ಚಾಣಾಕ್ಷತನ ಆಟ ಚದುರಂಗದಲ್ಲಿ ಭಾಗವಹಿಸಲು ಕರೆ

ಚಾಣಾಕ್ಷತನ ಆಟ ಚದುರಂಗದಲ್ಲಿ ಭಾಗವಹಿಸಲು ಕರೆ

ದಾವಣಗೆರೆ, ನ.28-  ನಗರದ ಧ.ರಾ.ಮ. ವಿಜ್ಞಾನ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ದಾವಣಗೆರೆ ವಿವಿ ದೈಹಿಕ ಶಿಕ್ಷಣ ಸಂಘ ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು, ಪುರುಷ ಮತ್ತು ಮಹಿಳೆಯರ ಚದುರಂಗ ಪಂದ್ಯಾವಳಿ ಮತ್ತು ತಂಡದ ಆಯ್ಕೆ ಸಮಾರಂಭವನ್ನು ದೂಡಾ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸಾಂಸ್ಕೃತಿಕ ಮತ್ತು ಜಿಲ್ಲಾ ಕ್ರೀಡಾಪಟುಗಳ ಸಂಘ  ಆಯೋಜಿಸಿರುವ ಚದುರಂಗ ಆಟ ಎಂಬುದು ಒಂದು ಬೌದ್ಧಿಕ ಕಸರತ್ತಿನಿಂದ ಕೂಡಿದ ಹಾಗೂ ಚಾಣಾಕ್ಷತನ ಹೊಂದಿದ ಆಟವಾಗಿದ್ದು, ಇಂಥಹ ಆಟಗಳಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಭಾಗವಹಿಸಿ, ತಮ್ಮ ಸೃಜನ ಶೀಲತೆಯನ್ನು ತೋರ್ಪಡಿಸಬೇಕೆಂದು ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಾವಿವಿ ಕ್ರೀಡಾಧಿಕಾರಿ ಡಾ. ಬಿ. ಹೆಚ್. ವೀರಪ್ಪ ಅವರು ಮಾತನಾಡಿ, ಮಹಾಭಾರತ ಕಾಲದಲ್ಲಿಯೇ ಚದುರಂಗದ ಆಟ ಇತ್ತು ಎಂದು ಹೇಳುತ್ತಾ, ಇಂದು ಖುಷಿಕೊಡುವ ಗ್ರಾಮದ ಆಟಗಳು ಕಣ್ಮರೆಯಾಗುವುತ್ತಿರುವುದು ವಿಷಾದನೀಯ ಸಂಗತಿ ಎಂದು ತಿಳಿ ಹೇಳಿದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದಾವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಕಾರ್ಯದರ್ಶಿ  ಡಾ. ಕೆ.ಎಂ. ವೀರೇಂದ್ರ ಮಾತನಾಡಿ,  ದಾವಣಗೆರೆ ವಿಶ್ವವಿದ್ಯಾನಿಲಯವು ಕ್ರೀಡಾ ಕ್ಷೇತ್ರದಲ್ಲಿ ಅದ್ಭುತವಾದ ದಾಪುಗಾಲು ಹಾಕುತ್ತಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಎಂ. ಪಿ. ರೂಪಶ್ರೀ ಅವರು ಮಾತನಾಡಿ,  ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವು ಮುಖ್ಯವಲ್ಲ. ಸಕ್ರಿಯವಾಗಿ ಪಾಲ್ಗೊಂಡು ಸುಂದರವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ತಿಳಿ ಹೇಳಿದರು.

ವಿದ್ಯಾರ್ಥಿನಿಯರಾದ ಅಮೃತ ಮತ್ತು ತೇಜಸ್ವಿನಿ ಪ್ರಾರ್ಥಿಸಿದರೆ, ಕ್ರೀಡಾ ವಿಭಾಗದ ಸಂಚಾಲಕರು ಡಾ. ಗಿರಿಮಲ್ಲೇಶ್ವರ ಬಗರಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಸಂಘಟನಾ ಕಾರ್ಯದರ್ಶಿ ಡಾ.ಪ್ರಶಾಂತ್ ಕುಮಾರ್ ಪಿ. ಎನ್. ಹಾಗೂ ಐ.ಕ್ಯು.ಎ.ಸಿ.ಸಂಯೋಜಕ ಡಾ. ಮಂಜುರಾಜ್ ಟಿ. ಉಪಸ್ಥಿತರಿದ್ದರು. 

ಕನ್ನಡ ವಿಭಾಗದ ಮುಖ್ಯಸ್ಥ ಶಿವಪ್ಪ ಮುಳ್ಳೂರ ನಿರೂಪಿಸಿದರೆ, ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಶ್ರೀರಂಗಪ್ಪ ಎಂ. ಆರ್. ವಂದಿಸಿದರು.

error: Content is protected !!