ದಾವಣಗೆರೆ, ನ.20- ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಂಬಂಧಿಸಿದ ನಾಗರಿಕರು ಧೈರ್ಯವಾಗಿ ತಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ತಿಳಿಸಿದರೆ ಅವುಗಳಿಗೆ ಸ್ಪಂದಿಸುವ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಮಾಡಲಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ `ಪರಿಶಿಷ್ಟ ಜಾತಿ ಮತ್ತು ಪಂಗಡಗಳ’ ಕುಂದು ಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸುಖಾ ಸುಮ್ಮನೆ ಹಾಗೂ ಸಾಮಾನ್ಯವಾಗಿ ಅಧಿಕಾರಿಗಳನ್ನು ದೂರುವುದು ಮತ್ತು ಅಧಿಕಾರಿಗಳಿಗೆ ಮುಜುಗರ ಆಗುವಂತಹ ಮಾತುಗಳಾನ್ನಾಡದೆ. ದಾಖಲೆ ಸಮೇತ ದೂರು ನೀಡಿದರೆ. ಕ್ರಮ ಕೈಗೊಳ್ಳುತ್ತೇವೆ ಮತ್ತು ಆಯಾ ಇಲಾಖೆಯ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಎಂ. ಸಂತೋಷ್ ಪ್ರಾಸ್ತಾವಿಕ ಮಾತನಾಡಿ, ಜಾತಿ ವ್ಯವಸ್ಥೆ ಹೋಗಲಾಡಿಸಲು ಪೊಲೀಸ್ ಇಲಾಖೆ ಶ್ರಮಿಸುತ್ತಿದ್ದು, ಕಳೆದ ವರ್ಷದ ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣ ದಾಖಲಾತಿ ಪ್ರಮಾಣಕ್ಕಿಂತ ಈ ಬಾರಿ ಕಡಿಮೆ ಪ್ರಕರಣಗಳು ದಾಖಲಾಗಿವೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ದೌರ್ಜನ್ಯಗಳು ನಡೆದಾಗ ಜಿಲ್ಲಾ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲು ಸದಾ ಸಿದ್ದವಿದ್ದು, ಈ ನಿಟ್ಟಿನಲ್ಲಿಯೇ ಎಸ್ಸಿ-ಎಸ್ಟಿ ಕಾಲೋನಿಗಳಿಗೆ ಪೊಲೀಸರು ಗಸ್ತು ಹಾಕಿ, ಅಲ್ಲಿನವರ ಸಮಸ್ಯೆ ಆಲಿಸುವ ಕಾರ್ಯ ಮಾಡಲಿದ್ದಾರೆ ಎಂದು ಹೇಳಿದರು.
ಎಸ್ಸಿ-ಎಸ್ಟಿ ಕಾನೂನನ್ನು ಅನಾವಶ್ಯಕವಾಗಿ ಯಾರೂ ದುರುಪಯೋಗ ಪಡಿಸಿಕೊಳ್ಳಬಾರದು ಎಂದ ಅವರು, ಈ ಕಾನೂನುನಿನ ಬಗ್ಗೆ ಯುವಕರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಬೇಕಿದೆ ಎಂದರು.
ಎಸ್ಸಿ, ಎಸ್ಟಿ ಸಮುದಾಯದ ಮುಖಂಡರು ಪ್ರಸ್ತಾಪಿಸಿದ ರುದ್ರಭೂಮಿ ಸಮಸ್ಯೆ, ಪ್ರಚಲಿತ ವಕ್ಫ್ ಬೋರ್ಡ್ ಆಸ್ತಿ ವಿವಾದ ಸಂಬಂಧಿಸಿದಂತೆ, ಅಕ್ರಮ ಸಾರಾಯಿ ಮಾರಾಟ ಹಾಗೂ ಸಂಚಾರ ದಟ್ಟಣೆಯ ಸಮಸ್ಯೆಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು, ಕೆಲವು ಮುಖ್ಯ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಲಾಗುವುದು.
– ಉಮಾ ಪ್ರಶಾಂತ್, ಪೊಲೀಸ್ ವರೀಷ್ಠಾಧಿಕಾರಿ
ರುದ್ರಭೂಮಿ ಪಹಣಿಯಲ್ಲಿ ವಕ್ಫ್ ಹೆಸರು..!
ಹರಿಹರ ತಾಲ್ಲೂಕು, ಭಾನುವಳ್ಳಿ ಗ್ರಾಮದಲ್ಲಿ ಹಿಂದೂ ರುದ್ರಭೂಮಿಯನ್ನು 40 ವರ್ಷಗಳಿಂದ ಈತನಕ ನಾವೇ ಬಳಸುತ್ತಿದ್ದೇವೆ, ಆದರೆ ಈ ರುದ್ರಭೂಮಿಯ ಪಹಣಿಯಲ್ಲಿ ವಕ್ಫ್ ಸಂಸ್ಥೆಯ ಹೆಸರು ಬಂದಿದೆ ಎಂದು ಭಾನುವಳ್ಳಿಯ ಟಿ.ಆರ್. ಮಹೇಶ್ವರಪ್ಪ ದೂರಿದರು. ಆಗ ಎಸ್ಪಿ ಉಮಾ ಅವರು, ಈ ಬಗ್ಗೆ ಲಿಖಿತ ರೂಪದಲ್ಲಿ ಎಸಿ ಅವರಿಗೆ ಮನವಿ ನೀಡುವಂತೆ ಸೂಚಿಸಿದರು.
ಸೋಮ್ಲಾಪುರದ ಹನುಮಂತಪ್ಪ ಮಾತನಾಡಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ಅಧಿಕಾರ ಸ್ವೀಕರಿಸಿ ಇಷ್ಟು ದಿನಗಳೇ ಕಳೆದರೂ ಇಂದಿಗೂ ಎಸ್ಸಿ-ಎಸ್ಟಿ ಸಭೆ ಕರೆಯದೇ ಇರುವುದು ನಮಗೆ ನೋವು ತಂದಿದೆ ಎಂದರು.
ಮುರಾರ್ಜಿ ಶಾಲೆಗಳಲ್ಲಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಅಲ್ಲಿನ ಸಿಬ್ಬಂದಿ, ಸ್ವಜಾತಿ ವಿದ್ಯಾರ್ಥಿಗಳನ್ನೇ ಶಾಲೆಗೆ ಸೇರಿಸಿಕೊಳ್ಳುತ್ತಿದ್ದಾರೆ ಎಂದಾಗ, ಈ ಕುರಿತು ಎ.ಸಿ ಅವರಿಗೆ ಲಿಖಿತ ರೂಪದಲ್ಲಿ ಮನವಿ ನೀಡಿದರೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುತ್ತಾರೆ ಎಂದು ಎಸ್ಪಿ ತಿಳಿಸಿದರು.
ಅಣ್ಣಪ್ಪ ಅಜ್ಜೇರ ಮಾತನಾಡಿ, ಹರಿಹರದ ಗುತ್ತೂರಿನಲ್ಲಿ ಈ ವರೆಗೂ ದಲಿತರಿಗೆ ರುದ್ರಭೂಮಿ ಇಲ್ಲ. ಈ ಕುರಿತು ಅನೇಕ ವರದಿಗಳು ಪತ್ರಿಕೆಯಲ್ಲಿ ಬಂದಿವೆ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಎಸ್ಪಿ ಅವರಿಗೆ ತಿಳಿಸಿದಾಗ. ಪತ್ರಿಕಾ ವರದಿ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿದರು. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಇಲ್ಲಿನ ಸರಸ್ವತಿ ನಗರದ ಎಸ್ಸಿ-ಎಸ್ಟಿ ವಸತಿ ನಿಲಯಗಳಲ್ಲಿ ಬಾತ್‌ರೂಮ್ ಬಾಗಿಲು ಮುರಿದಿವೆ ಮತ್ತು ಗುಟುಕಾ ಕಲೆಗಳಿಂದ ವಸತಿ ನಿಲಯ ಹಾಳಾಗಿದೆ ಎಂದು ಸಭೆಯಲ್ಲಿ ಓರ್ವರು ದೂರಿದರು.
ನಗರದ ಹೊಸ ಬಸ್ ಸ್ಟಾಂಡ್ ಬಳಿ ಆಟೋ ಚಾಲಕರಿಂದಾಗಿ ಬೇರೆ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಮತ್ತು ಎಸ್‌ಓಜಿ ಕಾಲೋನಿಯಲ್ಲಿ ಸಂಜೆ 6ರಿಂದ ರಾತ್ರಿ
9ರ ವರೆಗೆ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ತಿಳಿಸಿದಾಗ. ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿ, ಸರಿಪಡಿಸುವುದಾಗಿ ಸೂಚಿಸಿದರು.
ಹೊಸ ಬಸ್ ಸ್ಟಾಂಡ್ ಬಳಿ ಆಟೋ ಚಾಲಕರಿಂದಾಗುವ ಟ್ರಾಫಿಕ್ ಸಮಸ್ಯೆ ಬಗ್ಗೆ ಅನೇಕ ದೂರುಗಳು ಬಂದಿವೆ. ಆದ್ದರಿಂದ ನಾನೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಹರಿಹರ ತಾಲ್ಲೂಕು, ಕೆ. ಬೇವಿನಹಳ್ಳಿ ಗ್ರಾಮದ ವ್ಯಾಪ್ತಿಯ ದಲಿತರ ಜಮೀನುಗಳಲ್ಲಿ ಪೈಪುಗಳು, ಪಂಪ್‌ಸೆಟ್‌ಗಳು ಹಾಗೂ ಕೃಷಿ ಪರಿಕರಗಳು ಕಳ್ಳತನವಾಗುತ್ತಿವೆ ಎಂದು ಗ್ರಾಮದ ಮುಖಂಡರೊಬ್ಬರು ತಿಳಿಸಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಲ್ಲೇಶ್ ದೊಡ್ಮನಿ, ಡಿಡಿಪಿ ಜಿ. ಕೊಟ್ರೇಶ್, ಪಾಲಿಕೆಯ ಉದಯ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳಾದ ಎಂ. ಸುರೇಶ್, ಡಿ.ಡಿ ನಾಗರಾಜ್, ಬಸವರಾಜ್, ಫಕೃದ್ಧಿನ್, ತಿಪ್ಪೇಸ್ವಾಮಿ, ಕೃಷ್ಣ ನಾಯ್ಕ ಸೇರಿದಂತೆ ಜಿಲ್ಲೆಯ ಎಸ್ಸಿ-ಎಸ್ಟಿ ಸಮುದಾಯದ ಮುಖಂಡರು ಹಾಗೂ ಪೊಲೀಸ್ ಅಧಿಕಾರಿಗಳಿದ್ದರು.