ಸಮಾಜದಲ್ಲಿ ತಾರತಮ್ಯ, ಅಸಮಾನತೆ ತೊಲಗಲಿ

ಸಮಾಜದಲ್ಲಿ ತಾರತಮ್ಯ, ಅಸಮಾನತೆ ತೊಲಗಲಿ

ಸಂವಿಧಾನ ದಿನಾಚರಣೆ, ಕರ್ನಾಟಕ ರಾಜ್ಯೋತ್ಸವದಲ್ಲಿ ನ್ಯಾ. ಹೆಚ್. ಬಿಲ್ಲಪ್ಪ

ದಾವಣಗೆರೆ, ನ.26- ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳೇ ಕಳೆದರೂ ಸಮಾಜದಲ್ಲಿ ಇನ್ನೂ ಅಸಮಾನತೆ ಎದ್ದು ಕಾಣುತ್ತಿದೆ ಎಂದು ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ವಕೀಲರ ಸಂಘದ ವತಿಯಿಂದ ಇಲ್ಲಿನ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ `ಸಂವಿಧಾನ ದಿನಾಚರಣೆ’ ಮತ್ತು `ಕರ್ನಾಟಕ ರಾಜ್ಯೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಕೆಲವರು ಸಾಮಾಜಿಕ ನ್ಯಾಯ, ಶಿಕ್ಷಣ, ಸರ್ಕಾರಿ ಸೌಲಭ್ಯ ಹಾಗೂ ಅವಕಾಶಗಳಿಂದ ವಂಚಿತರಾಗಿದ್ದು, ಇವರ ಕೊರಗು ಸಮಾಜದ ಒಂದೆಡೆ ಕೇಳಿಸಿದರೆ, ಮತ್ತೊಂದೆಡೆ ಧರ್ಮ, ಜಾತಿ, ಲಿಂಗ ಹಾಗೂ ಬಣ್ಣದ ಆಧಾರದ ಮೇಲೆ ಅನೇಕ ತಾರತಮ್ಯಗಳು ಇಂದಿಗೂ ನಡೆಯುತ್ತಿದ್ದು, ಇದನ್ನು ಸರಿಪಡಿಸಲು ಸಂವಿಧಾನದ ವಿದ್ಯಾರ್ಥಿ ಗಳು ಪ್ರಯತ್ನ ಪಡಬೇಕು ಎಂದು ಹೇಳಿದರು.

ಪ್ರತಿಯೊಬ್ಬರ ಆಚಾರ-ವಿಚಾರಗಳು ವೈಯಕ್ತಿ ಕವಾಗಿ ಇರಬೇಕೇ ವಿನಹ: ಅವುಗಳನ್ನು ಸಾರ್ವಜ ನಿಕವಾಗಿ ಮಾಡಬಾರದು. ಈ ನಿಟ್ಟಿನಲ್ಲಿ ಸಮಾಜ ದಲ್ಲಿ ಎಲ್ಲರೂ ಸಾರ್ವಜನಿಕವಾಗಿ ಬದುಕುವ ಜತೆಗೆ ಸಂವಿಧಾನವನ್ನು ಪಾಲಿಸಬೇಕು ಎಂದು ತಿಳಿಸಿದರು. ಸಮಾಜದಲ್ಲಿ ಶಾಂತಿ ದೂರಾಗಿದ್ದರಿಂದ ಎಲ್ಲೆಡೆಯೂ ವಿವಾದವೇ ಕಾಣುತ್ತಿದೆ. ಹಾಗಾಗಿ ಸಂವಿಧಾನ ಹಾಗೂ ಕಾನೂನುನನ್ನು ಗೌರವಿಸಿ ನಡೆದರೆ ಸಮಾಜದಲ್ಲಿ ಅಶಾಂತಿ ಹೋಗಲಾಡಿಸಬಹುದು. ಸಂವಿಧಾನವು ದೇಶದ ಪ್ರಜೆಗಳಿಗೆ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಮತ್ತು ಸಮಾನ ಅವಕಾಶವನ್ನು ನೀಡಿದೆ ಎಂದರು.

ಗ್ರಾಮೀಣ ಮೂಲದಿಂದ ಕನ್ನಡ ಭಾಷೆ ಉಳಿಯುತ್ತಿದೆ. ಕನ್ನಡಿಗರು ಪರರಿಗೂ ನಮ್ಮ ಭಾಷೆ ಕಲಿಸಲು ಮುಂದಾಗಬೇಕು. ಆದರೆ ಅವರನ್ನು ಅಲ್ಲಗಳೆಯಬಾರದು ಎಂದು ಹೇಳಿದರು. ಕಲೆ, ಸಾಹಿತ್ಯ, ಭಾಷೆ ಹಾಗೂ ಪ್ರಾಕೃತಿಕವಾಗಿ ಕನ್ನಡ ನಾಡು ಶ್ರೀಮಂತವಾಗಿದೆ. ಶ್ರೇಷ್ಠ ಜೀವನ ಕಟ್ಟಿಕೊಳ್ಳಲು ಈ ನಾಡು ಸಹಾಯಕವಾಗಿದೆ ಎಂದು ಬಣ್ಣಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್‌. ಹೆಗಡೆ ಮಾತನಾಡಿದರು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್‌.ಹೆಚ್‌. ಅರುಣ್ ಕುಮಾರ್‌ ಸಂವಿಧಾನ ಪೀಠಿಕೆ ಬೋಧಿಸಿದರು.

ಈ ವೇಳೆ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ, ಆರ್‌.ಎನ್‌. ಪ್ರವೀಣ್‌ ಕುಮಾರ್‌,  ಶ್ರೀರಾಮ ನಾರಾಯಣ ಹೆಗಡೆ, ಶಿವಪ್ಪ ಗಂಗಪ್ಪ ಸಲಗೆರೆ, ನಾಗೇಶ್‌, ಗಾಯತ್ರಿ, ಪ್ರಶಾಂತ್‌, ಮಲ್ಲಿಕಾರ್ಜುನ್‌, ಸಿದ್ದರಾಜು ಮತ್ತಿತರರಿದ್ದರು.

error: Content is protected !!