ದಿನಸಿಗೂ ಬಿದ್ದ ಲಾಕ್‌ಡೌನ್‌ ಬರೆ

ಜಿಲ್ಲೆಗೊಂದು ನಿರ್ಬಂಧದಿಂದಾಗಿ ಜನರಿಗೆ ತಲೆನೋವು

ದಾವಣಗೆರೆ, ಮೇ 27 – ಕೊರೊನಾ ಮೊದಲ ಅಲೆಯಲ್ಲಿ ದೇಶಾದ್ಯಂತ ಏಕರೂಪದ ಲಾಕ್‌ಡೌನ್‌ ಇದ್ದರೆ, ಎರಡನೇ ಅಲೆಯಲ್ಲಿ ರಾಜ್ಯಕ್ಕೊಂದು – ಜಿಲ್ಲೆಗೊಂದು ರೀತಿಯ ಲಾಕ್‌ಡೌನ್‌ ವ್ಯವಸ್ಥೆಯಾಗಿ ತಲೆನೋವು ಶುರುವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲಾಕ್‌ಡೌನ್‌ ಬಗ್ಗೆ ಹೆಚ್ಚು ಆಸಕ್ತಿ ತೋರಿಲ್ಲ. ಆದರೆ, ತಜ್ಞ ಪರಿಣಿತರ ಸಲಹೆ ಮೇರೆಗೆ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್‌ಡೌನ್‌ಗೆ ಮೊರೆ ಹೋಗಿದ್ದಾರೆ. ಮುಂದುವರೆದ ಭಾಗವಾಗಿ ಪ್ರಧಾನ ಮಂತ್ರಿಯಿಂದ ಕೊರೊನಾ ಕಮಾಂಡರ್‌ಗಳೆಂದು ಬೆನ್ನು ತಟ್ಟಿಸಿಕೊಂಡಿರುವ ಜಿಲ್ಲಾಡಳಿತದ ರೂವಾರಿಗಳು ತಮಗೆ ಸರಿ ಎನಿಸಿದ ರೀತಿಯಲ್ಲಿ ಲಾಕ್‌ಡೌನ್‌ ಪರಿವರ್ತಿಸಿಕೊಂಡಿದ್ದಾರೆ.

ಸಮಸ್ಯೆಯ ಮೂಲ ಇಲ್ಲೇ ಆರಂಭವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿದಿನ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಿ ಎಂದು ಹೇಳಿದ್ದಾರೆ. ಜಿಲ್ಲಾಡಳಿತಗಳು ತಮಗೆ ತಿಳಿದ ರೀತಿಯಲ್ಲಿ ಕೆಲವರು ವಾರಕ್ಕೆ ಎರಡು ದಿನ ಖರೀದಿ ಎಂದರೆ, ಇನ್ನು ಕೆಲವರು ನಾಲ್ಕು ದಿನ, ಮತ್ತೊಬ್ಬರು ವಾರಕ್ಕೊಂದು ದಿನ… ಹೀಗೆ ನಿಯಮಗಳನ್ನು ಬದಲಿಸಿಕೊಂಡಿದ್ದಾರೆ.

ದಾವಣಗೆರೆಯಲ್ಲಿ ಕಳೆದ ಮೇ 21ರಿಂದ ಮೂರು ದಿನ ಸಂಪೂರ್ಣ ಲಾಕ್‌ಡೌನ್‌ ಇತ್ತು. ನಂತರ ಮೇ 24ರಿಂದ 31ರವರೆಗೆ ಸಂಪೂರ್ಣ ಲಾಕ್‌ಡೌನ್‌ ಎನ್ನಲಾಯಿತು. ಇದರ ನಡುವೆ ಸೋಮವಾರ ಬೆಳಿಗ್ಗೆ 4 ಗಂಟೆ ಮಾತ್ರ ದಿನಸಿ ಇತ್ಯಾದಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ದೊರೆತಿತ್ತು.

ಈ ನಡುವೆ, ಸುಮಾರು 11 ದಿನಗಳ ಅಂತರದಲ್ಲಿ ದಿನಸಿ ಅಂಗಡಿಗಳಲ್ಲಿರುವ ದಾಸ್ತಾನು ದೊಡ್ಡ ಪ್ರಮಾಣದಲ್ಲಿ ಕರಗುತ್ತಿದೆ. ಹೊಸ ದಾಸ್ತಾನು ಖರೀದಿಗೆ ಅವಕಾಶ ಇಲ್ಲ ದಂತಾಗಿದೆ. ಕಳೆದ ಸೋಮವಾರದಂದು ನಾಲ್ಕು ಗಂಟೆಗಳ ಲಾಕ್‌ಡೌನ್‌ ಬಿಡುವಿನ ವೇಳೆ ಅತ್ತ ಅಂಗಡಿಯಲ್ಲಿ ಸರಕು ಮಾರಬೇಕೋ, ಇತ್ತ ಅಂಗಡಿಗೆ ಅಗತ್ಯ ಸರಕು ತರಬೇಕೋ ಎಂಬ ಒತ್ತಡದಲ್ಲೇ ಸಮಯ ಕಳೆಯಿತು.

ಸೋಮವಾರದ ನಂತರ ಮುಂದೇನು ಪರಿಸ್ಥಿತಿ ಎಂಬ ಬಗ್ಗೆಯೂ ಅತಂತ್ರವೇ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎರಡು  ದಿನ ಮೊದಲೇ ಲಾಕ್‌ಡೌನ್‌ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ್ದರು. ಆದರೆ, ಜಿಲ್ಲಾಡಳಿತ ಹಿಂದಿನ ದಿನ ಘೋಷಣೆ ಮಾಡುವ ಪರಿಪಾಠ ಬೆಳೆಸಿಕೊಂಡಿರುವುದರಿಂದ ಜನ ತಲೆ ಕೆಡಿಸಿಕೊಳ್ಳುವ ಪರಿಸ್ಥಿತಿ ಬಂದಿದೆ.

ಅತ್ತ ಮಾರುಕಟ್ಟೆಯಲ್ಲಿ ಜನಸಂದಣಿ ನಿಯಂತ್ರಿಸಲು ರಸ್ತೆಗಳು ಮನಸೋಇಚ್ಛೆ ಬ್ಯಾರಿಕೇಡ್‌ಗಳಿಂದ ಬಂದ್ ಮಾಡಲಾಗಿದೆ. ಸರಕು ತರಲು ಹೋದ ಅಂಗಡಿಯವರಿಗೆ ಚಕ್ರವ್ಯೂಹದಲ್ಲಿ ಸಿಲುಕಿದ ಭಾವನೆ. ಬ್ಯಾರಿಕೇಡ್‌ ಕಾರಣದಿಂದ ಜನ ಸಂಚಾರಕ್ಕೆ ಅಡ್ಡಿ. ಹಲವು ದಿನಗಳ ಸರಕು ಒಮ್ಮೆಲೇ ಖರೀದಿಸಲು ಜನರ ನೂಕು ನುಗ್ಗಲು. ಜನಸಂದಣಿ ನಿಯಂತ್ರಿಸಲು ಸಗಟು ಅಂಗಡಿ ಮಾಲೀಕರ ಪರದಾಟ, ಇದೆಲ್ಲವೂ ಕಳೆದ ಸೋಮವಾರದ ದೃಶ್ಯಗಳು.

ಮುಂದಿನ ವಾರದ ಪರಿಸ್ಥಿತಿ ಏನಾಗಲಿದೆಯೋ ಗೊತ್ತಿಲ್ಲ. ಮತ್ತೆ ನಾಲ್ಕು ತಾಸು ಗಡುವು ಕೊಟ್ಟು ಇಡೀ ವಾರದ ಖರೀದಿ ಮಾಡಿ ಎಂದು ಹೇಳಿದರೆ ಪರಿಸ್ಥಿತಿ ಸಂಕಷ್ಟವಾಗಲಿದೆ. ಮನೆ ಹತ್ತಿರದ ಸಣ್ಣ ದಿನಸಿ ಅಂಗಡಿಗಳು ಸರಕು ಖಾಲಿ ಮಾಡಿಕೊಂಡಿವೆ. ಹೊಸ ಸರಕು ಖರೀದಿಗೆ ಕೊಡುವ ನಾಲ್ಕು ಗಂಟೆ ಅವಧಿ ಸಾಲದು.

ದಿನಸಿ ಸಿಗುತ್ತಾ ದಿನಸಿ… ಎಂದು ಜನರು ಈಗಾಗಲೇ ಅಲೆಯುವ ಪರಿಸ್ಥಿತಿ ಉಂಟಾಗಿದೆ. ಸರದಿಯಲ್ಲಿ ನಿಂತರೂ ಲಸಿಕೆ ಕೊಡದ ಸರ್ಕಾರ ಒಂದೆಡೆಯಾದರೆ, ದುಡ್ಡಿದ್ದರೂ ದಿನಸಿ ಸಿಗದ ಪರಿಸ್ಥಿತಿ ಆಗುವ ಚಿಂತೆ ಕೆಲವರಿಗೆ ಕಾಡುತ್ತಿದೆ. ಮುಂದಿನ ವಾರವೂ ದಿನಸಿ ಖರೀದಿಗೆ ಜನರಿಗೆ ಅವಕಾಶ ಕೊಡದೇ ಹೋದರೆ ಜನರು ಅನಿವಾರ್ಯವಾಗಿ ಊಟಕ್ಕಾಗಿ ಇಂದಿರಾ ಕ್ಯಾಂಟೀನ್‌ ಮುಂದೆ ಸಾಲುಗಟ್ಟಿ ನಿಲ್ಲಬೇಕಾಗುತ್ತದೋ ಏನೋ?

error: Content is protected !!