ಜಿಲ್ಲಾಸ್ಪತ್ರೆ ಆವರಣದಲ್ಲಿ ಪಾಲಿಕೆಯಿಂದ ಕುಟೀರ

ರೋಗಿಗಳ ಜೊತೆ ಬಂದವರಿಗೆ ರಾತ್ರಿ ತಂಗಲು ಸೂಕ್ತ ವ್ಯವಸ್ಥೆ

ದಾವಣಗೆರೆ, ಮೇ 26- ಇಲ್ಲಿನ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಜೊತೆ ಬಂದವರು ತಂಗಲು ಮಹಾನಗರ ಪಾಲಿಕೆ ವತಿಯಿಂದ ಕುಟೀರದ ವ್ಯವಸ್ಥೆ ಕಲ್ಪಿಸಲಾಗಿದೆ.

ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ನೋಡಿಕೊಳ್ಳಲು ಬರುವ  ಸ್ನೇಹಿತರು ಸಂಬಂಧಿಕರು ರಾತ್ರಿ ಆಸ್ಪತ್ರೆ ಆವರಣದಲ್ಲಿಯೇ ಮಲಗುತ್ತಿದ್ದುದನ್ನು ಗಮನಿಸಿದ್ದ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಅವರಿಗಾಗಿ ಸೂಕ್ತ ವ್ಯವಸ್ಥೆಯೊಂದನ್ನು ಏಕೆ ಕಲ್ಪಿಸಬಾರದು ಎಂದು ಆಲೋಚಿಸಿ, ಆಯುಕ್ತರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತಂದಿದ್ದಾರೆ.

ಈ ಕುರಿತು `ಜನತಾವಾಣಿ’ಯೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಮೇಯರ್ ಅವರ ಆಶಯದಂತೆ ಆಸ್ಪತ್ರೆ ಆವರಣದಲ್ಲಿ ಶಾಮಿಯಾನ ಹಾಕಲಾಗಿದೆ. ಇದು ಶೀಟ್ ಶಾಮಿಯಾನವಾಗಿದ್ದು, ಮಳೆ ನೀರು ಬೀಳದಂತೆ ತಡೆಯಲಿದೆ. ನೆಲದ ಮೇಲೆ ಡಯಾಜ್ ಹಾಕಿ ಕೆಂಪು ಕಾರ್ಪೆಟ್ ಹಾಕಲಾಗಿದೆ. ಸುಮಾರು 70 ಜನರು ಇಲ್ಲಿ ಮಲಗಬಹುದಾಗಿದೆ. ಈಗಾಗಲೇ 35-40ಜನ ರಾತ್ರಿ ಇಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅವರಿಗೆ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಹೇಳಿದರು.

ವಯಸ್ಸಾದ ಕೆಲವರು ನಮಗೆ ಮೇಲೆ ಮಲಗಲು ಸಾಧ್ಯವಿಲ್ಲ ಎಂದ ಕಾರಣಕ್ಕಾಗಿ ನೆಲದ ಮೇಲೆಯೂ ಕೆಂಪು ಕಾರ್ಪೆಟ್ ಹಾಸಿ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಜೊತೆ ಬಂದವರಿಗೆ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡುವ ಚಿಂತನೆ ನಡೆದಿದ್ದು, ಆದರೆ ಅದು ದೂರವಾಗುತ್ತದೆ ಮತ್ತು ಅವರು ಎಲ್ಲೆಂದರಲ್ಲಿ ಸುತ್ತಾಡುವ ಸಂಭವ ಹೆಚ್ಚು ಎಂದು ಆಸ್ಪತ್ರೆ ಆವರಣದಲ್ಲಿಯೇ ಇಂತಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

error: Content is protected !!