ದಾವಣಗೆರೆ, ಫೆ.24- ಸಾಹಿತ್ಯ-ಸಂಗೀತ ಎರಡೂ ಗಂಡ ಹೆಂಡತಿ ಇದ್ದಂತೆ. ಒಂದು ಬಿಟ್ಟು ಇನ್ನೊಂದು ಇರುವ ಹಾಗಿಲ್ಲ. ಸಂಗೀತ ಕೇಳಬೇಕೆಂದರೆ ಸಾಹಿತ್ಯ ಇರಲೇಬೇಕು. ಸಂಗೀತದ ಜೀವಾಳ ಪ್ರಾಣವಾಯು ಸಾಹಿತ್ಯ. ಸಾಹಿತ್ಯದೊಂದಿಗೆ ಬೆರೆತು ಕೇಳುಗರ ಮನಸ್ಸು ಅರಳುವಂತೆ ಹೃದಯ ತೆರೆಯುವಂತೆ ಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ಗ್ರಂಥ ಸರಸ್ವತಿ ಪ್ರತಿಭಾರಂಗವು ಕನ್ನಡ ಕಬ್ಬ ಉಗಾದಿಹಬ್ಬ ಕಾರ್ಯಕ್ರಮದಡಿ ಮೊನ್ನೆ ನಡೆಸಿದ ಕಬ್ಬಿಗರ ಕಬ್ಬದೂಟ, ಸುಗಮ ಸಂಗೀತ ಹಾಗೂ ನಾಟಕ ಪ್ರದರ್ಶನ ಸಮಾಗಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಸಂಗೀತದ ಮೂಲಕ ಅಂತರಂಗವನ್ನು ಭೇದಿಸಿ ಅಲ್ಲಿ ಬೆಳಕನ್ನು ಚೆಲ್ಲುವಂತ ಶಕ್ತಿ ಸಾಹಿತ್ಯಕ್ಕೆ ಬರಬೇಕಾದರೆ ಸಾಹಿತ್ಯಕ್ಕೆ ತನ್ನದೇ ಆದ ಮಹತ್ವ, ಶಕ್ತಿ ಹಾಗೂ ನಿಜವಾದ ಅಂತರಂಗದ ಸತ್ವವನ್ನು ಪಡೆದುಕೊಂಡಿರಬೇಕಾಗುತ್ತದೆ ಎಂದರು.
ಸ್ಥಳೀಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಗಂಗಾಧರಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಜೀವನಾನು ಭವಗಳ ರಾಶಿ. ಕಾವ್ಯವನ್ನು ಬಿಚ್ಚುತ್ತಾ ಹೋದಂತೆ ಮನಸ್ಸಿಗೆ ಮುದ ನೀಡುತ್ತಾ ಹೋಗುತ್ತದೆ. ಸಾಹಿತ್ಯವೆಂದರೆ ಅರ್ಥಪೂರ್ಣ. ಹಾಗೂ ಸಂಕೀರ್ಣ ಮಾನವಾನುಭವಗಳ ಸಫಲ ಅಭಿವ್ಯಕ್ತಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಂಥ ಸರಸ್ವತಿ ಪ್ರತಿಭಾರಂಗದ ಅಧ್ಯಕ್ಷ ಆರ್. ಶಿವಕುಮಾರಸ್ವಾಮಿ ಕುರ್ಕಿ ಮಾತನಾಡಿ, ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧಿಸುತ್ತಿದ್ದು, ಅಧ್ಯಕ್ಷನಾದಲ್ಲಿ ಕಸಾಪ ಘಟಕಗಳನ್ನು ಪ್ರತಿ ಹೋಬಳಿ ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸ್ಥಾಪಿಸಿ, ಅಧಿಕಾರ ವಿಕೇಂದ್ರೀಕರಣಗೊಳಿಸಿ, ಸಕಲರಿಗೂ ನಾಡು – ನುಡಿ ಸೇವೆ ಮಾಡುವ ಭಾಗ್ಯ ಒದಗುವಂತೆ ಮಾಡುವುದಾಗಿ ತಿಳಿಸಿದರು.
ಕಬ್ಬಿಗರ ಕಬ್ಬದೂಟದಲ್ಲಿ ಕವಯಿತ್ರಿಗಳಾದ ಸುನೀತಾ ರಾಜು, ಎಂ.ಎಂ. ಭೂಮಿಕಾ, ಅನ್ನಪೂರ್ಣ ಪಾಟೀಲ್, ಸುನೀತಾ ಪ್ರಕಾಶ್, ನಾಗರತ್ನಮ್ಮ , ಸೀತಾ ನಾರಾಯಣ, ಕವಿಗಳಾದ ಮಳಲ್ಕೆರೆ ಗುರುಮೂರ್ತಿ, ಡಾ. ಮಹಾಂತೇಶ್ ಪಾಟೀಲ್, ಸಿದ್ಧಲಿಂಗಪ್ಪ, ಗಂಗಾಧರ ನಿಟ್ಟೂರು, ಪಾಪು ಗುರು, ಎಂ. ಅಬ್ದುಲ್ ವಾಹಿದ್, ಆದಂ, ಭೀಮೇಶ್ವರ, ಶಿವರಾಜ, ರಾಜೇಂದ್ರ ಪ್ರಸಾದ ನೀಲಗುಂದ, ನಾಗರಾಜಪ್ಪ ಅರ್ಕಾಚಾರ್, ವಸುಪಾಲಪ್ಪ ಸ್ವರಚಿತ ಕವನಗಳ ವಾಚನ ಮಾಡಿದರು.
ಹಾಡುಗಾರ್ತಿ ಸಂಗೀತಾ ಬಿ. ಹಿರೇಮಠ ಅವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಂಗಚೇತನ ಕಲಾಸಂಘದ ವೃತ್ತಿರಂಗ ಭೂಮಿಯ ಹಿರಿಯ ಕಲಾವಿದರಿಂದ ಮಾರುತೇಶ ಮಾಂಡ್ರೆ ರಚಿಸಿರುವ ತವರುಮನೆ ಸಾಮಾಜಿಕ ನಾಟಕವನ್ನು ಕೆ. ವೀರಯ್ಯಸ್ವಾಮಿ ನಿರ್ದೇಶನದಲ್ಲಿ ಅಭಿನಯಿಸಿ, ಪ್ರೇಕ್ಷಕರ ಮನಸೂರೆಗೊಂಡರು. ಅನ್ನಪೂರ್ಣ ಪಾಟೀಲರು ನಿರೂಪಿಸಿದರು.