ಹಾಲಮ್ಮ ದೇವಿ ಜಾತ್ರೆ : ವನದೇವಿಗೆ 12 ಕೆ.ಜಿ. ಬೆಳ್ಳಿ ಅರ್ಪಿಸಲು ಭಕ್ತರ ಸಿದ್ದತೆ

ಹರಪನಹಳ್ಳಿ, ಫೆ. 22- ತಾಲ್ಲೂಕಿನ ಐತಿಹಾಸಿಕ ಶಕ್ತಿ ಸ್ಥಳ ಉಚ್ಚಂಗಿದುರ್ಗದ ಕೆಳ ಭಾಗದ ವಿಶಾಲವಾದ ಪ್ರದೇಶದಲ್ಲಿ ಹರಡಿ ಕೊಂಡಿರುವ ವನದೇವತೆ ಶ್ರೀ ತೋಪಿನ ಹಾಲಮ್ಮ ದೇವಿಯ ಜಾತ್ರಾ ಮಹೋತ್ಸವ ಬರುವ ಏಪ್ರಿಲ್ 1ರಂದು ಆರಂಭವಾಗಲಿದ್ದು, ಭರದ ಸಿದ್ದತೆಗಳು ನಡೆಯುತ್ತಿವೆ.

ಮುಖ್ಯರಸ್ತೆ ಹಾಗೂ ದುರ್ಗದ ಹಾದಿಗಳೆರಡನ್ನೂ ಕಾಂಕ್ರೀಟ್ ರಸ್ತೆಗಳನ್ನಾಗಿಸುತ್ತಿದ್ದು, ಬಸ್ ನಿಲ್ದಾಣ ಮತ್ತು ರಾಜಬೀದಿಯ ಆರಂಭದಲ್ಲಿ ಆಕರ್ಷಕ ಸ್ವಾಗತ ಫಲಕ ನಿರ್ಮಿಸುವ ಕಾರ್ಯ ತೀವ್ರ ಗತಿಯಲ್ಲಿ ಸಾಗಿದೆ. ಜಗಳೂರು ಶಾಸಕ ರಾಮಚಂದ್ರಪ್ಪ ಅವರು ಹೆಚ್ಚಿನ ಆಸಕ್ತಿ ವಹಿಸಿದ್ದು, ತಮ್ಮ ಶಾಸಕರ ಅನುದಾನದಲ್ಲಿ ಮೂರು ಕೋಟಿಗೂ ಹೆಚ್ಚಿನ ಹಣ ಬಿಡುಗಡೆ ಮಾಡಿಸಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯ ಕೆಂಚಪ್ಪ ವಿವರಿಸಿದರು.

ದಾವಣಗೆರೆ ನಗರಸಭಾ ವ್ಯಾಯಾಮ ಶಾಲೆಯ ತರಬೇತುದಾರ,  ಹಿರಿಯ ಕೋಚ್ ಎಂ.ದುಗ್ಗಪ್ಪ ಅವರು ಮಾತನಾಡಿ, ದೇವಿಯ ಮುಖ ಕವಚ ಸೇರಿದಂತೆ ಆಭರಣಗಳು ಹಾಗೂ ಪೂಜಾ ಪರಿಕರಗಳನ್ನು  ಸುಮಾರು ಹನ್ನೆರಡು ಕಿಲೋ ಬೆಳ್ಳಿಯಲ್ಲಿ ಮಾಡಿಸುವ ಕಾರ್ಯವೂ ಭರದಿಂದ ಸಾಗುತ್ತಿದ್ದು, ಈ ಮಹಾನ್ ಕಾರ್ಯಕ್ಕೆ ದೇವಿಯ ಭಕ್ತಾದಿಗಳು ಪೂರ್ಣ ಪ್ರಮಾಣದಲ್ಲಿ ನೆರವು ನೀಡುತ್ತಿದ್ದಾರೆ. ಮತ್ತಷ್ಟು ಬೆಳ್ಳಿ ನೀಡುವ ಜೊತೆಗೆ ಅಭಿವೃದ್ಧಿ ಯುಕ್ತ ಸೇವಾ ಕಾರ್ಯಗಳಿಗೆ ಸಹಾಯ ಹಸ್ತ ಚಾಚುವ ಭಕ್ತಾದಿಗಳು ಆಡಳಿತ ಮಂಡಳಿಯನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿದರು.

ಈಗಾಗಲೇ ನಿಧಾನವಾಗಿ ಜಾತ್ರಾ ಮಹೋತ್ಸವದ ಕಾರ್ಯಗಳು ಕಳೆಗಟ್ಟು ತ್ತಿದ್ದು, ಪ್ರತಿ ಮಂಗಳವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೂರದೂರುಗಳಿಂದ ವಾಹನಗಳಲ್ಲಿ ದೇವಿ ಪೂಜೆಗೆಂದು ಸಂಸಾರ ಸಹಿತ ಬರುತ್ತಿದ್ದು ಮರಗಳ ನೆರಳು, ಯಾತ್ರಿ ಸ್ಥಳದ ಮುಂಭಾಗ ಮೊದಲಾದೆಡೆಯಲ್ಲಿ ಡೇರೆ ಹಾಕಿ ಭರ್ಜರಿಯಾದ ಸಿಹಿ / ಖಾರದ ಅಡುಗೆ ತಯಾರಿಯಲ್ಲಿದ್ದಾರೆ. ಅವರುಗಳಿಗೆ ಕುಡಿಯುವ ನೀರು ಇತ್ಯಾದಿ ಅನುಕೂಲ ಕಲ್ಪಿಸಲಾಗುತ್ತಿದೆ.ಜಾತ್ರೆಗೆ ಲಕ್ಷಾಂತರ ಜನರು ರಾಜ್ಯ – ಪರ ರಾಜ್ಯಗಳಿಂದ ಬರಲಿದ್ದಾರೆ ಎಂದೂ ಎಂ.ದುಗ್ಗಪ್ಪ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹಳೇಬೀಡು ರಾಮಪ್ರಸಾದ್ , ಕೆಂಚಪ್ಪ , ಅರವಿಂದ್ ಹಾಗೂ ಹರೀಶ್ ಹಾಜರಿದ್ದರು.

error: Content is protected !!