ವಯ ಒಂಟೆ ಮಾಂಸ ಸಹ ನಿಷೇಧಿಸಲಾಗಿದೆ. ಈ ಎಲ್ಲ ಕ್ರಮಗಳಿಗೆ ಸಹಕಾರ ಬೇಕು ಎಂದವರು ಮನವಿ ಮಾಡಿಕೊಂಡಿದ್ದಾರೆ.
ಬಕ್ರೀದ್ಗೆ ಸರ್ಕಾರದ ನಿರ್ಬಂಧಗಳು : ಸಾಮೂಹಿಕ ಪ್ರಾರ್ಥನೆಗಳನ್ನು ಈದ್ಗಾಗಳಲ್ಲಿ ನಡೆಸುವಂತಿಲ್ಲ. ಮಸೀದಿಗಳಲ್ಲಿ ಒಂದು ಬ್ಯಾಚ್ನಲ್ಲಿ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ. ಮಸೀದಿ ಹೊರತು ಪಡಿಸಿ ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರೆ ತೆರೆದ ಜಾಗಗಳಲ್ಲಿ ಸಾಮೂಹಿಕ ಪ್ರಾರ್ಥನೆ ಆಯೋಜಿಸುವಂತಿಲ್ಲ. ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ. 10ಕ್ಕಿಂತ ಕಡಿಮೆ ಹಾಗೂ 60ಕ್ಕಿಂತ ಹೆಚ್ಚಿನ ವಯಸ್ಸಿನವರು ಮನೆಯಲ್ಲೇ ಪ್ರಾರ್ಥಿಸಬೇಕು. ನಮಾಜ್ ಸಂದರ್ಭದಲ್ಲಿ ಕನಿಷ್ಠ 6 ಅಡಿ ಅಂತರ ಇರಬೇಕು. ಮಸೀದಿ ಪ್ರವೇಶಕ್ಕೆ ಮುಂಚೆ ದೇಹದ ತಾಪಮಾನ ತಪಾಸಣೆ. ಸೋಪು ಇಲ್ಲವೇ ಸ್ಯಾನಿಟೈಜರ್ ಮೂಲಕ ಕೈಗಳ ಸ್ವಚ್ಛತೆ. ಮಸೀದಿ ಗಳಲ್ಲಿರುವ ಧಾರ್ಮಿಕ ಗ್ರಂಥಗಳನ್ನು ಮುಟ್ಟುವಂತಿಲ್ಲ. ಮನೆಗಳಿಂದ ಮಸಲ್ಲಾವನ್ನು (ಜಾಯನಮಾಜ್) ಕಡ್ಡಾಯವಾಗಿ ತರುವುದು. ಹಸ್ತಲಾಘವ ಮತ್ತು ಆಲಿಂಗನ ಮಾಡದಿರಲು ಸೂಚಿಸುವುದು. ಅಪರಿಚಿತರು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಬಂದಲ್ಲಿ ವಿಶೇಷ ಗಮನ ಹರಿಸುವುದು.
ಸರ್ಕಾರ ಬಕ್ರೀದ್ಗೆ ವಿಧಿಸಿರುವ ನಿರ್ಬಂಧಗಳನ್ನು ಮೌಲ್ವಿಗಳ ಮೂಲಕ ವಿಡಿಯೋ ಮಾಡಿಸಿ ಸಮುದಾಯಕ್ಕೆ ತಲುಪಿಸಬೇಕೆಂದು ಇದೇ ಸಂದರ್ಭದಲ್ಲಿ ಸೂಚಿಸಿದ ಎಸ್ಪಿ, ಮಸೀದಿಗಳಿಂದ ಸಾಮಾಜಿಕ ಅಂತರಕ್ಕಾಗಿ ಸ್ವಯಂ ಸೇವಕರನ್ನು ನೇಮಿಸುವಂತೆ ತಿಳಿಸಿದರು.
ಇದಕ್ಕೂ ಮುಂಚೆ ಮಾತನಾಡಿದ ಮುಸ್ಲಿಮ್ ಸಮಾಜದ ಮುಖಂಡರಾದ ಸಾಧಿಕ್ ಪೈಲ್ವಾನ್, ರಂಜಾನ್ ಸಮಯದಲ್ಲಿ ಶೇ.85ರಷ್ಟು ಜನರು ಮನೆಯಲ್ಲೇ ನಮಾಜ್ ಮಾಡಿದ್ದರು. ಅದೇ ರೀತಿ ಈ ಬಾರಿಯೂ ಬಕ್ರೀದ್ ಹಬ್ಬದ ಆಚರಣೆಗೆ ಸಹಕರಿಸುತ್ತೇವೆ ಎಂದು ಹೇಳಿದರು.
ಮುಖಂಡರಾದ ರಜವಿ ಖಾನ್ ಮಾತನಾಡಿ, ಸಂಪ್ರದಾಯ ಹಾಗೂ ಸಂವಿಧಾನ ಎರಡರ ಉಲ್ಲಂಘನೆಯಾಗದ ರೀತಿಯಲ್ಲಿ ಹಬ್ಬದ ಆಚರಣೆ ಮಾಡಬೇಕಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಅಮಾನುಲ್ಲಾ ಖಾನ್ ಮಾತನಾಡಿ, ಕೊರೊನಾ ಈಗ ಸಮುದಾಯ ಹಂತಕ್ಕೆ ಕಾಲಿಟ್ಟಿದ್ದು, ನಮ್ಮ ಜೀವ ನಮ್ಮ ಕೈಯಲ್ಲಿದೆ. ಸರ್ಕಾರ ನಿಯಮ ರೂಪಿಸಿದೆ ಎಂಬುದಕ್ಕಿಂತ ಹೆಚ್ಚಾಗಿ ನಮ್ಮ ಸುರಕ್ಷತೆಗಾಗಿ ಅಂತರ ಕಾಯ್ದುಕೊಳ್ಳಬೇಕಿದೆ ಎಂದರು.
ಕಮ್ಯುನಿಸ್ಟ್ ಮುಖಂಡ ಆವರಗೆರೆ ಉಮೇಶ್ ಮಾತನಾಡಿ, ಸರ್ಕಾರ ಹಲವು ವರ್ಗದವರಿಗೆ ಸಹಾಯ ಧನ ನೀಡಿದೆ. ಅದೇ ರೀತಿ ಮಂಡಕ್ಕಿ ಭಟ್ಟಿ ಕಾರ್ಮಿಕರು, ವರ್ಕ್ಶಾಪ್ಗಳಲ್ಲಿ ಕೆಲಸ ಮಾಡುವವರು ಹಾಗೂ ಸೊಪ್ಪು ಮಾರುವವರು ಮತ್ತಿತರೆ ಬಡವರಿಗೆ ನೆರವು ಕಲ್ಪಿಸಬೇಕೆಂದು ಹೇಳಿದರು.
ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಸಿರಾಜ್ ಮಹಮ್ಮದ್ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಮೂರು ದಿನಗಳ ಕಾಲ ಮಸೀದಿಯ ಸುತ್ತ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ವೇದಿಕೆ ಮೇಲೆ ಎ.ಎಸ್.ಪಿ. ರಾಜೀವ್ ಉಪಸ್ಥಿತರಿದ್ದರು.