ದಾವಣ ಗೆರೆ, ಜ. 23 – ಇದೇ ಫೆ. 1 ರಂದು ಕುವೆಂಪು ಕನ್ನಡ ಭವನದಲ್ಲಿ ನಡೆಯಲಿರುವ ದಾವಣಗೆರೆ 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಕುವೆಂಪು ಕನ್ನಡ ಭವನದಲ್ಲಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಇವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ತಾಲ್ಲೂಕು ಕಸಾಪ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಚರ್ಚಿಸಿ ಸರ್ವಾನುಮತದಿಂದ ಸಾಹಿತಿಗಳು ಮತ್ತು ಅಧ್ಯಾತ್ಮಿಕ ಚಿಂತಕರೂ ಆದ ಶ್ರೀ ಶಿವಾನಂದ ಗುರೂಜಿಯವರನ್ನು ಆಯ್ಕೆ ಮಾಡಲಾಯಿತು ಎಂದು ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ತಿಳಿಸಿದ್ದಾರೆ.
ಶ್ರೀ ಶಿವಾನಂದ ಗುರೂಜಿಯವರು ಅನಾಥ ಸೇವಾ ಬಸವ ಗುರುಕುಲವೆಂಬ ಜಂಗಮ ಸಂಸ್ಥೆಯೊಂದಿಗೆ ಕರ್ನಾಟಕದ ಗ್ರಾಮಾಂತರ ಪ್ರದೇಶಗಳಲ್ಲಿ ಯೋಗಾಸನ ಶಿಬಿರ ನಡೆಸುವುದರೊಂದಿಗೆ, ವಚನ ಸಾಹಿತ್ಯದ ಪ್ರವಚನಗೈದಿದ್ದಾರೆ. ನಂತರ ಶ್ರೀ ಬಸವ ಗುರುಕುಲ ವಿಶ್ವಸ್ಥ ಸಮಿತಿ ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಸುಮಾರು 27 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ವೈಚಾರಿಕ ಹಿನ್ನೆಲೆಯಲ್ಲಿ ಬಸವ ಗುರುಕುಲದಿಂದ ನಿರ್ಗಮಿಸಿ ಸ್ವತಂತ್ರವಾಗಿ ಶ್ರೀ ಬಸವ ಗುರು ತಪೋವನವನ್ನು ಶಿರಮಗೊಂಡನಹಳ್ಳಿಯಲ್ಲಿ ಸ್ಥಾಪಿಸಿದ್ದು, ಅದು `ಶರಣೆ ಅಕ್ಕಮಹಾದೇವಿ ಮಕ್ಕಳ ಕಮ್ಮಟ’ ಕ್ಕೆ ನಾಂದಿಯಾಗಿದೆ.
ಶರಣ ಶಿವಾನಂದ ಗುರೂಜಿ ಅವರು ನಿಷ್ಠೂರವಾದಿಗಳು, ನ್ಯಾಯಪರರು ಮತ್ತು ತತ್ವ ನಿಷ್ಠರು. ಸದಾ ಹೊಸ ವೈಚಾರಿಕ ಚಿಂತನೆಗಳಿಗೆ ಚಾಲನೆ ನೀಡುವಂತವರಾಗಿದ್ದಾರೆ. ತಮ್ಮ ಸ್ವಂತ ಬದುಕಿಗಿಂತ ಇತರರ ಬದುಕಿನತ್ತ ನೋಡುವುದು, ಮರುಗುವುದು, ಮರುಗಿ ಕಾರ್ಯಪ್ರವೃತ್ತರಾಗು ವುದು ಅವರ ಸಹಜ ಸ್ವಭಾವವಾಗಿದೆ. ಶ್ರೀಗಳು ಸ್ಥಳೀಯ ಪತ್ರಿಕೆಯ ಅಂಕಣಕಾರರಾಗಿ ಹಲವು ಚಿಂತನ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಅಲ್ಲದೆ `ಹಂಸಯೋಗಿ ಕಾವ್ಯನಾಮ’ದಿಂದ ನೂರಾರು ವಚನಗಳನ್ನು ರಚಿಸಿದ್ದಾರೆ. ಇದಲ್ಲದೆ ಸಾಹಿತ್ಯ ಕೃಷಿಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀಗಳು ಮಾತೃ ಹೃದಯಿ ಬಸವಣ್ಣ (ಬಹುಮಾನಿತ ಪ್ರಬಂಧ) ಬಾಳಿಗೊಂದು ಬೆಳಕು (ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಕೃತಿ), ಯೋಗಾಸನ ಕೈಪಿಡಿ, ಅಷ್ಟಾವರಣ (ಮಕ್ಕಳಿಗಾಗಿ) ಪ್ರವಾಸ ಕಥನ,ತಪ್ಪುಗಳ ಹೆಜ್ಜೆ, ಶಾಲಾ ಮಕ್ಕಳಿಗಾಗಿ ಬಸವಶ್ರೀ ಕಾಪಿ ಪುಸ್ತಕ, ಸಾಕ್ಷಿಗಳಿಲ್ಲದ ಸತ್ಯ (ಆತ್ಮ ನಿವೇದನೆ) ಮತ್ತು ಇಷ್ಟಲಿಂಗ ಯೋಗ ಎಂಬ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.
ಇದೀಗ `ಬಸವ ಧರ್ಮದ ಇಷ್ಟಲಿಂಗ ತತ್ವ’ ಮತ್ತು `ವಚನ ಸಂಪದ ಪಾರಾಯಣ’ ಎಂಬ ಕೃತಿಗಳು ಮುದ್ರಣ ಗೊಂಡಿರುತ್ತವೆ. ನಮ್ಮ ಪ್ರಶ್ನೆಗಳಿಗೆ ಶರಣರ ಉತ್ತರ ಮತ್ತು ಅಂಗೈಯಲ್ಲಿ ಅಮೃತ ಕೃತಿಗಳ ಬರವಣಿಗೆಯು ಶ್ರೀ ಶಿವಾನಂದ ಗುರೂಜಿಯವರಿಂದ ನಡೆಯುತ್ತಿದೆ.
ಶ್ರೀಗಳ ಸಾಹಿತ್ಯಿಕ ಕೃಷಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಗ್ರಾಮೀಣ ಸಿರಿ ಪ್ರಶಸ್ತಿ, ಗಣಾಚಾರ ಪ್ರಶಸ್ತಿ, ವಿದ್ಯಾದಾನ ಸೇವಾಯೋಗಿ ಪ್ರಶಸ್ತಿ, ತಪ್ಪುಗಳ ಹೆಜ್ಜೆ ಪ್ರವಾಸ ಕಥನಕ್ಕೆ ಪ್ರಶಸ್ತಿ ದೊರಕಿವೆ. ಜೊತೆಗೆ ಶರಣ ದಾಂಪತ್ಯ ಚೇತನ ಪ್ರಶಸ್ತಿ, ಅಮರಗಣ ಪ್ರಶಸ್ತಿ, ಶರಣ ಸಂಸ್ಕೃತಿ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿ, ಬಹುಮಾನ, ಗೌರವಾದಾರಗಳು ಇವರ ಸಾಹಿತ್ಯ ಕೃಷಿಗೆ ಸಂದಿವೆ.
ಅಷ್ಟೇ ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲೂ ಅಮೋಘ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ.
ಇದೀಗ ಇವರ ಈ ಎಲ್ಲಾ ಸಾಹಿತ್ಯ ಕೃಷಿಗೆ ಕಿರೀಟ ಪ್ರಾಯವೆಂಬಂತೆ ದಾವಣಗೆರೆ 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಸ್ಥಾನ ದೊರೆತಿರುವುದು ಸಾಹಿತ್ಯ ವಲಯದಲ್ಲಿ ಸಂತಸ ಉಂಟು ಮಾಡಿದೆ.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಯೋಗ ಅಧ್ಯಕ್ಷರಾದ ಸುಮತಿ ಜಯಪ್ಪ ಇವರ ನೇತೃತ್ವದಲ್ಲಿ ಶ್ರೀ ಶಿವಾನಂದ ಗುರೂಜೀ ಅವರ ಆಶ್ರಮಕ್ಕೆ ಭೇಟಿ ನೀಡಿ, ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಅಲಂಕರಿಸಿ, ಸಮ್ಮೇಳನವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಕೇಳಿಕೊಳ್ಳಲಾಯಿತು. ಪರಿ ಷತ್‌ನ ವತಿಯಿಂದ ಶ್ರೀಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.ಈ ಸಂದರ್ಭದಲ್ಲಿ ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷರಾದ ಸುಮತಿ ಜಯಪ್ಪ, ಗೌರವ ಕಾರ್ಯದರ್ಶಿ ದಾಗಿನಕಟ್ಟೆ ಪರಮೇಶ್ವರಪ್ಪ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಸಿ.ಜಿ. ಜಗದೀಶ್ ಕೂಲಂಬಿ, ತಾಲ್ಲೂಕು ಕಸಾಪ ನಿರ್ದೇಶಕ ಕೆ.ಸಿ. ಲಿಂಗರಾಜ್ ಆನೆಕೊಂಡ, ಶಿವಕುಮಾರ್ ಆರ್, ಎ.ಎಂ. ಸಿದ್ದೇಶ್ ಕುರ್ಕಿ, ಕರಿಬಸಪ್ಪ ಟಿ. ಮತ್ತು ದಾವಣಗೆರೆ ಜಿಲ್ಲಾ ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಕೆ. ಶಿವಶಂಕರ್ ಉಪಸ್ಥಿತರಿದ್ದರು.