ಮೂರು ವರ್ಷ ಕಳೆದರೂ ಬಗೆಹರಿಯದ ಇ-ಖಾತಾ ಸಮಸ್ಯೆ
ರಾಜ್ಯದ 224 ಜನ ಶಾಸಕರ ಗಮನಕ್ಕೆ ಬಂದಿಲ್ಲವೇ? : ಜನರ ಪ್ರಶ್ನೆ
20 ವರ್ಷಗಳ ಹಿಂದೆ ನಿವೇಶಗಳನ್ನು ವಿಂಗಡಿಸಿ ಅದರ ಮಾಲೀಕರು ಪಟ್ಟಣ ಪಂಚಾಯತಿಯಿಂದ ಇ-ಸ್ವತ್ತು ಪಡೆದು ನಾಗರಿಕರಿಗೆ ಮಾರಾಟ ಮಾಡಿ ಕೈ ತೊಳೆದುಕೊಂಡಿದ್ದಾರೆ. ಆದರೆ ಈಗ ಆ ನಿವೇಶನ ಪಡೆದ ನಾಗರಿಕರು, ಅಧಿಕಾರಿಗಳು ಮಾಡಿದ ತಪ್ಪಿನಿಂದ ತೊಂದರೆ ಅನುಭವಿಸುವಂತಾಗಿದೆ.
ಜಗಳೂರು, ಡಿ.16- ರಾಜ್ಯಾದ್ಯಂತ ಹಲವು ವರ್ಷಗಳಿಂದ ಇ-ಖಾತಾ ಸಮಸ್ಯೆ ಸಾರ್ವಜನಿಕರನ್ನು ಕಾಡುತ್ತಿದೆ. ಗ್ರಾಮೀಣ ಪ್ರದೇಶದ ಈ ಖಾತಾ ಸಮಸ್ಯೆ ಒಂದು ತರಹದ್ದಾದರೆ, ಪಟ್ಟಣ ಪ್ರದೇಶದ ನಿವೇಶನಗಳ ಇ-ಖಾತಾ ಸಮಸ್ಯೆಯೇ ಮತ್ತೊಂದು ರೀತಿಯದ್ದಾಗಿದೆ.
ರಾಜ್ಯಾದ್ಯಂತ ಪಟ್ಟಣ ಪ್ರದೇಶ ವ್ಯಾಪ್ತಿಯ ನಿವೇಶನಗಳ ಇ-ಖಾತಾ ಸಮಸ್ಯೆ ಕಳೆದ ಮೂರು ವರ್ಷಗಳಿಂದ ಬಗೆ ಹರಿಯದೇ ಇರುವುದರಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಸ್ಥಳೀಯ ಜನ ಪ್ರತಿನಿಧಿಗಳು, ಪಟ್ಟಣ ಪಂಚಾಯಿತಿ ಹಾಗೂ ಪುರ ಸಭೆಯ ಅಧಿಕಾರಿಗಳು ನಿವೇಶನಗಳ ಇ-ಖಾತಾ ಸಮಸ್ಯೆ ಪರಿಹರಿಸುವ ಗೋಜಿಗೆ ಹೋದಂತಿಲ್ಲ. ಇದರಿಂದಾಗಿ ಇ-ಖಾತಾ ಪಡೆಯದೆ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಲು, ಸಾಲ ಸೌಲಭ್ಯ ಪಡೆಯಲು ಹಾಗೂ ಮಾರಾಟ ಮಾಡಲು ಆಗದಿರುವುದರಿಂದ ಜನರ ಗೋಳು ಹೇಳ ತೀರದಾಗಿದೆ.
ಸರ್ಕಾರಕ್ಕೆ ಮುದ್ರಾಂಕ ಆದಾಯ ಕಡಿಮೆಯಾಗಿದೆ. ಆದರೂ ಸರ್ಕಾರ ಆಗಿರುವ ಸಮಸ್ಯೆಯ ಪರಿಹಾರಕ್ಕೆ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ ಎಂದು ನಿವೇಶನಕ್ಕಾಗಿ ಕಳೆದ 3 ವರ್ಷ ಗಳಿಂದ ಅಲೆಯುತ್ತಿರುವ ಬಸವರಾಜ್ ನಾಯಕ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಇ-ಖಾತಾ ಸಮಸ್ಯೆ : ರಾಜ್ಯಾದ್ಯಂತ ಉಂಟಾಗಿರುವ ಈ ಸಮಸ್ಯೆಗೆ ಸಂಬಂಧಿಸಿದಂತೆ ಜಗಳೂರು ಪಟ್ಟಣದ 13 ಬಡಾವಣೆಗಳಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಇ-ಖಾತೆಯನ್ನು ನೀಡುತ್ತಿಲ್ಲ. ಆದರೆ ಈ ಎಲ್ಲಾ ಬಡಾವಣೆಗಳ ಸಾವಿರಾರು ನಿವೇಶನಗಳಿಗೆ ಮತ್ತು ಕಟ್ಟಡಗಳಿಗೆ ಪ್ರತಿ ವರ್ಷವೂ ಸ್ಥಳೀಯ ಪಟ್ಟಣ ಪಂಚಾಯ್ತಿ ಕಂದಾಯ ಕಟ್ಟಿಸಿಕೊಳ್ಳುತ್ತಿದೆ.
2001ರ ಹಿಂದೆ ಅಂದಿನ ನಿಯಮಾನುಸಾರ ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿಗಳಿಂದ ಜಮೀನು ಭೂ-ಪರಿವರ್ತನೆಯಾಗಿ, ನಿವೇಶನಗಳನ್ನು ವಿಂಗಡಿಸಿ, ಹೊಸ ಬಡಾವಣೆಗಳನ್ನು ನಿರ್ಮಿಸಿ, ನಿಯ ಮಾನುಸಾರ ಪಟ್ಟಣ ಪಂಚಾಯಿತಿಗೆ ಅಭಿವೃದ್ಧಿ ಶುಲ್ಕ ಪಾವತಿಸಿ, ಪಟ್ಟಣ ಪಂಚಾಯಿತಿಯಿಂದ ಖಾತೆ ತೆರೆಯಲಾಗಿದೆ.
ಕಳೆದ 20 ವರ್ಷಗಳಿಂದ ಈ ಎಲ್ಲಾ ಬಡಾವಣೆಗಳ ಸಾವಿರಾರು ನಿವೇಶನಗಳಿಗೆ ಇ-ಸ್ವತ್ತು ನೀಡಲಾಗಿದೆ. ನೂರಾರು ಕೋಟಿ ಸಾಲ ಸೌಲಭ್ಯಗಳನ್ನು ವಿವಿಧ ಬ್ಯಾಂಕುಗಳಲ್ಲಿ ಪಡೆಯಲಾಗಿದೆ. ಆದರೆ ಈ ಎಲ್ಲಾ 13 ಬಡಾವಣೆಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಸರ್ಕಾರದ ಆದೇಶದ ಅನ್ವಯ ಇ-ಖಾತಾ, ಇ-ಸ್ವತ್ತು ನೀಡುವುದನ್ನು ಸ್ಥಳಿಯ ಪಟ್ಟಣ ಪಂಚಾಯಿತಿ ನಿಲ್ಲಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಗ್ರಾಯೋನಿ/ಕಟ್ಟಡ ಪರವಾನಿಗೆ/ಸುತ್ತೋಲೆ/2015-16 ದಿನಾಂಕ:22-01-2016 ಮತ್ತು ದಿನಾಂಕ : 04-05-2017. ಜಿಲ್ಲಾಧಿಕಾರಿಗಳಿಂದ ನಿಯಮಾನುಸಾರ ಭೂ-ಪರಿವರ್ತನೆಯಾಗಿದ್ದು, ನಿಯಮಾನು ಸಾರ ಸರ್ಕಾರಕ್ಕೆ ಅಭಿವೃದ್ಧಿ ಶುಲ್ಕವನ್ನು ಪಾವತಿಸಿ, ಸ್ಥಳೀಯ ಸಂಸ್ಥೆಗಳ ಅನುಮೋದನೆ ಮೇರೆಗೆ ಹೊಸ ಬಡಾವಣೆಗಳನ್ನು ನಿರ್ಮಿಸಿ ನಿವೇಶನಗಳಿಗೆ ಖಾತೆ ತೆರೆದು, ಇ-ಸ್ವತ್ತು ನೀಡಿದ್ದರೂ ಸಹ 20 ವರ್ಷಗಳ ನಂತರ ಸರ್ಕಾರವು ಈ ಬಡಾವಣೆಗಳನ್ನು ಅನಧಿಕೃತ ಎಂದು ತೀರ್ಮಾನಿಸಿ ಇ-ಸ್ವತ್ತು ನೀಡದಂತೆ ಸುತ್ತೋಲೆ ಹೊರಡಿಸಿರುವುದು ಅವೈಜ್ಞಾನಿಕ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯದಿರುವುದರಿಂದ ಈ ಬಡಾವಣೆಗಳನ್ನು ಅನಧಿಕೃತ ಎಂದು ತೀರ್ಮಾನಿಸಿರುವ ಸರ್ಕಾರ, ಈ ಬಡಾವಣೆಗಳಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದು, ಸ್ಥಳೀಯ ಸಂಸ್ಥೆಯವರು ಖಾತೆ ತೆರೆದು ಇ-ಸ್ವತ್ತು ನೀಡಿದ್ದರೂ ಸಹ ಅನಧಿಕೃತ ಎಂದು ಘೋಷಿಸಿದರೆ ಈ ತಪ್ಪಿನ ಹೊಣೆ ಯಾರದು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸ್ಥಳೀಯ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆಯದೇ ಇರುವ ನಿವೇಶನಗಳಿಗೆ ಸ್ಥಳೀಯ ಪಟ್ಟಣ ಪಂಚಾಯಿತಿಯವರು ಖಾತೆ ತೆರೆದು ಇ-ಸ್ವತ್ತು ನೀಡಿದ್ದು ಏಕೆ ? ಜಿಲ್ಲಾಧಿಕಾರಿಗಳು ಭೂಮಿಯನ್ನು ಭೂ-ಪರಿವರ್ತನೆ ಮಾಡಿ ಶುಲ್ಕ ಪಾವತಿಸಿಕೊಂಡಿದ್ದು ಏಕೆ? ಅನಧಿಕೃತ ಎಂಬುದು 20 ವರ್ಷಗಳ ನಂತರ ಸರ್ಕಾರಕ್ಕೆ ತಿಳಿದು ಬಂದಿದೆ. ಹಾಗಾದರೆ ಇದಕ್ಕೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು ಯಾವಾಗ ? `ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ’ ಎಂಬ ಗಾದೆಯಂತೆ ಸ್ಥಳೀಯ ಸಂಸ್ಥೆಯ ಜನ ಪ್ರತಿನಿಧಿಗಳು, ಮುಖ್ಯ ಅಧಿಕಾರಿಗಳು ಮಾಡಿದ ತಪ್ಪಿಗೆ ಸಾರ್ವಜನಿಕರಿಗೆ ಶಿಕ್ಷೆ ನೀಡುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿ ಉಳಿದಿದೆ.
20 ವರ್ಷಗಳ ಹಿಂದೆ ನಿವೇಶಗಳನ್ನು ವಿಂಗಡಿಸಿ ಅದರ ಮಾಲೀಕರು ಪಟ್ಟಣ ಪಂಚಾಯತಿಯಿಂದ ಇ-ಸ್ವತ್ತು ಪಡೆದು ನಾಗರಿಕರಿಗೆ ಮಾರಾಟ ಮಾಡಿ ಕೈ ತೊಳೆದುಕೊಂಡಿದ್ದಾರೆ. ಆದರೆ ಈಗ ಆ ನಿವೇಶನ ಪಡೆದ ನಾಗರಿಕರು, ಅಧಿಕಾರಿಗಳು ಮಾಡಿದ ತಪ್ಪಿನಿಂದ ತೊಂದರೆ ಅನುಭವಿಸುವಂತಾಗಿದೆ.
ಈ ಎಲ್ಲ ಬಡಾವಣೆಗಳಿಗೆ ಇ-ಸ್ವತ್ತು ನೀಡದೇ ಇದ್ದರೂ ಸಹ ಸ್ಥಳೀಯ ಸಂಸ್ಥೆ ಕಂದಾಯ ಪಡೆಯುತ್ತಿರುವುದು ಏಕೆ? ಕಂದಾಯ ಪಡೆದುಕೊಂಡರೆ, ಇ-ಸ್ವತ್ತು ನೀಡುವುದು ಸ್ಥಳೀಯ ಸಂಸ್ಥೆಯ ಜವಾಬ್ದಾರಿ ಆಗಿದೆ.
ಇಂತಹ ನಿವೇಶನ ಪಡೆದು ನಾಲ್ಕು ವರ್ಷಗಳಿಂದ ತೊಂದರೆಗೀಡಾದ ನಾಗರಿಕರ ಸಮಸ್ಯೆ ಇಡೀ ರಾಜ್ಯದ 224 ಶಾಸಕರ ಗಮನಕ್ಕೆ ಬಂದಂತೆ ಕಾಣುತ್ತಿಲ್ಲ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಈ ಸಮಸ್ಯೆಗೆ ಪರಿಹಾರ ಸೂಚಿಸಲು ಸಮಿತಿಯೊಂದನ್ನು ರಚಿಸಲಾಯಿತು ಎಂಬ ಚರ್ಚೆ ಆಯಿತು. ಆದರೆ ಈವರೆಗೂ ಸಮಸ್ಯೆಗೆ ಪರಿಹಾರ ಕಲ್ಪಿಸುವ ಸರ್ಕಾರದ ಯಾವುದೇ ಆದೇಶ ಹೊರ ಬಿದ್ದಿಲ್ಲ.
ಅಧಿಕೃತ ಮತ್ತು ಅನಧಿಕೃತ ಬಡಾವಣೆಯಲ್ಲಿ ನಿವೇಶನ, ಮನೆ ಹಾಗೂ ಕಟ್ಟಡ ಹೊಂದಿರುವ ಬಡ, ಮಧ್ಯಮ ವರ್ಗದ ನಾಗರಿಕರು ಹೊಸ ಮನೆ ಕಟ್ಟಲು, ಸಾಲ ಪಡೆಯಲು ಹಾಗೂ ಮಾರಾಟ ಮಾಡಲು ಇ-ಸ್ವತ್ತು ಅನಿವಾರ್ಯವಾಗಿದೆ. ಈ ಸಮಸ್ಯೆಗೆ ಸಿಲುಕಿದ ಸಾರ್ವಜನಿಕರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಾದರೂ ಇಂತಹ ಬಡಾವಣೆಗಳ ಇ-ಖಾತಾ ಸಮಸ್ಯೆಗೆ ಸರ್ಕಾರ ಪರಿಹಾರ ಸೂಚಿಸುವ ಮೂಲಕ ಹೊಸ ಆದೇಶ ಹೊರಡಿಸಬೇಕೆಂದು ಈ ಬಡಾವಣೆ ವ್ಯಾಪ್ತಿಯ ನಾಗರಿಕರು ಒತ್ತಾಯಿಸಿದ್ದಾರೆ.
– ಬಿ.ಪಿ.ಸುಭಾನ್, [email protected]