ವೈದ್ಯರ ಭರವಸೆಯೇ ರೋಗ ನಿವಾರಣೆಗೆ ಹೆಚ್ಚು ಕೆಲಸ ಮಾಡುತ್ತದೆ

ವೈದ್ಯರ ಭರವಸೆಯೇ ರೋಗ ನಿವಾರಣೆಗೆ ಹೆಚ್ಚು ಕೆಲಸ ಮಾಡುತ್ತದೆ

ಬಾಪೂಜಿ ಮಕ್ಕಳ ಆಸ್ಪತ್ರೆಯ ವಿವೇಕ್ ಪಾಲಕರ ಕಾರ್ಯಾಗಾರದಲ್ಲಿ ಹಿರಿಯ ವಾಗ್ಮಿ ಎಚ್.ಬಿ.ಮಂಜುನಾಥ

ದಾವಣಗೆರೆ, ಜ.10- ವೈದ್ಯರಲ್ಲೂ ಹಾಸ್ಯ ಪ್ರಜ್ಢೆ ಬೇಕು. ವೈದ್ಯರು ನೀಡುವ ಔಷಧಕ್ಕಿಂತ ಅವರ ಭರವಸೆಯ ಮಾತುಗಳೇ ರೋಗ ನಿವಾರಣೆಯಲ್ಲಿ ಹೆಚ್ಚು ಕೆಲಸ ಮಾಡಲಿವೆ ಎಂದು ಹಿರಿಯ ವಾಗ್ಮಿ ಹೆಚ್.ಬಿ. ಮಂಜುನಾಥ್ ಹೇಳಿದರು.

ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿವೇಕ್ ಆರೋಗ್ಯ ಕಾರ್ಯಾಗಾರದಲ್ಲಿ ಹಾಸ್ಯ ಮತ್ತು ಆರೋಗ್ಯ ವಿಷಯ ಕುರಿತು ಅವರು ಉಪನ್ಯಾಸ ನೀಡುತ್ತಿದ್ದರು.

ವೈದ್ಯಕೀಯ ಕ್ಷೇತ್ರದಲ್ಲಿ ನಗುವೂ ಒಂದು ದಿವ್ಯೌಷಧವಾಗಿದೆ. ಇದು ನಮ್ಮ ಅನೇಕ ಶಾರೀರಿಕ ಹಾಗೂ ಮಾನಸಿಕ ಕಾಯಿಲೆಗಳನ್ನು ದೂರ ಮಾಡಲಿದೆ ಎಂದು ಹೇಳಿದರು.

ನಗುವು ಮುಖದ ಎಲ್ಲ ಸ್ನಾಯುಗಳಿಗೂ ಉತ್ತಮ ವ್ಯಾಯಾಮವಾಗಿದೆ. ಹಾಸ್ಯದಿಂದ ಮನಸ್ಸು ಮುದಗೊಂಡಾಗ ದೇಹದಲ್ಲಿ ಉತ್ಪತ್ತಿಯಾಗುವ ಎಂಡಾ ರ್ಫಿನ್ ಗ್ರಂಥಿಯು ಅನೇಕ ಕಾಯಿಲೆಗಳನ್ನು ದೂರ ಮಾಡಬಲ್ಲದು ಎಂದರು.

ಜೀವನೋತ್ಸಾಹಕ್ಕೆ ಅವಶ್ಯವಾದ ಹಾಸ್ಯವು ಅನ್ಯರ ಲೇವಡಿ, ಟೀಕೆಗೆ ಮೀಸಲಾಗಬಾರದು. ಅದು ಆತ್ಮ ವಿಮರ್ಶೆಗೂ ಸಾಧನವಾದಾಗ ಸದಭಿರುಚಿಯ ಹಾಸ್ಯವಾಗಲಿದೆ. ಬಹುತೇಕ ಪ್ರಸಿದ್ಧ ಹಾಸ್ಯ ಪ್ರಸ್ತುತಿಗಾರರು, ಹರಟೆಗಾರರು ಕಳಪೆ ಹಾಸ್ಯದಿಂದಲೇ ಜನರಂಜನೆ ನೀಡುತ್ತಿರುವುದು ವಿಷಾದನೀಯ ಎಂದರು.

ಹಾಸ್ಯವು ದಡ್ಡತನದಲ್ಲೂ, ಬುದ್ಧಿವಂತಿಕೆಯ ಪರಮಾಧಿಯಲ್ಲೂ ಸೃಷ್ಟಿಯಾಗುತ್ತದೆ. ಬುದ್ಧಿವಂತಿಕೆ ಹಾಸ್ಯಗಳು ನಮ್ಮ ಬದುಕಿನ ಸವಾಲುಗಳಿಗೆ ಪರಿಹಾರದಂತೆಯೂ ಉಪಯುಕ್ತವಾಗಲಿವೆ ಎಂದು ಮಂಜುನಾಥ್ ಹೇಳಿದರು.

ಇದೇ ವೇಳೆ ಹಿರಿಯ ವೈದ್ಯರಾದ ದಿ. ಡಾ. ನಿರ್ಮಲ ಕೇಸರಿ ಅವರ 9ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಬಾಪೂಜಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ. ಗುರುಪ್ರಸಾದ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಹಿರಿಯ ಮಕ್ಕಳ ತಜ್ಞ ಡಾ. ಸುರೇಶ್ ಬಾಬು, ಡಾ. ಕೌಜಲಗಿ, ಡಾ. ಎಸ್.ಎಸ್. ಪ್ರಕಾಶ್, ಡಾ. ಮಧು ಪೂಜಾರ್, ಡಾ. ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!