ಗದಗ-ಶಿವಮೊಗ್ಗ-ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜ ಹಿತ ನುಡಿ
ದಾವಣಗೆರೆ, ಡಿ. 31- ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಗದಗ – ಶಿವಮೊಗ್ಗ – ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರು ಕರೆ ನೀಡಿದರು.
ನಗರದ ಚೌಕಿಪೇಟೆಯಲ್ಲಿ ರುವ ಶ್ರೀ ಗುರು ಬಕ್ಕೇಶ್ವರ ಮಹಾ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ವಿರಚಿತ ಮಹಾ ದಾಸೋಹಿ ಕಲಬುರಗಿ ಶ್ರೀ ಶರಣ ಬಸವೇಶ್ವರರ ಪುರಾಣ ಪ್ರಾರಂಭೋತ್ಸವದ ನೇತೃತ್ವ ವಹಿಸಿ ಅವರು ಮಾತನಾಡಿದರು. ನಾಡಿನ ಅಂಧ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳು ಲಕ್ಷಾಂತರ ಮಕ್ಕಳ ಬದುಕಿಗೆ ಬೆಳಕಾಗಿದ್ದಾರೆಂದರು.
ಸಂಸ್ಕೃತಿ, ಸಂಸ್ಕಾರದ ಜೊತೆ ಇಂತಹ ಪವಿತ್ರ ಪುರಾಣ ಕೇಳುವ ಆಸಕ್ತಿಯನ್ನು ಬೆಳೆಸುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ಪ್ರತಿಯೊಬ್ಬರೂ ಸಹ ಪುರಾಣ ಕೇಳಿ ಪುಣ್ಯ ಪ್ರಾಪ್ತಿಯನ್ನು ಪಡೆದುಕೊಳ್ಳಿ ಎಂದು ಹಿತ ನುಡಿದರು.
ಪುರಾಣಗಳಲ್ಲೇ ಅತ್ಯಂತ ಶ್ರೇಷ್ಠವಾದ ಪುರಾಣ ಎಂದರೆ ದಾಸೋಹ ಮೂರ್ತಿ ಶರಣ ಬಸವೇಶ್ವರರ ಪುರಾಣ. ಇಂತಹ ಪುರಾಣ ಕೇಳುವ ಮನುಷ್ಯ ಜೀವಿಗೆ ಜೀವನದಲ್ಲಿ ಶ್ರೇಷ್ಠತೆ ಬರುತ್ತದೆ. ತಾವು ಮಾಡಿಕೊಂಡ ಸಂಕಲ್ಪ ಈಡೇರುತ್ತದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಯೊಬ್ಬ ಮನುಷ್ಯ ಕೂಡ ಧರ್ಮದ ತಳಹದಿಯ ಮೇಲೆ ಜೀವನ ಸಾಗಿಸಬೇಕು. ಧರ್ಮ ಮನುಷ್ಯನಿಗೆ ಸಂಸ್ಕಾರವನ್ನು ಕಲಿಸುತ್ತದೆ. ಸಾಮಾಜಿಕ ಚಿಂತನೆಯನ್ನು ಬೆಳೆಸುತ್ತದೆ ಎಂದರು.
ಸಮಾಜದಲ್ಲಿ ವಿದ್ಯಾವಂತ ಜನರೇ ಹೆಚ್ಚು ಮೋಸ, ವಂಚನೆಗೆ ಬಲಿಯಾಗುತ್ತಿದ್ದಾರೆ. ದುಶ್ಚಟಗಳ ದಾಸರಾಗುವುದಲ್ಲದೇ, ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವಂತಹ ಮಕ್ಕಳನ್ನೂ ಸಹ ನಾವು ಕಾಣುತ್ತೇವೆ. ಮಕ್ಕಳಿಗೆ ಸಂಸ್ಕಾರ ಕೊಟ್ಟರೆ ತಂದೆ-ತಾಯಿಗಳ ರಕ್ಷಣೆ ಮಾಡುತ್ತಾರೆ. ಆದ್ದರಿಂದ ಅಧ್ಯಾತ್ಮದ ಬದುಕು ನಿಮ್ಮದಾಗಬೇಕೆಂದು ಕರೆ ನೀಡಿದರು.
ಡಿವೈಎಸ್ಪಿ ರುದ್ರೇಶ್ ಉಜ್ಜಿನಿಕೊಪ್ಪ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಮರೆಯುತ್ತಿದ್ದೇವೆಯೇ ಎಂಬ ಆತಂಕ ನಮ್ಮದಾಗಿದೆ. ಭಾರತೀಯ, ಕರ್ನಾಟಕ ಸಂಸ್ಕೃತಿಗೆ ಮಾರು ಹೋಗಿ ಪಾಶ್ಚಾತ್ಯ ಸಂಸ್ಕೃತಿಯ ಮೊರೆ ಹೋಗುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು.
ನಾಡಿನ ಅನೇಕ ಮಠ – ಮಾನ್ಯಗಳು ಅನ್ನ ದಾಸೋಹದ ಜೊತೆಗೆ ಅಕ್ಷರ ದಾಸೋಹ ಮೂಲಕ ಜನರಿಗೆ ಧಾರ್ಮಿಕ ಶಿಕ್ಷಣ ನೀಡುವಲ್ಲಿ ಮುಂದಾಗಿರುವುದನ್ನು ನೋಡುತ್ತೇವೆ. ಪುಟ್ಟರಾಜ ಕವಿ ಗವಾಯಿಗಳು ಅಂಧ ಮಕ್ಕಳಿಗೆ ಸಂಗೀತ ಕಲಿಸುವ ಮೂಲಕ ಬಾಳಿಗೆ ಬೆಳಕಾಗಿದ್ದಾರೆ ಎಂದರು.
ಪುರಾಣಗಳಲ್ಲಿಯೇ ವಿಶೇಷವಾದುದು ಕಲಬುರಗಿ ಶರಣ ಬಸವೇಶ್ವರರ ಪುರಾಣ. ಪ್ರತಿಯೊಬ್ಬರೂ ಕೂಡ ಸತ್ಕಾರ್ಯಗಳನ್ನು ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಇಂಜಿನಿಯರ್, ಡಾಕ್ಟರ್ ಸೇರಿದಂತೆ ಅಧಿಕಾರಿಗಳೇ ಮೋಸ, ವಂಚನೆಗಳಿಗೆ ಬಲಿಯಾಗುತ್ತಿದ್ದು, ಹಣ ದ್ವಿಗುಣ ಮಾಡಿಕೊಡುತ್ತೇವೆ ಎಂಬುದು ಸೇರಿದಂತೆ ಅನೇಕ ಆಸೆ-ಆಮಿಷಗಳನ್ನು ವೊಡ್ಡಿ ಮೋಸದ ಜಾಲ ಬೀಸಿ ಹಣ ಲಪಟಾಯಿಸುವ ಕೆಲಸವನ್ನು ಮಾಡತ್ತಿದ್ದು, ಇದರಿಂದ ಎಚ್ಚರ ವಹಿಸುವ ಅಗತ್ಯ ಇದೆ ಎಂದರು.
ಯಾರಾದರೂ ತಮಗೆ ಮೋಸ ಮಾಡಲು ಬಂದರೆ ಅಥವಾ ದೌರ್ಜನ್ಯ, ಕಳ್ಳತನ ಮಾಡಲು ಬಂದರೆ ತಕ್ಷಣ ಪೊಲೀಸರಿಗೆ ಕರೆ ಮಾಡಿ (1930 ಮತ್ತು 112 ಸಂಖ್ಯೆಗೆ ದೂರು ನೀಡಿ) ದೂರು ನೀಡಿದರೆ ತಕ್ಷಣ ಪೊಲೀಸರು ಬಂದು ಅಗತ್ಯ ಕ್ರಮ ಕೈಗೊಳ್ಳುತ್ತಾರೆಂದು ಸೂಚನೆ ನೀಡಿದರು.
ಶ್ರೀ ಗುರು ಬಕ್ಕೇಶ್ವರ ದೇವಸ್ಥಾನ ಸಮಿತಿಯ ಮಾಗಾನಹಳ್ಳಿ ಜಯದೇವಪ್ಪ, ಮುಖಂಡರುಗಳಾದ ರಾಜಶೇಖರ ಗುಂಡಗಟ್ಟಿ, ಎಂ. ಬಸವರಾಜ್, ಶಿವಕುಮಾರ್ ಶೆಟ್ಟರ್, ಚನ್ನಬಸಯ್ಯ ಸ್ವಾಮಿ, ಮಂಜುನಾಥ ಶಾಸ್ತ್ರಿ ಶಿವಪೂಜಿ ಅಬ್ಬಿಗೇರಿ, ಹುಚ್ಚಯ್ಯ ಗವಾಯಿಗಳು ಹಿರೇಮಠ ರಾವಿಹಾಳ, ವೀರೇಶ್ ಹಿರೇಮಠ ರಾವಿಹಾಳ, ಆನಂದ ಆರ್.ಪಾಟೀಲ್, ಸುರೇಶ್ ಕೊಪ್ಪಳ, ರವಿಕುಮಾರ್, ಹಲವಾಗಲು ಶಿವಕುಮಾರ್, ರುದ್ರಣ್ಣ, ಗೋಪಾಲಪುರ ಜಿ.ಎಸ್. ಗುರುಶಾಂತ, ಲಿಂಗರಾಜ್, ಡಿ. ನಾಗರಾಜಪ್ಪ ಮತ್ತಿತರರು ಭಾಗವಹಿಸಿದ್ದರು.
ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳು ಪ್ರಾರ್ಥಿಸಿದರು. ಅಜ್ಜಂಪುರ ಶೆಟ್ರು ಮೃತ್ಯುಂಜಯ ಸ್ವಾಗತಿಸಿದರು. ವಿಘ್ನೇಶ್ವರ ಕಾನ್ವೆಂಟ್ ಕಾರ್ಯದರ್ಶಿ ಡಿ.ಎಸ್. ಪಂಚಾಕ್ಷರಿ ನಿರೂಪಿಸಿದರು.
ಇದೇ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಲಿಂ. ಮಾಗಾನಹಳ್ಳಿ ಶಿವಾನಂದಪ್ಪ, ಲಿಂ. ವೀರಪ್ಪ ಎಂ.ಬಾವಿ, ಲಿಂ. ಟಿ.ಕೆ.ಕರಿಬಸಪ್ಪ ಅವರುಗಳಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.