ಜ.5ರಂದು ರಾಜ್ಯಮಟ್ಟದ ಯುವಜನೋತ್ಸವ

ಜ.5ರಂದು ರಾಜ್ಯಮಟ್ಟದ ಯುವಜನೋತ್ಸವ

ಎಂಬಿಎ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ದಾವಣಗೆರೆ, ಡಿ.30- ಇದೇ ಜ.5 ಹಾಗೂ 6 ರಂದು ರಾಜ್ಯ ಮಟ್ಟದ ಯುವ ಜನೋತ್ಸವವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.  ಗಂಗಾಧರಸ್ವಾಮಿ ಹೇಳಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಅವರು, ಜನವರಿ 5ರಂದು ಎಂ.ಬಿ.ಎ ಮೈದಾನದ ಮುಖ್ಯ ವೇದಿಕೆಯಲ್ಲಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಯುವಜನೋತ್ಸವ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಯುವಜನೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ಮತ್ತು ಯುವ ಪ್ರಶಸ್ತಿ ಪುರಸ್ಕೃತರು ಭಾಗವಹಿಸಲಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ಈ ಸಮಾರಂಭಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಏಳು ಸ್ಪರ್ಧೆಗಳಲ್ಲಿ ಭಾಗವಹಿಸಲು ಯುವ ಸ್ಪರ್ಧಾಳು ಗಳು ಆಗಮಿಸಲಿದ್ದಾರೆ. ಇಲ್ಲಿನ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಮೊದಲ ಬಹುಮಾನ ವಾಗಿ 25000 ರೂ., ದ್ವಿತೀಯ 15000 ರೂ. ಮತ್ತು ತೃತೀಯ ಬಹುಮಾನವಾಗಿ 10000 ರೂ. ಗಳನ್ನು ಪ್ರಶಸ್ತಿ ಪತ್ರದೊಂದಿಗೆ  ನೀಡಲಾಗುತ್ತದೆ. ಇಲ್ಲಿ ವಿಜೇತರಾದವರು ಜನವರಿ 11 ಮತ್ತು 12 ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ ದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಜ.5 ರಂದು ಬೆಳಗ್ಗೆ  9 ಗಂಟೆಯಿಂದ ವಿವಿಧ ಕಲಾತಂಡಗಳೊಂದಿಗೆ ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳೊಂದಿಗೆ ಜನಪದ ಮೆರವಣಿಗೆ ಮೂಲಕ ಎಂಬಿಎ ಮೈದಾನಕ್ಕೆ ತೆರಳಿ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ. ಕಲಾಮೇಳದಲ್ಲಿ ದಕ್ಷಿಣ ವಲಯದ ಸಾಂಸ್ಕೃತಿಕ ಕೇಂದ್ರದಿಂದ 10 ಕ್ಕಿಂತ ಹೆಚ್ಚು ತಂಡಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 10 ಕ್ಕೂ ಹೆಚ್ಚು ಕಲಾ ತಂಡಗಳು ಸೇರಿದಂತೆ ವಿವಿಧ ಕಾಲೇಜುಗಳು ವಿದ್ಯಾರ್ಥಿಗಳ ತಂಡಗಳು ಕಲಾ ಮೇಳದಲ್ಲಿ ಭಾಗಿಯಾಗಲಿದ್ದು ಆಕರ್ಷಕ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ ಯುವ ಸ್ಪರ್ಧಾಳುಗಳಿಗೆ ಊಟ, ವಸತಿ ಸೇರಿದಂತೆ ಜಿಲ್ಲೆಯಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹಮ್ಮಿಕೊಳ್ಳಲು ಸೂಕ್ತ ವಾಹನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ಪರ್ಧಾಳುಗಳ ರಾತ್ರಿ ಊಟಕ್ಕೆ ಮಾಂಸಾಹಾರವನ್ನೂ ನೀಡಲು ತೀರ್ಮಾನಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್, ಪಾಲಿಕೆ ಆಯುಕ್ತೆ ರೇಣುಕಾ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!