ಹರಿಹರದ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್
ಹರಿಹರ, ಅ. 17 – ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗದೇ ಇರುವುದರಿಂದ, ವಿಶ್ವ ಮಟ್ಟದಲ್ಲಿ ಮಾನವ ಕುಲಕ್ಕೆ ಮಾದರಿಯಾಗಿ ಹೊರಹೊಮ್ಮಿತು ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.
ನಗರದ ಎಸ್.ಜೆ.ವಿ.ಪಿ. ಕಾಲೇಜು ಸಭಾಂಗಣದಲ್ಲಿ ಇಂದು ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ, ಮಹಾಭಾರತ ಬೇರೆ ಬೇರೆ ದೇಶದ ಆಡಳಿತವು ಇದರ ಅಂಶಗಳ ಆಧಾರದ ಅಡಿಯಲ್ಲಿ ನಡೆಯುತ್ತಿದ್ದು, ಅಂತಹ ಮಹಾ ಶಕ್ತಿ ರಾಮಾಯಣಕ್ಕೆ ಇದೆ, ಅಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ದೃಷ್ಟಿಯಿಂದ ಸರ್ಕಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ನಡೆಸುವುದಕ್ಕೆ ಮುಂದಾಗಿದೆ ಎಂದು ಹೇಳಿದರು.
ಎಂ.ಕೆ.ಇ.ಟಿ. ಶಾಲೆ ಮುಖ್ಯ ಶಿಕ್ಷಕ ಡಿ.ಟಿ. ತಿಪ್ಪಣ್ಣ ರಾಜು ಉಪನ್ಯಾಸಕರಾಗಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಯವರ ತತ್ವ, ಆದರ್ಶಗಳು ಮತ್ತು ಅವರಿಗೆ ಇರುವಂತಹ ಜಾಣ್ಮೆ, ತಾಳ್ಮೆ, ಕಾಯಕ ನಿಷ್ಠೆ ಮತ್ತು ನೈಪುಣ್ಯತೆ ಜೊತೆಗೆ ಅವರು ಸಮಾಜದ ಒಳಿತಿಗಾಗಿ ಕೊಟ್ಟಂತಹ ಕೊಡುಗೆಗಳು ಇಂದಿನ ಯುವಕರಿಗೆ ಸ್ಪೂರ್ತಿಯನ್ನು ನೀಡುತ್ತಿವೆ ಎಂದು ಹೇಳಿದರು.
ಈ ವೇಳೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಸನ್ಮಾನಿಸಿ ಗೌರವಿಸಿ ಕಿರು ಕಾಣಿಕೆ ನೀಡಿದರು.
ಪ್ರಾಸ್ತಾವಿಕ ನುಡಿಯನ್ನು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಎಇಇ ರಾಮಕೃಷ್ಣಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ತಾ.ಪಂ. ಇ.ಓ. ಸುಮಲತ, ದಾವಣಗೆರೆ ವಾಣಿಜ್ಯ ಇಲಾಖೆ ಉಪ ಆಯುಕ್ತ ಮಂಜುನಾಥ್, ಬಿಇಓ ಡಿ. ದುರುಗಪ್ಪ, ನಗರಸಭೆ ಸದಸ್ಯ ದಿನೇಶ್ ಬಾಬು, ರಾಜನಹಳ್ಳಿ ವಾಲ್ಮೀಕಿ ಮಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್ ಸಾಳೇರ್, ವಾಲ್ಮೀಕಿ ಸಮಾಜದ ನಗರ ಘಟಕದ ಗೌರವಾಧ್ಯಕ್ಷ ಹಂಚಿನ ನಾಗಪ್ಪ, ಅಧ್ಯಕ್ಷ ಮಕ್ರಿ ಪಾಲಾಕ್ಷಪ್ಪ, ಕಾರ್ಯದರ್ಶಿ ಧನರಾಜ್, ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಮ್ಮ, ಸಮಾಜ ಕಲ್ಯಾಣ ಇಲಾಖೆ ರಾಮಕೃಷ್ಣಪ್ಪ, ಕೃಷಿ ಇಲಾಖೆ ನಾರನಗೌಡ, ಬಿ.ಸಿ.ಎಂ ಇಲಾಖೆ ಆಸ್ಮಾಬಾನು, ಕಾರ್ಮಿಕ ಇಲಾಖೆ ಕವಿತಾ, ಸಿಡಿಪಿಓ ಪೂರ್ಣಿಮಾ, ತೋಟಗಾರಿಕೆ ಇಲಾಖೆ ಶಶಿಧರಯ್ಯ, ಸಮಾಜ ಕಲ್ಯಾಣ ಇಲಾಖೆ ಎಳೆಹೊಳೆ ಮಂಜುನಾಥ್, ವಾಲ್ಮೀಕಿ ಸಮಾಜದ ಮುಖಂಡರಾದ ಮಾರುತಿ ಬೇಡರ್, ಸಿದ್ದಪ್ಪ, ಆಟೋ ರಾಜು, ಮೂರ್ತಿ, ಮನೋಹರ, ಜಿಗಳಿ ಪ್ರಕಾಶ್, ಭರತ್ ಇತರರು ಹಾಜರಿದ್ದರು.