ಕೊಟ್ಟೂರು ಪಾದಯಾತ್ರಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಬಸವಪ್ರಭು ಶ್ರೀ
ದಾವಣಗೆರೆ, ಫೆ. 19- ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಬೇಡಿಕೊಂಡು ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಸಾವಿರಾರು ಸಂಖ್ಯೆಯಲ್ಲಿ ಕೊಟ್ಟೂರಿಗೆ ಪಾದಯಾತ್ರೆ ತೆರಳುತ್ತಾರೆ. ಆದರೆ ಪಾದಯಾತ್ರೆ ಕೇವಲ ಪ್ರದರ್ಶನವಾಗದೇ ಅಂತರಂಗದ ದರ್ಶನ ಮಾಡಿಸುವಂತಾಗಬೇಕು ಎಂದು ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದರು.
ನಗರದ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೊಟ್ಟೂರು ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಇಂದು ಸಂಜೆ 46 ನೇ ವರ್ಷದ ಸಮಗ್ರ ಪಾದಯಾತ್ರೆ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕೊಟ್ಟಂತಹ ಸಮಾನತೆ, ಕಾಯಕ ಮತ್ತು ದಾಸೋಹ ತತ್ವವನ್ನು 16-17 ನೇ ಶತಮಾನದಲ್ಲಿ ಕೊಟ್ಟೂರೇಶ್ವರರು ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ ಮಹಾನ್ ಯೋಗಿಗಳು ಎಂದು ಬಣ್ಣಿಸಿದರು.
ಕೊಟ್ಟೂರೇಶ್ವರರನ್ನು ಇಂದಿಗೂ ಪವಾಡ ಪುರುಷರೆಂದೇ ಬಣ್ಣಿಸಲಾಗುತ್ತಿದೆ. ರಥೋತ್ಸವ ಸಂದರ್ಭದಲ್ಲಿ ದಲಿತರ ಮನೆಯಿಂದಲೇ ಗಿಣ್ಣು ಬರುತ್ತೆ. ಜಾತಿ, ಮತ, ಮೇಲು, ಕೀಳೆಂಬ ಭೇದ-ಭಾವವಿಲ್ಲ. ಮಾನವರೆಲ್ಲರೂ ಶ್ರೇಷ್ಠರು ಎಂಬ ಸಮಾನತೆಯ ತತ್ವವನ್ನು ಎತ್ತಿ ಹಿಡಿದಿದ್ದಾರೆ. ಹನ್ನೆರಡನೇ ಶತಮಾನದಲ್ಲಿನ ಅನುಭವ ಮಂಟಪದ ಆದರ್ಶವನ್ನು ಇಂದಿಗೂ ಕೊಟ್ಟೂರಿನಲ್ಲಿ ಕಾಣುತ್ತೇವೆ ಎಂದರು.
ನಂಬಿದ ಭಕ್ತರನ್ನು ಎಂದಿಗೂ ಕೈಬಿಡದೇ ಅವರ ಇಷ್ಟಾರ್ಥಗಳನ್ನು ನೆರವೇರಿಸುವ ಮಹಾನ್ ಪವಾಡ ಪುರುಷ ಕೊಟ್ಟೂರು ಗುರುಬಸವೇಶ್ವರರು ಎಂದು ಹೇಳಿದರು.
ಅಯ್ಯನಹಳ್ಳಿ ರಂಭಾಪುರಿ ಶಾಖಾ ಮಠದ ಶ್ರೀ ಮಹೇಶ್ವರ ಸ್ವಾಮೀಜಿ ಮಾತನಾಡಿ, ಕೊಟ್ಟೂರು ಪಾದಯಾತ್ರಿಗಳಲ್ಲಿ ನಿಜ ಭಕ್ತಿ ಕಡಿಮೆಯಾಗುತ್ತಿದೆ. ಅವರು ಹೋಗುತ್ತಾರೆ, ನಾನು ಹೋಗಬೇಕು ಎಂಬ ಆಡಂಬರದ ಭಕ್ತಿಯೇ ಬಹಳಷ್ಟು ಪಾದಯಾತ್ರಿಗಳಲ್ಲಿ ಕಾಣುತ್ತೇವೆ. ಕೆಲವು ಯುವಜನರ ಪಾಲ್ಗೊಳ್ಳುವಿಕೆ ನೋಡಿದರೆ ನಮ್ಮ ಮನಸ್ಸಿಗೆ ನೋವಾಗುತ್ತದೆ. ಪಾದಯಾತ್ರಿಗಳಿಗಾಗಿ ಜನರು ಮಾಡುವ ಸೇವೆ ಅನನ್ಯವಾದುದು. ಅವರಲ್ಲಿ ನಾವು ನಿಜವಾದ ಭಕ್ತಿಯನ್ನು ಕಾಣುತ್ತಿದ್ದೇವೆ ಎಂದರು.
ಯುವಕರಲ್ಲಿ ಪಾದಯಾತ್ರೆಯ ಅರಿವು ಇರುವುದಿಲ್ಲ. ದಾವಣಗೆರೆಯಿಂದ ಕೊಟ್ಟೂರಿನವರೆಗಿನ ಪಾದಯಾತ್ರೆಯ ಮಾರ್ಗ ಮಧ್ಯೆ ಪಾದಯಾತ್ರಿಗಳಿಗೆ ಮಾಡುವ ಸೇವೆಯ ಪರಿಶ್ರಮ ದೊಡ್ಡದು. ಆ ಸೇವೆಯಲ್ಲಿಯೇ ಸಾಕ್ಷಾತ್ ಕೊಟ್ರಯ್ಯನನ್ನು ಕಾಣುತ್ತಾರೆ ಎಂದು ಹೇಳಿದರು.
ನೀರನ್ನು ಮಿತವಾಗಿ ಬಳಸಬೇಕು. ಪ್ರಸಾದವನ್ನು ವ್ಯರ್ಥ ಮಾಡದೇ, ಎಲ್ಲೆಂದರಲ್ಲಿ ಗುಟುಕಾ ತಿಂದು ಉಗಿಯದೇ, ನೀರಿನ ಬಾಟಲುಗಳನ್ನು ಎಲ್ಲೆಂದರಲ್ಲಿ ಬಿಸಾಕದೇ, ಸದ್ಭಾವದಿಂದ ಪಾದಯಾತ್ರೆಯ ಉದ್ದೇಶವನ್ನು ಈಡೇರುಸುವ ಮೂಲಕ ಭಕ್ತಿ ಸಮರ್ಪಿಸುವಂತೆ ಕರೆ ನೀಡಿದರು.
ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ಕಳೆದ 46 ವರ್ಷಗಳಿಂದ ನಿರಂತರವಾಗಿ ಈ ಪಾದಯಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಆರಂಭದಲ್ಲಿ ಕೇವಲ 10- 15 ಭಕ್ತರಿಂದ ಆರಂಭವಾದ ಕೊಟ್ಟೂರು ಪಾದಯಾತ್ರೆಯಲ್ಲಿ ಇದೀಗ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ ಎಂದರು.
ತತ್ವ, ಸಿದ್ಧಾಂತ, ಉದ್ದೇಶವನ್ನು ಇಟ್ಟುಕೊಂಡು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಶ್ರೀ ಗುರು ಕೊಟ್ಟೂರೇಶ್ವರರ ಬದುಕು, ಅವರ ಆದರ್ಶಗಳನ್ನು, ವಿಚಾರಧಾರೆಯನ್ನು ಪ್ರತಿಯೊಬ್ಬ ಪಾದಯಾತ್ರಿ ಕೂಡ ಅರಿಯಬೇಕಾಗಿದೆ. ಪಾದಯಾತ್ರಿಗಳು ತಮ್ಮ ಪಾದಗಳ ರಕ್ಷಣೆ ಮಾಡುವ ಜೊತೆಗೆ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ ಎಂದು ಹೇಳಿದರು.
ಅಗತ್ಯಕ್ಕೆ ತಕ್ಕಂತೆ ಪ್ರಸಾದ, ಹಣ್ಣು, ಹಂಪಲು, ಔಷಧಿ, ಇತರೆ ಆಹಾರ ಪದಾರ್ಥಗಳನ್ನು ಸೇವಿಸಿ, ಅಧಿಕ ಸೇವನೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳದೇ, ಮಿತವಾಗಿ ಸೇವನೆ ಮಾಡಿ, ಪುಣ್ಯದ ಕಾರ್ಯಕ್ಕೆ ಕೈಜೋಡಿಸಿ ಎಂದು ಹೇಳಿದರು.
ಕೊಟ್ಟೂರು ಹಿರೇಮಠದ ಶ್ರೀ ಶಿವಪ್ರಕಾಶ ಸ್ವಾಮೀಜಿ, ಕೋಣಂದೂರು ಶ್ರೀ ಕ್ಷೇತ್ರ ಶಿವಲಿಂಗೇಶ್ವರ ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕೈಗಾರಿಕೋದ್ಯಮಿ ಡಾ. ಅಥಣಿ ಎಸ್. ವೀರಣ್ಣ, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳುವಯ್ಯ, ಶ್ರೀ ಕೊಟ್ಟೂರು ಗುರುಬಸವರಾಜೇಂದ್ರ ಪಾದಯಾತ್ರೆ ಟ್ರಸ್ಟ್ ಪದಾಧಿಕಾರಿಗಳಾದ ಕಣಕುಪ್ಪಿ ಮುರುಗೇಶಪ್ಪ, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಎಸ್.ಎಂ. ವೀರಭದ್ರಯ್ಯ, ರುದ್ರುಮುನಿಸ್ವಾಮಿ, ಬಕ್ಕೇಶಪ್ಪ, ಮಲ್ಲಾಬಾದಿ ಗುರುಬಸವರಾಜ್, ಬಿ. ಚಿದಾನಂದಪ್ಪ, ಬೂಸ್ನೂರು ಸುಜಾತಮ್ಮ, ಸಾಂಬಶಿವಯ್ಯ, ಕುಂಬಾರ ಕರಿಬಸಯ್ಯ, ಸಿ.ಆರ್.ಜಯರಾಜ್, ಮುದುಕಯ್ಯ ಶಾಸ್ತ್ರಿ ಮರೋಳ್, ಮತ್ತಿತರರು ಉಪಸ್ಥಿತರಿದ್ದರು.
ಪಾದಯಾತ್ರಿಗಳಿಗೆ ಸೇವಾ ಕಾರ್ಯಕರ್ತರು ಪ್ರಸಾದ, ನೀರಿನ ಬಾಟಲಿ, ಬಿಸ್ಕತ್ತು, ಬಾಳೆಹಣ್ಣು, ಔಷಧಿ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ವಿತರಿಸಿದರು.