ಗ್ರಾಮ ನೈರ್ಮಲ್ಯ ಕಾಪಾಡಲು ಒತ್ತು ನೀಡಬೇಕು

ಗ್ರಾಮ ನೈರ್ಮಲ್ಯ ಕಾಪಾಡಲು ಒತ್ತು ನೀಡಬೇಕು

ಗ್ರಾ.ಪಂ ಅಧಿಕಾರಿಗಳಿಗೆ ಶಾಸಕ ಬಸವಂತಪ್ಪ ಸೂಚನೆ

ದಾವಣಗೆರೆ, ಫೆ. 3- ಆರೋಗ್ಯ ಮತ್ತು ಸ್ವಚ್ಛತೆ ಒಂದೇ ನಾಣ್ಯದ ಎರಡು ಮುಖಗಳು. ಸ್ವಚ್ಛತೆ ಹೊರತಾಗಿ ಆರೋಗ್ಯ ಇರಲು ಸಾಧ್ಯವಿಲ್ಲ. ಆದ್ದರಿಂದ ಗ್ರಾಮ ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುರ್ಕಿ ಗ್ರಾಮ ಪಂಚಾಯಿತಿಯ ಹಿರೇತೊಗಲೇರಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ 2023-24ನೇ ಸಾಲಿನ ಎಸ್‍ಬಿಎಂಜಿ ಯೋಜನೆಯಡಿ ಮಂಜೂರಾಗಿರುವ 2.48 ಕೋಟಿ ರೂ. ವೆಚ್ಚದ ತಾಲ್ಲೂಕು ಮಟ್ಟದ ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಜನರಿಗೆ ನೈರ್ಮಲ್ಯ ಮತ್ತು ಆರೋಗ್ಯ ಸದೃಢವಾಗಿರಬೇಕಾದರೆ ಪ್ರತಿನಿತ್ಯ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿದಾಗ ಮಾತ್ರ ಗ್ರಾಮದ ಜನರು ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ ಎಂದರು.

ಹಿರೇತೊಗಲೇರಿ ಗ್ರಾಮದ ಎರಡು ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸುತ್ತಿದ್ದು, ತಾಲ್ಲೂಕಿನ ಒಣ ಕಸ ಸಂಗ್ರಹಿಸಿ ಇಲ್ಲಿನ ಒಣ ಕಸ ನಿರ್ವಹಣೆ ಘಟಕದ ಮೂಲಕ ಪ್ಲಾಸ್ಟಿಕ್, ಕಬ್ಬಿಣ, ಗಾಜು ಇತ್ಯಾದಿಗಳನ್ನು ವಿಂಗಡಿಸಿ ಪುನರ್ ಉತ್ಪಾದನೆ ಮಾಡುವ ಉದ್ದಿಮೆದಾರರಿಗೆ ಕಳುಹಿಸಲಾಗುತ್ತದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದರು.

ಕ್ಷೇತ್ರದ ಬಹುತೇಕ ಗ್ರಾಪಂಗಳಲ್ಲಿ ಘಟಕಗಳು ನೆನಗುದಿಗೆ ಬಿದ್ದಿವೆ. ಕೆಲವೊಂದು ಗ್ರಾಪಂಗಳಲ್ಲಿ ಕಸ ವಿಲೇವಾರಿ ಘಟಕಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕಸ ಸಂಗ್ರಹಿಸುವ ಆಟೋಗಳು ಮೂಲೆ ಸೇರಿ ತುಕ್ಕು ಹಿಡಿಯುತ್ತಿವೆ. ಕುರ್ಕಿ ಗ್ರಾಮದ ಕಸ ವಿಲೇವಾರಿ ಘಟಕವನ್ನು ಇಲ್ಲಿನ ಗ್ರಾಪಂ ಪಿಡಿಒ, ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳ ವರ್ಗ ಸುಸ್ಥಿತಿಯಲ್ಲಿ ಇಟ್ಟುಕೊಂಡು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಕುರ್ಕಿ ಗ್ರಾಪಂ ಇತರೆ ಗ್ರಾಪಂಗಳಿಗೆ ಮಾದರಿಯಾಗಿದ್ದು, ಇದನ್ನು ಎಲ್ಲಾ ಗ್ರಾಪಂ ಪಿಡಿಒಗಳು, ಅಧ್ಯಕ್ಷರು, ಸದಸ್ಯರು, ಅಳವಡಿಸಿಕೊಳ್ಳಬೇಕು. ಸಂಬಂಧಪಟ್ಟ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಆಗಾಗ ಭೇಟಿ ನೀಡಿ ಘಟಕಗಳುಸ ಸಮರ್ಪಕ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಬೇಕೆಂದರು. 

ಗ್ರಾಮ ಸ್ವಚ್ಛತೆಗಾಗಿ ಸರ್ಕಾರ ಪ್ರತ್ಯೇಕ ಅನುದಾನ ನೀಡುತ್ತಿದ್ದು, ಇದನ್ನು ಗ್ರಾಪಂಗಳು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛತೆ ಮಾಡಲು ನಗರ ಪ್ರದೇಶದಲ್ಲಿ ಪೌರಕಾರ್ಮಿಕರನ್ನು ನೇಮಿಸುವಂತೆ ಗ್ರಾಮೀಣ ಪ್ರದೇಶದಲ್ಲೂ ಪ್ರತಿನಿತ್ಯ ಸ್ವಚ್ಛತೆ ಮಾಡಲು ಪೌರಕಾರ್ಮಿಕರನ್ನು ನೇಮಿಸಬೇಕೆಂದು ಈ ಹಿಂದೆ ನಡೆದ ಅಧಿವೇಶನದಲ್ಲಿ ಚರ್ಚೆ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ. ಪ್ರತಿದಿನ ಸ್ವಚ್ಛತೆ ಮಾಡಿ ನಗರ ಸೌಂದರ್ಯ ಕಾಪಾಡುವಂತೆ ಗ್ರಾಮೀಣ ಪ್ರದೇಶದಲ್ಲೂ ಕೂಡ ಗ್ರಾಮದ ಸೌಂದರ್ಯ ಕಾಪಾಡುವ ಕೆಲಸ ಆಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಲಾಖೆ ಇಇ ಟಾಟಾ ಶಿವನ್, ಎಇಇ ಶಿವಮೂರ್ತಿ, ಗ್ರಾಪಂ ಅಧ್ಯಕ್ಷರಾದ ನಾಗಮ್ಮ, ಗ್ರಾಪಂ ಪಿಡಿಒ ಸುರೇಖಾ, ಗ್ರಾಪಂ ಸದಸ್ಯರು, ಮುಖಂಡರಾದ ನಿಂಗಪ್ಪ, ಬಸವರಾಜಪ್ಪ, ರಾಜಪ್ಪ, ವಾಸು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!