ದಾವಣಗೆರೆ, ನ.29- ನಗರವನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡುವ ಮೂಲಕ ಧೂಳು ಮುಕ್ತ ನಗರ ಮಾಡಲಾಗಿದ್ದು, ಉದ್ಯಾನವನಗಳ ಅಭಿವೃದ್ಧಿಯನ್ನು ಈಗಾಗಲೇ ಮಾಡಲಾಗಿದ್ದು, `ಹಸಿರು ದಾವಣಗೆರೆ’ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ ಎಂದು ಸಂಸದ ರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಇಲ್ಲಿನ ಪಾಲಿಕೆ ಆವರಣದಲ್ಲಿನ ರಂಗಮಂದಿರದಲ್ಲಿ ಮಹಾನಗರ ಪಾಲಿಕೆ, ಕನ್ನಡ ಪರ ಸಂಘ-ಸಂಸ್ಥೆಗಳು ಹಾಗೂ ಪತ್ರಕರ್ತರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾನಗರ ಪಾಲಿಕೆಯಲ್ಲಿ ನಾಲ್ವರು ಮಹಿಳೆಯರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದು, ಮಹಿಳಾ ಪಡೆಯೇ ತಯಾರಾಗಿದೆ. ಪ್ರತಿಯೊಬ್ಬರೂ ಸಹಕರಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸೋಣ ಎಂದರು.
ರಾಜ್ಯದ 10 ಮಹಾನಗರ ಪಾಲಿಕೆಗಳ ಪೈಕಿ ದಾವಣಗೆರೆ ಮಹಾನಗರ ಪಾಲಿಕೆಗೆ ಮಾತ್ರ 50 ಲಕ್ಷ ರೂ. ವೆಚ್ಚದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹಣ ಬಿಡುಗಡೆ ಮಾಡಿದೆ. ಇಡೀ ರಾಜ್ಯದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ರಾಜ್ಯದ ಎಲ್ಲಾ ಅಂಗಡಿ, ಮುಂಗಟ್ಟುಗಳ ನಾಮಫಲಕಗಳು ಕಡ್ಡಾಯವಾಗಿ ಶೇ. 60 ರಷ್ಟು ಕನ್ನಡದಲ್ಲಿಯೇ ಇರಬೇಕೆಂಬ ಸೂಚನೆಯನ್ನು ಹೊರಡಿಸಿದ್ದು, ಅದರಂತೆ ಎಲ್ಲಾ ಜಿಲ್ಲೆಗಳಲ್ಲೂ ಕ್ರಮ ಜರುಗಿಸಲಾಗಿದೆ ಎಂದರು.
ಕನ್ನಡ ಭಾಷೆಯ ಅಭಿಮಾನ, ಪ್ರೀತಿ, ಕಾಳಜಿಯನ್ನು ಮೂಡಿಸುವ ನಿಟ್ಟಿನಲ್ಲಿ ಕನ್ನಡ ನಾಡು-ನುಡಿ, ನೆಲ-ಜಲ ಸಂರಕ್ಷಣೆಗೆ ಮುಂದಾಗುವ ಮೂಲಕ ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡೋಣ ಎಂದು ಹೇಳಿದರು.
ನಾಡಿನ ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಮಾತನಾಡಿ, ಕರುನಾಡನ್ನು `ಸರ್ವಜನಾಂಗದ ಶಾಂತಿಯ ತೋಟ’ವನ್ನಾಗಿ ಮಾಡುವತ್ತ ಎಲ್ಲರೂ ಚಿತ್ತ ಹರಿಸಬೇಕು. ಎಲ್ಲಾ ಕವಿಗಳ ಆಶಯ ಕೂಡ ಎಂದು ಹೇಳಿದರು.
ಮೇಯರ್ ಚಮನ್ ಸಾಬ್ ಹೇಳುವಂತೆ ಕನ್ನಡ ರಾಜ್ಯೋತ್ಸವ, ರಸಮಂಜರಿ, ಜನಪದ ವೈಭವದಂತಹ ಕಾರ್ಯಕ್ರಮಗಳು ಕೇವಲ ಮನರಂಜನೆ ನೀಡುವುದಷ್ಟೇ ಅಲ್ಲದೇ ಸೌಹಾರ್ದತೆ ಬೆಸೆಯುವ ನಿಟ್ಟಿನಲ್ಲಿ ಆಗಲಿ ಎಂದರು.
ಕವಿ ಬರೆದ ಕವಿತೆಗಳು ಜನಪದೀಯ ಗೀತೆಗಳಾಗಿ ಜನರನ್ನು ನೇರವಾಗಿ ತಲುಪಿದರೆ, ಕವಿ ಧನ್ಯನಾಗುತ್ತಾನೆ ಎಂದು ಹೇಳಿದರು.
ಶಾಯಿರಿ ಕವಿ ಅಸಾದುಲ್ಲಾ ಬೇಗ್ ತಮ್ಮ ಶಾಯಿರಿಗಳ ಮೂಲಕ ಸಹೃದಯ ಪ್ರೇಕ್ಷಕರನ್ನು ರಂಜಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 120 ಸಾಧಕರನ್ನು ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಜಿ.ಎನ್. ಗಂಗಾಧರ ಸ್ವಾಮಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್ ಮಾತನಾಡಿದರು.
ಟಿವಿ9 ವರದಿಗಾರ ಬಸವರಾಜ್ ದೊಡ್ಮನಿ, ಆಯುಕ್ತ ರಾದ ರೇಣುಕಾ, ಉಪ ಆಯುಕ್ತೆ ಲಕ್ಷ್ಮೀ, ಮೇಯರ್ ಕೆ. ಚಮನ್ ಸಾಬ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪ ಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ್ ಹುಲ್ಮನಿ, ಆಶಾ ಉಮಾ ಶಂಕರ್, ಸುಧಾ ಮಂಜುನಾಥ್ ಇಟ್ಟಿಗುಡಿ, ಉರ್‌ಬಾನು, ಸದಸ್ಯರಾದ ಕೆ. ಪ್ರಸನ್ನಕುಮಾರ್, ಎಸ್.ಟಿ. ವೀರೇಶ್, ಎ. ನಾಗರಾಜ್, ಮೀನಾಕ್ಷಿ ಜಗದೀಶ್, ಎಲ್.ಎಂ.ಹೆಚ್. ಸಾಗರ್, ಕನ್ನಡ ಪರ ಹೋರಾಟಗಾರ ಕೆ.ಜಿ. ಶಿವಕುಮಾರ್, ನೌಕರರ ಸಂಘದ ಬಸವರಾಜಯ್ಯ, ಗೋವಿಂದರಾಜ್, ಕರವೇ ಅಧ್ಯಕ್ಷರಾದ ಎಂ.ಎಸ್. ರಾಮೇಗೌಡ, ಜಮ್ನಳ್ಳಿ ನಾಗರಾಜ್, ಶಾಂತಮ್ಮ, ರಾಧಾಬಾಯಿ,
ಬಾಲು ಮತ್ತು ತಂಡದ ಕಲಾವಿದರ `ಜಂಭೆ ಝಲಕ್’ ಕಾರ್ಯಕ್ರಮ ಮೇಯರ್ ಕೆ. ಚಮನ್ ಸಾಬ್ ಅವರನ್ನು ಮೊದಲ್ಗೊಂಡು ವೇದಿಕೆ ಮೇಲಿನ ಗಣ್ಯರು, ನೆರೆದ ಸರ್ವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಇದಕ್ಕೂ ಮುನ್ನ ನಡೆಸಿಕೊಟ್ಟ ಜನಪದ ಸಂಗೀತ ಕಾರ್ಯಕ್ರಮ ಕಣ್ಮನ ಸೆಳೆಯಿತು.
ವೇದಿಕೆ ಕಾರ್ಯಕ್ರಮದ ನಂತರ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರ ಕರ್ನಾಟಕ ಗೀತ ವೈಭವ ಹಾಗೂ ಜೂನಿಯರ್ ವಿಷ್ಣುವರ್ಧನ ಅವರ ಮಿಮಿಕ್ರಿ ಕಾರ್ಯಕ್ರಮ ಜರುಗಿತು.