22 ಕೆರೆ ಏತ ನೀರಾವರಿ ಯೋಜನೆ ಗುಣಮಟ್ಟದ ಕಾಮಗಾರಿಗೆ ಕ್ರಮ

22 ಕೆರೆ ಏತ ನೀರಾವರಿ ಯೋಜನೆ ಗುಣಮಟ್ಟದ ಕಾಮಗಾರಿಗೆ ಕ್ರಮ

ತರಳಬಾಳು ಹುಣ್ಣಿಮೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ಭರಮಸಾಗರ,ಫೆ. 9- ಆರೋಗ್ಯ ರಾಷ್ಟ್ರದ ಪ್ರಗತಿಗೆ ಅಡಿಪಾಯವಾಗಿದ್ದು, ಕಳೆದ 75 ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಕೆ ಮಾಡಿ ನೋಡಿದರೆ ಭಾರತದ ದೇಶ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ನವದೆಹಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾಸ್‌ಪೋರ್ಟ್ ಅಧಿಕಾರಿ ಡಾ. ಕೆ.ಜೆ. ಶ್ರೀನಿವಾಸ್ ಹೇಳಿದರು.

ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋ ತ್ಸವದ 6ನೇ ದಿನದ ಕಾರ್ಯಕ್ರಮದಲ್ಲಿ `ಆರೋಗ್ಯ ಮತ್ತು ಸಮಾಜ’ ವಿಷಯ ಕುರಿತು ಮಾತನಾಡಿದರು.

ಭಾರತದಲ್ಲಿ ಆರೋಗ್ಯ ಅಸಮಾನತೆ ಕಾಣುತ್ತೇವೆ. ಆರೋಗ್ಯಕ್ಕಾಗಿ ದುಬಾರಿ ವೆಚ್ಚಗಳನ್ನು ಭರಿಸುವ ವ್ಯವಸ್ಥೆ ನಿರ್ಮಾಣವಾಗಿದೆ. ಸಾಂಕ್ರಾಮಿಕ ರೋಗಗಳು ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ಸಹ ಬಿ.ಪಿ., ಮಧುಮೇಹ, ಹೃದಯ ಸ್ತಂಭ, ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಸ್ಥೂಲಕಾಯ ರೋಗಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.  ಅಪೌಷ್ಟಿಕತೆ ಸಾವು ಮತ್ತು ಅಂಗ ವೈಕಲ್ಯಕ್ಕೆ ಕಾರಣಕಾರಿ ಅಂಶಗಳಾಗಿದ್ದು, ಆಹಾರ ಭದ್ರತೆ, ನೈರ್ಮಲ್ಯ, ಶಿಕ್ಷಣದ ಸುಧಾರಣೆ ಮೂಲಕ ಸರಿದೂಗಿಸ ಬಹುದು. ವಾಯುಮಾಲಿನ್ಯ ಭಾರತದ ಸಾವು, ಅಂಗವೈಕಲ್ಯ ಕಾರಣವಾಗುವ ಅಪಾಯಕಾರಿ ಅಂಶವಾಗಿದೆ ಎಂದರು.

ಭಾರತ ಇತರೆ ದೇಶಗಳಿಗಿಂತ ವೈದ್ಯಕೀಯ ಸಂಶೋಧನೆಗಳಿಗಿಂತ ಮುಂದುವರೆದಿದೆ. ಅನೇಕ ಪೋಲಿಯೋದಂತಹ ಮಾರಕ ರೋಗಗಳನ್ನು ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಜಾಗತೀಕರಣದ ಜಗತ್ತಿನಲ್ಲಿ ಆರೋಗ್ಯ ರಕ್ಷಣೆ ಒಂದು ದೇಶದ ಗಡಿಗೆ ಸೀಮಿತವಾಗಿಲ್ಲ. ಆರೋಗ್ಯ ಸೇವೆಯ ಗುಣಮಟ್ಟದ ಸುಧಾರಣೆ ಬಂದಿದೆ. ವಿದೇಶ ಸಹಯೋಗಗಳು ವೈದ್ಯಕೀಯ ಸಂಶೋಧನೆಯಲ್ಲಿ ನಿರ್ಣಯಕ ಪಾತ್ರ ವಹಿಸಿವೆ. ವಿದೇಶಗಳ ಅನೇಕ ಆರೋಗ್ಯ ಸೇವೆಗಳ ಒಪ್ಪಂದದಿಂದ ಭಾರತಕ್ಕೆ ಹೆೆಚ್ಚು ಪ್ರಯೋಜನಗಳಾಗಿವೆ ಎಂದರು.

2000 ನೇ ಇಸವಿ ನಂತರದಲ್ಲಿ ಜಗತ್ತಿನಲ್ಲಿ ಭಾರತವು ಜಾಗತಿಕ ಆರೋಗ್ಯ ವ್ಯವಸ್ಥೆಯ ನಾಯಕನಾಗಿ, ನಾವೀನ್ಯಕಾರಿ ದೇಶವಾಗಿ ಹೊರಹೊಮ್ಮಿದೆ. ಜಾಗತಿಕ ಆರೋಗ್ಯಕ್ಕೆ ಭಾರತ ಗಮನಾರ್ಹ ಕೊಡುಗೆ ನೀಡಿದೆ. ವಿದೇಶದ ಸಾಮಾನ್ಯ ನಾಗರಿಕನಿಗೂ ಭಾರತದ ಬಗ್ಗೆ ಅಪಾರ ಗೌರವಿದೆ. ಆರೋಗ್ಯ ಕ್ಷೇತ್ರ ಸುಧಾರಣೆಗೆ ಕೇವಲ ಸರ್ಕಾರ, ಖಾಸಗಿ ಸಂಸ್ಥೆಗಳ ಜೊತೆಗೆ, ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಪ್ರಮುಖವಾಗಿ ಬೇಕಾಗಿದೆ. ಬಲಿಷ್ಠ ಭಾರತದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.

ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ತರಳಬಾಳು ಜಗದ್ಗುರುಗಳು ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಬದುಕು ಹಸನಾಗಿಸುವ ಮೂಲಕ ಆಧುನಿಕ ಭಗೀರಥ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತಮ್ಮ ಸದ್ಧರ್ಮ ನ್ಯಾಯಪೀಠದ ಮೂಲಕ ಸಾರ್ವಜನಿಕರಿಗೆ ನ್ಯಾಯ ದೊರಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು.

22 ಕೆರೆಗಳ ಏತ ನೀರಾವರಿ ಯೋಜನೆ ಕೆಲವು ತಾಂತ್ರಿಕ ತೊಂದರೆಗಳಿಂದ ಪರಿಪೂರ್ಣವಾಗಿರುವುದಿಲ್ಲ. ಇದಕ್ಕೆ ಕಳಪೆ ಕಾಮಗಾರಿ ಕಾರಣವಾಗಿದ್ದು, ಈ ಬಗ್ಗೆ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರೊಟ್ಟಿಗೆ ಚರ್ಚಿಸಿದ್ದು, ಗುಣಮಟ್ಟದ ಪೈಪ್‌ಲೈನ್ ಕಾಮಗಾರಿಯನ್ನು ಶೀಘ್ರವೇ ಕೈಗೊಳ್ಳಲು ಕ್ರಮ ಜರುಗಿಸಲಾಗುವುದು. ಇದರಂತೆ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದ್ದು, ಇದಕ್ಕೂ ಕೂಡ ಸೂಕ್ತ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ  ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರ ಗಮನ ಸೆಳೆಯುವುದಾಗಿ ತಿಳಿಸಿದರು.

ದೈಹಿಕ, ಮಾನಸಿಕ, ಸಾಮಾಜಿಕ, ಧಾರ್ಮಿಕ ಆರೋಗ್ಯ ಸದೃಢವಾಗಿದ್ದರೆ  ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ಸಹ ನಿತ್ಯ ಧ್ಯಾನ, ಯೋಗ, ನಡಿಗೆಯಲ್ಲಿ ಪಾಲ್ಗೊಂಡು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮುಂದಾಗುವಂತೆ ಕರೆ ನೀಡಿದರು.

9 ರಿಂದ 14 ವರ್ಷ ವಯೋಮಾನದ ಹೆಣ್ಣು ಮಕ್ಕಳಿಗೆ ಯಾವುದೇ ಕ್ಯಾನ್ಸರ್‌ನಂತಹ ಕಾಯಿಲೆಗಳು ಬಾರದಂತೆ ಅವರು ಕಡಿಮೆ ದರದಲ್ಲಿ `ವ್ಯಾಕ್ಸಿನೇಷನ್’ ಹಾಕಿಸುವ ಪ್ರಕ್ರಿಯೆಯನ್ನು ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಹಾಸನ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಬಿ.ಎಸ್. ಗಿರಿಜಾ ಅವರು ಗರ್ಭಕಂಠ ಸೇರಿದಂತೆ ಇತರೆ ಕ್ಯಾನ್ಸರ್ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಅವುಗಳಿಗೆ ಚಿಕಿತ್ಸಾ ವಿಧಾನಗಳ ಮಾಹಿತಿ ನೀಡಿದರು.

ದಾವಣಗೆರೆ ನೇತ್ರ ತಜ್ಞ ಡಾ. ಜಿ. ಸುನೀಲ್ ಅವರು ದೃಷ್ಟಿ ದೋಷ, ದೀರ್ಘ ಕಾಲ ಕಂಪ್ಯೂಟರ್, ಮೊಬೈಲ್  ಬಳಕೆಯಿಂದ ಆಗುವ ದುಷ್ಪರಿಣಾಮ ಕುರಿತು ಮಾತನಾಡಿದರು.

ಬೆಂಗಳೂರು ಆಸ್ಟರ್ ಆಸ್ಪತ್ರೆ ಮುಖ್ಯಸ್ಥರು ಮತ್ತು ಕನ್ಸಲ್ಟೆಂಟ್ ಡಾ. ಪಿ.ಎನ್. ಪಾಟೀಲ್, ಹಾಸನ ಜನಪ್ರಿಯ ಆಸ್ಪತ್ರೆಯ ಡಾ. ಅಬ್ದುಲ್ ಬಷೀರ್ ಆರೋಗ್ಯ ವಿಷಯ ಕುರಿತು ಉಪನ್ಯಾಸ ನೀಡಿದರು. ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್ ತಮ್ಮ ಹಾಸ್ಯ ಪ್ರಸಂಗಗಳ ಮೂಲಕ ಸಹೃದಯರನ್ನು ರಂಜಿಸಿದರು.

ವಿವಿಧ ಶಾಲಾ ವಿದ್ಯಾರ್ಥಿಗಳು ಮತ್ತು ಕಲಾವಿದರಿಂದ ವಚನಗೀತೆ, ಭರತನಾಟ್ಯ, ಯೋಗ ಪ್ರದರ್ಶನ ನಡೆದವು. ದ್ಯಾಮಣ್ಣ ಕೋಗುಂಡೆ ಸ್ವಾಗತಿಸಿದರು. ಮಹಾಂತೇಶ ವಂದಿಸಿದರು.

error: Content is protected !!