ದಾವಣಗೆರೆ, ಡಿ. 18- ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತುಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಕಲಿಕೋತ್ಸವ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಾವೇ ತಯಾರಿಸಿದ್ದ ವಿವಿಧ ಮಾದರಿಗಳ ಬಗ್ಗೆ ಅತ್ಯಂತ ಸಂತಸದಿಂದ ಮಾಹಿತಿ ನೀಡಿದರು.
ಗಿಡ ಮೂಲಿಕೆ, ಆಯುರ್ವೇದ ಔಷಧಿ, ವೇದಿಕೆ ಅಲಂಕಾರದ ವಸ್ತುಗಳು, ಮನೆಯ ಅಲಂಕಾರಿಕ ಸಸಿಗಳು, ಕೃಷಿಗೆ ಸಂಬಂಧಿಸಿದ ಸಾಮಗ್ರಿಗಳು, ಮಳೆ ನೀರಿನ ಕೋಯ್ಲು, ಪರಿಸರ ಶಾಲೆ, ಮೇಣದ ಬತ್ತಿ ತಯಾರಿಕೆ, ಸಾಂಬಾರು ಪದಾರ್ಥಗಳ ತಯಾರಿಕೆ ಸೇರಿದಂತೆ ವಿವಿಧ ಮಾದರಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ದಾವಣಗೆೆರೆ ರಾಮಗೊಂಡನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ನಿರ್ಮಲ ಅವರ ಮಾರ್ಗದರ್ಶನದಲ್ಲಿ ಕಲ್ಪನಾ ರಮ್ಯ ಅವರು ತಯಾರಿಸಿದ್ದ ವೇದಿಕೆ ಅಲಂಕಾರ ಗಮನಸೆಳೆಯಿತು.
ಸಮಾಜಿಕ ಉಪಯೋಗಿತ ಉತ್ಪದನಾ ವಸ್ತುಗಳ ಕುರಿತಾದ ಮಾದರಿಗಳೇ ಹೆಚ್ಚಾಗಿ ಕಂಡು ಬಂದವು. ದಾವಣಗೆರೆ ತಾಲ್ಲೂಕಿನ ನಾಗನೂರು ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಭಾವನ, ಲಕ್ಷ್ಮೀ ಅವರ ಹರ್ಬಲ್ ಹಲ್ಲುಪುಡಿ, ಬಾದಾಮಿ ಮಾಲ್ಟ್, ಆಯೋಡೆಕ್ಸ್, ವ್ಯಾಸಲಿನ್, ಮೊಂಬತ್ತಿ ತಯಾರಿಕೆ , ಸಾಂಬಾರು ಪದಾರ್ಥಗಳ ಬಗ್ಗೆ ಮಾಹಿತಿ ನೀಡುವ ಮಾದರಿಗಳು ಕಣ್ಮನ ಸೆಳೆದವು.
ಅನುಪಯುಕ್ತ ವಸ್ತುಗಳಿಂದ ಗೃಹ ಬಳಕೆಯ ಮತ್ತು ಅಲಂಕಾರಿಕ ವಸ್ತುಗಳನ್ನು ಸಿದ್ದಪಡಿಸಿ ಪ್ರದರ್ಶನಕ್ಕೀಡುವ ಮೂಲಕ ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಿದರು.
ದಾವಣಗೆರೆ ಜಿಲ್ಲೆಯ 60 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ 120 ಅಧಿಕ ಮಕ್ಕಳು ತಮ್ಮ ಶಾಲೆಗಳಲ್ಲಿ ತಯಾರಿಸಿ ತಂದ ತೋಟಗಾರಿಕೆ, ಹೊಲಿಗೆ, ಸಾರ್ವಜನಿಕ ಉಪಯೋಗಿತ ವಸ್ತುಗಳನ್ನು ಪ್ರದರ್ಶಿಸುವ ಮೂಲಕ ಮನೆಯಲ್ಲಿಯೇ ನಿತ್ಯ ಉಪಯೋಗಿಸುವ ವಸ್ತುಗಳನ್ನು ತಯಾರು ಮಾಡಬಹುದು ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು.
ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಗೌರಮ್ಮ, ನಯನ ಇವರು ತಯಾರಿಸಿ ತಂದಿದ್ದ ಆಟಿಕೆಗಳು, ನಿತ್ಯ ಬಳಕೆಯ ವಸ್ತುಗಳು, ಬೊಂಬೆಗಳು, ಅಲಂಕಾರಿಕ ವಸ್ತುಗಳು ಜನರನ್ನು ಆಕರ್ಷಿಸಿದವು.
ನ್ಯಾಮತಿ ತಾಲ್ಲೂಕಿನ ಒಡೆಯರ ಹತ್ತೂರು ಗ್ರಾಮದ ಮಾಳಿಗೇರ ವೀರಪ್ ಚನ್ನಪ್ಪ ಪ್ರೌಢಶಾಲೆಯ ಅಕ್ಷತಾ, ಸಂಧ್ಯಾ ತಯಾರಿಸಿದ ಎತ್ತಿನಗಾಡಿ, ನೇಗಿಲು, ನೋಗ, ಹತ್ತಿಕುಂಟೆ ಸೇರಿದಂತೆ ಕೃಷಿ ಪರಿಕರಗಳನ್ನು ಪ್ರದರ್ಶಸಿದ್ದು ವಿಶೇಷವಾಗಿತ್ತು.
ಚನ್ನಗಿರಿ ತಾಲ್ಲೂಕಿನ ವಡ್ನಾಳು ಶ್ರೀ ಪರ್ವತ ಮಲ್ಲೇಶ್ವರ ಶಾಲೆಯ ಮಕ್ಕಳು ತಮ್ಮ ಪರಿಸರ ಸ್ನೇಹಿ ಶಾಲೆಯ ಮಾದರಿಯನ್ನೇ ಸಿದ್ದಪಡಿಸಿದ್ದರು.
ಹದಡಿ, ಕಾರಿಗನೂರು-ಕತ್ತಲಗೆರೆ, ಸಂತೇಬೆನ್ನೂರು, ದಾವಣಗೆರೆ ಡಿಆರ್ಆರ್ ಶಾಲೆಯ ವಿದ್ಯಾರ್ಥಿಗಳ
ವಿವಿಧ ರೀತಿಯ ಮಾದರಿಗಳು ವಸ್ತು
ಪ್ರದರ್ಶನಕ್ಕೆ ಕಳೆ ಕಟ್ಟುವಂತಿದ್ದವು. ವಿದ್ಯಾರ್ಥಿಗಳು ಸಹ ತಮ್ಮ ತಮ್ಮ ಮಾದರಿಗಳ ಮಾಹಿತಿ ನೀಡುವಲ್ಲಿ ಯಶಸ್ವಿಯಾದರು.
ಶಿಕ್ಷಕ ಗಂಗಾಧರ, ಭಾರತಿ, ಹಿರೇಸೋಮಣ್ಣನವರ್ ವಸ್ತುಪ್ರದರ್ಶನದ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಇದೇ ವೇಳೆ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎನ್.ವಿ. ಸತೀಶ್, ಸರಸ್ವತಿ, ಯಶೋಧಮ್ಮ ಮತ್ತಿತರರು ಭಾಗವಹಿಸಿದ್ದರು.