ಪಾಲಿಕೆ ಬಜೆಟ್ ಪೂರ್ವ ಸಭೆ
ದಾವಣಗೆರೆ, ಜ. 8- ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಮೇಯರ್ ಕೆ. ಚಮನ್ ಸಾಬ್ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.
ಪಾಲಿಕೆಗೆ ಆದಾಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಅನಧಿಕೃತ ಪಿಜಿ (ಹಾಸ್ಟೆಲ್) ಮತ್ತು ಹೋಟೆಲ್‌ಗಳಿಗೆ ಕಡಿವಾಣ ಹಾಕುವುದು ಸೇರಿದಂತೆ, ಅನೇಕ ವಿಷಯಗಳ ಮೇಲೆ ಬೆಳಕು ಚಲ್ಲಲಾಯಿತು.
ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮಾತನಾಡಿ, ಮಹಾನಗರ ಪಾಲಿಕೆ ಆವರಣದಲ್ಲಿರುವ ಪುಟ್ಟಣ್ಣ ಕಣಗಾಲ್ ವಾದ್ಯ ಮಂಟಪದಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದ್ದು, ಅವುಗಳನ್ನು ಮತ್ತೆ ಆರಂಭಿಸಲು ಬಜೆಟ್ನಲ್ಲಿ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮೇಯರ್ ಕೆ. ಚಮನ್ ಸಾಬ್ ಅವರು, ನಗರದ ಜನತೆಗೆ ಸಂಗೀತದ ರಸದೌತಣ ನೀಡಲು ರಸಮಂಜರಿ ಕಾರ್ಯಕ್ರಮಗಳ ಆಯೋಜನೆ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.
ಗಾಂಧಿನಗರದ ಚಿದಾನಂದ್ ಮಾತನಾಡಿ, ಬೂದಾಳ್ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಪೌರ ಕಾರ್ಮಿಕರ ವಸತಿ ಗೃಹಗಳ ಮಕ್ಕಳಿಗೆ ವಾಚನಾಲಯ, ಅಂಗನವಾಡಿ ಕೇಂದ್ರ ತೆರೆಯುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತೆ ರೇಣುಕ ಅವರು, ಆರೋಗ್ಯ ಕೇಂದ್ರ ಮತ್ತು ವಾಚನಾಲಯ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗುವುದಾಗಿ ತಿಳಿಸಿದರು.
ಏಕಾಏಕಿ ಸಭೆಯಿಂದ ನಿರ್ಗಮಿಸಿದ ಆಯುಕ್ತರು: ಆಕ್ಷೇಪ
ಆಯ-ವ್ಯಯ ಸಭೆ ತಡವಾಗಿ ಆರಂಭವಾಯಿತು. ಕೆಲ ಸಮಯದ ನಂತರ ಹಾಜರಿದ್ದ ಆಯುಕ್ತೆ ರೇಣುಕ, ಏಕಾಏಕಿ ಸಭೆಯಿಂದ ನಿರ್ಗಮಿಸಿದರು. ಇದರಿಂದ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಸಾರ್ವಜನಿಕರ ಅಭಿಪ್ರಾಯ, ಸಲಹೆಗಳನ್ನು ಬಜೆಟ್ನಲ್ಲಿ ಸೇರ್ಪಡೆ ಮಾಡಿ ಅನುಷ್ಠಾನಕ್ಕೆ ತರಬೇಕಾದ ಜವಾಬ್ದಾರಿಯುತ ಅಧಿಕಾರಿ ಸಭೆಯಲ್ಲಿ ಇರದಿದ್ದರೆ ಸಭೆ ನಡೆಸಿ ಪ್ರಯೋಜವೇನು ಎಂದು ಹಾಜರಿದ್ದ ಕೆಲವರು ಸಭೆಯಿಂದ ಹೊರ ನಡೆಯಲು ಮುಂದಾದರು.
ಇದಕ್ಕೆ ಮೇಯರ್ ಕೆ. ಚಮನ್ ಸಾಬ್ ಅವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಇರುವ ಕಾರಣಕ್ಕಾಗಿ ಆಯುಕ್ತರು ಹೋಗಲೇಬೇಕಾಯಿತು ಎಂದು ಸಮಜಾಯಿಷಿ ನೀಡಿದಾಗ ಮತ್ತೆ ಸಭೆ ಮುಂದುವರೆಯಿತು.
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಜಿ.ಯಲ್ಲಪ್ಪ ಅವರು, ನಗರದ ಬಹುತೇಕ ವಾಣಿಜ್ಯ ಮಳಿಗೆಗಳ ಮಾಲೀಕರು ಉದ್ದಿಮೆ ಲೈಸೆನ್ಸ್ ನವೀಕರಣ ಮಾಡಿಕೊಳ್ಳುತ್ತಿಲ್ಲ. ಬ್ಯಾಂಕ್ ಸಾಲ ಪಡೆಯುವ ಸಂದರ್ಭ ದಲ್ಲಿ ಮಾತ್ರ ನವೀಕರಣಕ್ಕೆ ಮುಂದಾಗುತ್ತಾರೆ ಎಂದರು.
ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರು ಪರವಾನಗಿ ಇಲ್ಲದೇ ಬಾಡಿಗೆ ಮನೆ ಪಡೆದು ಅನಧಿಕೃತವಾಗಿ ಹಾಸ್ಟೆಲ್, ಪಿಜಿಗಳನ್ನು ಮತ್ತು ವಿದ್ಯಾರ್ಥಿ ಭವನದ ಬಳಿ ಅನೇಕ ಕಟ್ಟಡಗಳಲ್ಲಿ ಮಾಂಸಾಹಾರಿ ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ. ಕೆಲವು ಉದ್ದಿಮೆದಾರರು ಟ್ರೇಡ್ ಲೈಸೆನ್ಸ್ ಇಲ್ಲದೇ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಇದರಿಂದ ಮಹಾನಗರ ಪಾಲಿಕೆಗೆ ಬರಬೇಕಾಗಿದ್ದ ಆದಾಯ ಇಲ್ಲವಾಗಿದೆ. ಇವುಗಳಿಗೆ ಕಡಿವಾಣ ಹಾಕಿ ಪರವಾನಿಗೆ ನೀಡಿ ಪಾಲಿಕೆಗೆ ಆದಾಯವನ್ನು ಸಂಗ್ರಹಿಸುವಂತೆ ಸಲಹೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ (ಕೆ.ಎ. ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಮಹಾನಗರ ಪಾಲಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳಿದ್ದು, ಅವುಗಳಲ್ಲಿ ಕೆಲವು ಆಸ್ತಿಗಳನ್ನು ಕೆಲವರು ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದು, ಇದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದೇ ವೇಳೆ ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಅಧ್ಯಕ್ಷ ಸೋಮಲಾಪುರ ಹನುಮಂತಪ್ಪ, ಪತ್ರಕರ್ತ ಎ. ಫಕೃದ್ದೀನ್, ತಿಮ್ಮಣ್ಣ, ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸೋಮಶೇಖರ್ ಸೇರಿದಂತೆ ಅನೇಕರು ಸಲಹೆ-ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಉಪ ಮೇಯರ್ ಸೋಗಿ ಶಾಂತಕುಮಾರ್, ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ್ ಹುಲ್ಮನಿ, ಸುಧಾ ಇಟ್ಟಿಗುಡಿ ಮಂಜುನಾಥ್, ಆಶಾ ಉಮಾಶಂಕರ್, ಸದಸ್ಯ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ್, ಪಾಲಿಕೆ ಹಣಕಾಸು ಅಧಿಕಾರಿ ಪ್ರಿಯಾಂಕ ಮತ್ತಿತರರು ಉಪಸ್ಥಿತರಿದ್ದರು.