ದಾವಣಗೆರೆ, ಮಾ.10- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ‘ಬಿ’ ಖಾತಾವನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ವಿತರಿಸಿದರು.
ಇಂದು ಫಲಾನುಭವಿಗಳಿಗೆ ವಿತರಿಸಿದ ‘ಬಿ’ ಖಾತಾ ಶಾಸಕರು ಫಲಾನುಭವಿಗಳನ್ನುದ್ದೇಶಿಸಿ ಮಾತನಾಡಿ, ಈ ಹಿಂದೆ ತಾವುಗಳು ಯಾವುದೋ ಅಮಿಷಕ್ಕೆ ಒಳಗಾಗಿ ಕಂದಾಯ ನಿವೇಶನಗಳನ್ನು ಪಡೆದು ಮನೆಗಳನ್ನೂ ಸಹ ನಿರ್ಮಿಸಿಕೊಂಡಿದ್ದೀರಿ. ಆದರೆ ಅವುಗಳಿಗೆ ಯಾವುದೇ ದಾಖಲೆಗಳು ಇಲ್ಲದೇ ಸಾಕಷ್ಟು ತೊಂದರೆ ಉಂಟಾಗಿತ್ತು. ಆದರೆ ಇದೀಗ ಸರ್ಕಾರವು ನಿಮಗೆ ಅನುಕೂಲ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ದಾವಣಗೆರೆ ಜನತೆ ಕಂದಾಯ ನಿವೇಶನಗಳನ್ನು ಹೊಂದಿರುವವರು `ಬಿ’ ಖಾತಾಗೆ ಅರ್ಜಿ ಸಲ್ಲಿಸಿ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೇ ಖಾತೆ ಪಡೆಯಬೇಕೆಂದು ತಿಳಿಸಿದ ಅವರು, 3 ತಿಂಗಳು ಮಾತ್ರ ಕಾಲಾವಧಿ ನೀಡಲಾಗಿದ್ದು, ಅಷ್ಟರೊಳಗೆ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಮತ್ತು ಮನೆಗಳಿಗೆ `ಬಿ’ ಖಾತಾ ನೀಡಲಾಗುವುದು ಎಂದರು.
ಅನಧಿಕೃತ ಬಡಾವಣೆಯ ಸೈಟ್, ಮನೆ, ಕಟ್ಟಡಗಳಿಗೆ ಡೋರ್ ನಂಬರ್ ನೀಡಿ, ಇ-ಆಸ್ತಿ ಸೃಷ್ಟಿಸಿ `ಬಿ’ ಖಾತೆ ನೀಡಲು ಅಭಿವೃದ್ಧಿ ಮತ್ತು ಸುಧಾರಣೆಯ ಹೆಸರಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಅರ್ಜಿದಾರರಿಂದ ಹೆಚ್ಚು ಶುಲ್ಕವನ್ನt ಸಹ ರದ್ದು ಮಾಡಿರುವ ಸಚಿವರನ್ನು ಅಭಿನಂದಿಸಿದ ಅವರು, ಸಾರ್ವಜನಿಕರು ಸರ್ಕಾರ ನೀಡಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಮಾಜಿ ಮಹಾಪೌರರಾದ ಕೆ.ಚಮನ್ಸಾಬ್, 1-ವಲಯ ಆಯುಕ್ತರಾದ ನಾಗರತ್ನಮ್ಮ ಮತ್ತಿತರರಿದ್ದರು.