ಭರಮಸಾಗರ, ಫೆ.11- ಸಂಗೀತ, ನೃತ್ಯ, ಯೋಗವನ್ನು ಶಾಲಾ ಶಿಕ್ಷಣ ಕಡ್ಡಾಯಗೊಳಿಸ ಬೇಕು. ಇವುಗಳಿಂದ ವಿದ್ಯಾರ್ಥಿಗಳಲ್ಲಿ ಸೂಕ್ಷ್ಮ ಸಂವೇದನೆ, ಏಕಾಗ್ರತೆ, ಅಧ್ಯಯನದಲ್ಲಿ ತಲ್ಲೀನತೆಗೆ ಕಾರಣವಾಗುತ್ತದೆ. ಕಲೆಯನ್ನು ಕೇವಲ ಮನರಂಜನೆಗಾಗಿ ಸೀಮಿತಗೊಳಿಸ ಬಾರದು. ಕಲೆ ಸಂಸ್ಕಾರ ವಂತರನ್ನಾಗಿ ಮಾಡಿ ಮನೋವಿಕಾಸಕ್ಕೆ ದಾರಿಮಾಡಿಕೊಡುತ್ತದೆ.
ಸಾಹಿತ್ಯಕ್ಕೆ ಸಂಗೀತ ಸೇರಿದರೆ ಹಾಲುಜೇನು ಸೇರಿದಂತಾಗುತ್ತದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನುಡಿದರು.
ತರಳಬಾಳು ಹುಣ್ಣಿಮೆಯ ಆರನೇ ದಿನದ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ತಮ್ಮ ಬಾಲ್ಯದ ಸಂಗೀತ ಕಲಿಕೆಯ ದಿನಗಳನ್ನು ನೆನಪಿಸಿಕೊಂಡ ಶ್ರೀಗಳು, ಹಿರಿಯ ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶ ನದಿಂದ ಸಂಗೀತ ಅಭ್ಯಾಸ ಮಾಡಲು ಸಾಧ್ಯ ವಾಯಿತು. ಮೈಸೂರಿನ ಮಹಾರಾಜ ಕಾಲೇಜಿ ನಲ್ಲಿ ಪದವಿ ಓದುವಾಗ ಬಿಡಾರಂ ಕೃಷ್ಣಪ್ಪನವರು ಪ್ರಾರಂಭಿಸಿದ ಸಂಗೀತ ಶಾಲೆಯಲ್ಲಿ ವೆಂಕಟಾಚಲ ಎಂಬ ವಿದ್ವಾಂಸರ ಬಳಿ ಅಭ್ಯಾಸ ಮಾಡಿದೆವು. ಆಗ ತ್ಯಾಗರಾಜರ ಪಂಚರತ್ನ ಕೃತಿಗಳನ್ನು ಲೀಲಾಜಾಲವಾಗಿ ನುಡಿಸುತ್ತಿದ್ದೆವು.
ಮುಂದೆ ಬನಾರಸ್ಸಿನಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದಾಗ ಅಲ್ಲಿಯೂ ಅಭ್ಯಾಸ ಮುಂದುವರಿಸಿ, ವಯೋಲಿನ್ ಡಿಪ್ಲೋಮಾದಲ್ಲಿ ರಾಂಕ್ ಪಡೆದದ್ದನ್ನು ಶ್ರೀಗಳು ಸ್ಮರಿಸಿಕೊಂಡರು. ಬನರಾಸಿನಲ್ಲಿ ಚಂದ್ರಶೇಖರ ಎಂಬುವರದು ಸಂಪೂರ್ಣ ಭರತ ನಾಟ್ಯ ಕಲಾವಿದರ ಕುಟುಂಬವಾಗಿತ್ತು. ಆಗಾಗ ಅವರ ಭರತನಾಟ್ಯಕ್ಕೆ ವಸಂತ ರಾಗದಲ್ಲಿ ಪಿಟೀಲನ್ನು ಪಕ್ಕ ವಾದ್ಯವಾಗಿ ನುಡಿಸುವ ಅವಕಾಶ ದೊರಕುತ್ತಿತ್ತು.
ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ದಿನಗಳಲ್ಲಿ ಅಪೆರಾ ಹೌಸ್ ನಲ್ಲಿ ಭಾರತೀಯ ಸಂಗೀತ ಕಚೇರಿ ಏರ್ಪಡಿಸಲಾಗಿತ್ತು. ಆಗ ಪಿಟೀಲು ವಿದ್ವಾಂಸರು ತಾಂತ್ರಿಕ ಕಾರಣಗಳಿಗಾಗಿ ಸಕಾಲದಲ್ಲಿ ಹಾಜರಾಗಲು ಕಷ್ಟ ಸಾಧ್ಯವಾಗಿತ್ತು. ಆ ಸಂದರ್ಭದಲ್ಲಿ ಸಂಘಟಕರಿಗೆ ನಮ್ಮ ಬಗ್ಗೆ ಮಾಹಿತಿ ದೊರೆತು, ನಮ್ಮನ್ನು ಆಹ್ವಾನಿಸಿದಾಗ ಸಂಗೀತ ಕಚೇರಿಯಲ್ಲಿ ಪಿಟೀಲು ನುಡಿಸಲು ಸಾಧ್ಯವಾಗಿತ್ತು. ಆದರೆ ನಂತರ ಮಠದ ಜವಾಬ್ದಾರಿ ವಹಿಸಿಕೊಂಡ ಮೇಲೆ ಅಭ್ಯಾಸ ಮಾಡಲು ಸಮಯವೇ ಸಿಗದಂತಾಯಿತು.
ಕಲೆ ಬಾಲ್ಯಸಂಸ್ಕಾರದಿಂದ ಹೃದ್ಗತವಾಗಿದ್ದರ ಫಲವಾಗಿ ಆಗಾಗ ಪಿಟೀಲು ನುಡಿಸಲು ಸಾಧ್ಯವಾಗುತ್ತಿದೆ. ಮಲಯಾಚಲ ಪರ್ವತ ಶ್ರೇಣಿಯಲ್ಲಿ ಯಥೇಚ್ಛವಾಗಿ ಶ್ರೀಗಂಧದ ಮರಗಳು ಬೆಳೆದಿವೆ. ಅಲ್ಲಿ ವಾಸಿಸುವ ಮಹಿಳೆ ಯರು ಶ್ರೀಗಂಧದ ಮರದ ತುಂಡುಗಳನ್ನು ಅಡುಗೆ ಮಾಡಲು ಉರುವಲಾಗಿ ಬಳಸುತ್ತಾರೆ. ಶ್ರೀಗಂಧದ ಮಹತ್ವದ ಅರಿವೇ ಅವರಿಗಿಲ್ಲ ಎಂಬ ಮಾತನ್ನು ಸೂಚ್ಯವಾಗಿ ತಿಳಿಸಿದರು.
ಸಮಾರಂಭದಲ್ಲಿ ಕರ್ನಾಟಕ ಸಂಗೀತ 17ನೇ ಮೇಳಕರ್ತ ರಾಗವಾದ ವಸಂತ ರಾಗ, ರೂಪಕ ತಾಳದಲ್ಲಿ ಮೊದಲು ನುಡಿಸಿದರು. ತ್ಯಾಗರಾಜರ ಜಗನ್ಮೋಹನ ರಾಗದ ಕೃತಿಗೆ ಹಾಗೂ ಕೊನೆಯಲ್ಲಿ ಜಿ ಎಸ್. ಶಿವರುದ್ರಪ್ಪನವರ ‘ಎದೆ ತುಂಬಿ ಹಾಡಿದೆನು ಅಂದು’ ಭಾವಗೀತೆಯನ್ನು ನುಡಿಸಿದರು.
ಕಚೇರಿಯಲ್ಲಿ ಪ್ರಸಿದ್ಧ ಹಾಡುಗಾರ ಶಶಿಧರ ಕೋಟೆ ಪೂಜ್ಯರ ತಾಳ ಹಾಕುತ್ತಿದ್ದರು. ಕೀಬೋರ್ಡ್ ಅನ್ನು ವಿದ್ವಾನ್
ಶಿವಾನಂದ ಜೋಯಿಸ್, ಮೆಂಡೋಲಿನ್ ವಾದನವನ್ನು ವಿದ್ವಾನ್ ಎಲ್ ಎಸ್ ಕಾರ್ತಿಕ್ ಮತ್ತು ಮೃದಂಗ ವಾದ್ಯವನ್ನು ವಿದ್ವಾನ್ ಶ್ರೀವತ್ಸ ನುಡಿಸಿದರು. ಇದೇ ಸಂದರ್ಭದಲ್ಲಿ ಗದಗಿನ ವೀರೇಶ್ವರ ಪುಣ್ಯಾಶ್ರಮದ ಪಂಡಿತ್ ನಾರಾಯಣ ಹಿರೇಕೊಳಚಿಯವರು ಪಿಟೀಲು ನುಡಿಸಿದರು.