ವೈಯಕ್ತಿಕ ನಿಂದನೆಗಳಿಗೆ ಸಕಾಲವಲ್ಲ

ವೈಯಕ್ತಿಕ ನಿಂದನೆಗಳಿಗೆ ಸಕಾಲವಲ್ಲ - Janathavaniದಾವಣಗೆರೆ, ಮೇ 23- ಜಿಲ್ಲೆಯಲ್ಲಿ ಕೊರೊನಾ ಉಲ್ಬಣದ ಸಮಯದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಇಬ್ಬರೂ ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡುವುದಕ್ಕೆ ಇದು ಸುಸಂದರ್ಭವಲ್ಲ. ಮೂರನೇ ವ್ಯಕ್ತಿಗೆ ಅವಕಾಶ ಕೊಡದೇ ಜನಸೇವೆಗೆ ಮುಂದಾಗಬೇಕು ಎಂದು ಜೆಡಿಎಸ್ ಮುಖಂಡ ಕಲ್ಲೇರುದ್ರೇಶ್ ತಿಳಿಸಿದರು. 

ಜಿಲ್ಲೆಯಲ್ಲಿ, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕೋವಿಡ್ ಹೆಚ್ಚಾಗಿ ಹರಡಿ ಉಲ್ಬಣಗೊಳುತ್ತಿದೆ. ಬ್ಲ್ಯಾಕ್ ಮತ್ತು ವೈಟ್ ಫಂಗಸ್‍ನಂತಹ ರೋಗಗಳು ಬಾಧಿಸತೊಡಗಿವೆ. ಇವುಗಳೆಲ್ಲದರ ನಡುವೆ ಮೂರನೇ ಅಲೆಯ ವಿಚಾರವೂ ಆತಂಕ ಉಂಟು ಮಾಡಿದೆ. ಹೀಗಿರುವಾಗ ಈ ಇಬ್ಬರೂ ನಾಯಕರು ಪರಸ್ಪರ ಒಬ್ಬರಿಗೊಬ್ಬರು ಆರೋಪ ಮಾಡಿಕೊಳ್ಳುತ್ತಿರುವುದು ಜಿಲ್ಲೆಗೆ ಶ್ರೇಯಸ್ಕರವಲ್ಲ. ಜಿಲ್ಲಾ ಮಟ್ಟದ ಅಧಿಕಾರಿ ಗಳಲ್ಲಿ ಕೋವಿಡ್ ನಿರ್ವಹಣೆ ವಿಚಾರದಲ್ಲಿ ಸೋಮಾರಿತನ, ಜಿಗುಪ್ಸೆ ಹೆಚ್ಚಾಗಲು ಕಾರಣವಾಗುತ್ತದೆ. ಇದರಿಂದ ಕೊರೊನಾ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಅಸಾಧ್ಯ ಎಂದು ಪತ್ರಿಕಾಗೋಷ್ಠಿಯಲ್ಲಿ ಕಿವಿಮಾತು ಹೇಳಿದರು. 

ಈ ಇಬ್ಬರು ನಾಯಕರು ತಮ್ಮ ಹಿಂಬಾಲಕರ ವೈಯಕ್ತಿಕ ಅಭಿಪ್ರಾಯಗಳಿಂದ ಕಿವಿ ಕಚ್ಚುವಿಕೆಗೆ ಮನ್ನಣೆ ಕೊಟ್ಟರೆ ಅದು ಜಿಲ್ಲೆಯ ಜನರಿಗೆ ತೊಂದರೆ, ನೋವು ಉಂಟಾಗಿ ಶಾಪವಾಗಿ ತಟ್ಟಲಿದೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರು ತಮ್ಮ ಶಕ್ತಿಗೆ ಅನುಗುಣವಾಗಿ ದೆಹಲಿ ಮಟ್ಟದಲ್ಲಿ ಜಿಲ್ಲೆಗೆ ಅವಶ್ಯಕವಾಗಿರುವ ಆಕ್ಸಿಜನ್, ರೆಮ್‍ಡಿಸಿವಿರ್, ಕೋವಿಡ್ ನಿಯಂತ್ರಣಕ್ಕೆ ತಕ್ಕಂತಹ ವ್ಯಾಕ್ಸಿನ್ ತರುವಲ್ಲಿ ಪ್ರಯತ್ನ ಮಾಡಬೇಕು. ಅಲ್ಲದೇ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ತಮ್ಮ ಪ್ರಭಾವವನ್ನು ಹೊಂದಿ ರಾಜ್ಯಮಟ್ಟದಲ್ಲಿ ಜಿಲ್ಲೆಯಲ್ಲಿ ಆಗಬೇಕಾದ ಕೆಲಸಕ್ಕೆ ಮುಂದಾಗಬೇಕು. ಈ ಇಬ್ಬರು ನಾಯಕರು ಸ್ಥಿತಿವಂತರಿದ್ದು, ಆರೋಪಗಳ ಬಿಟ್ಟು ಮನಸ್ಸು ಪೂರಕವಾಗಿ ಕೆಲಸ ಮಾಡಿ ಹೆಚ್ಚು ಜನಸೇವೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. 

ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ನರ್ಸ್, ಡಿ ಗ್ರೂಪ್ ನೌಕರರು ಸಂಕಷ್ಟದಲ್ಲಿ ಕೋವಿಡ್ ವಾರಿಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಎಷ್ಟು ಕೃತಜ್ಞತೆ ಅರ್ಪಿಸಿದರೂ ಸಾಲದು. ಅದರಲ್ಲೂ ಸರ್ಕಾರಿ ನೌಕರರು ತಮ್ಮ ಸೇವೆಗೆ ಇದೊಂದು ಉತ್ತಮ ಅವಕಾಶ ಸಿಕ್ಕಿದಂತೆ ಆಗಿದೆ. ಇಲ್ಲಿನ ಗಾಳಿ, ಭೂಮಿಯ ಋಣ ತೀರಿಸಬೇಕಿದೆ. ಹೀಗಾಗಿ, ಅವರು ತಮ್ಮ ಕೆಲಸವನ್ನು ಲೋಪವಿಲ್ಲದೇ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

error: Content is protected !!