ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸವಿ ನೆನಪಿಗಾಗಿ ಏರ್ಪಾಡಾಗಿರುವ 17ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳೂ ಸೇರಿದಂತೆ, ಹೊರ ರಾಜ್ಯಗಳಿಂದ ಒಟ್ಟು 750 ಆಟಗಾರರು ಭಾಗವಹಿಸಲಿದ್ದಾರೆ.
– ದಿನೇಶ್ ಕೆ.ಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ
ದಾವಣಗೆರೆ, ನ.25- ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಾಳೆ ದಿನಾಂಕ 26ರ ಮಂಗಳವಾರದಿಂದ ಬರುವ ಡಿಸೆಂಬರ್ 1ರ ವರೆಗೆ ಅಂತರ್ ರಾಷ್ಟ್ರ ಮಟ್ಟದ ಹೊನಲು ಬೆಳಕಿನ `ಶಾಮನೂರು ಡೈಮಂಡ್ ಶಿವಗಂಗಾ ಕಪ್-2024′ ಲೀಗ್ ಕಂ ನಾಕೌಟ್ ಪಂದ್ಯಾವಳಿ ನಡೆಯಲಿವೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸವಿ ನೆನಪಿಗಾಗಿ 17ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯನ್ನು ಅದ್ಧೂರಿಯಾಗಿ ಆಯೋಜಿಸಿದ್ದೇವೆ ಎಂದು ಹೇಳಿದರು.
ನಾಳೆ ಮಂಗಳವಾರ ಸಂಜೆ 6.30ಕ್ಕೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ್, ಅಥಣಿ ವೀರಣ್ಣ, ಚಮನ್‌ಸಾಬ್, ಸೋಗಿ ಶಾಂತಕುಮಾರ್, ಅಯ್ಯೂಬ್ ಪೈಲ್ವಾನ್, ಶ್ರೀನಿವಾಸ್ ಶಿವಗಂಗಾ, ಅಣಬೇರು ರಾಜಣ್ಣ, ಮಹಾದೇವ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಟೂರ್ನಿಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 5,05,555 ರೂ.ಗಳ ನಗದು, ದ್ವಿತೀಯ ಬಹುಮಾನವಾಗಿ 3,05,555 ರೂ.ಗಳ ನಗದು ಮತ್ತು ತೃತೀಯ ಬಹುಮಾನವಾಗಿ 1,55,500 ರೂ.ಗಳ ನಗದು ನೀಡುವ ಜತೆಗೆ ಮೊದಲ ಮೂರು ವಿಜೇತರಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಹೇಳಿದರು.
ಶ್ರೀಲಂಕಾ, ಮಹಾರಾಷ್ಟ್ರ ಹಾಗೂ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ, ಸೇರಿದಂತೆ ಒಟ್ಟು 50 ತಂಡಗಳಿಂದ 750 ಆಟಗಾರರು ಭಾಗವಹಿಸಲಿದ್ದಾರೆ, ಅವರಿಗೆಲ್ಲರಿಗೂ ಟಿ-ಶರ್ಟ್ ಹಾಗೂ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ನಾಳೆ ಮಂಗಳವಾರ ಸಂಜೆ ಒಟ್ಟು 6 ಅಫಿಷಿಯಲ್ ಪಂದ್ಯಾವಳಿಗಳು ನಡೆಯಲಿದ್ದು, ಟೂರ್ನಿಯ ಎಲ್ಲಾ ಪಂದ್ಯಾವಳಿಗಳನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರವಾಗಿ ವೀಕ್ಷಿಸಬಹುದಾಗಿದೆ ಎಂದು ಅವರು ವಿವರಿಸಿದರು.
ಇದೇ ದಿನಾಂಕ 30ರ ಸಂಜೆ 7.30ಕ್ಕೆ `ಶ್ರೀಲಂಕಾ ಮತ್ತು ಇಂಡಿಯಾ’ ಪ್ರದರ್ಶನ ಪಂದ್ಯ ನಡೆಯಲಿದೆ ಎಂದ ಅವರು, 30ರಿಂದ 35 ಲಕ್ಷ ರೂ.ಗಳ ವೆಚ್ಚದಲ್ಲಿ ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಂಘದ ಸಹ ಕಾರ್ಯದರ್ಶಿ ಜಯಪ್ರಕಾಶ್, ರಂಗಸ್ವಾಮಿ, ಶಾಂತಕುಮಾರ್, ಜಿ.ಬಿ. ಪಾಟೀಲ್, ರಾಘವೇಂದ್ರ, ಆಕಾಶ್ ಸೇರಿದಂತೆ, ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.