ಪರ್ಯಾಯ ಬೆಳೆಗೆ ರೈತರ ಮನವೊಲಿಸುವಂತೆ ಸಂಸದೆ ಡಾ.ಪ್ರಭಾ ಸೂಚನೆ
ದಾವಣಗೆರೆ, ಸೆ.25- ಲೋಕಸಭಾ ಕ್ಷೇತ್ರದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಡಿಕೆ ದರವೇನಾದರೂ ಕುಸಿದರೆ ಅಥವಾ ತೋಟಕ್ಕೆ ನೀರು ಸಿಗದಿದ್ದರೆ ಸಂಕಷ್ಟಕ್ಕೆ ತುತ್ತಾಗುವ ಅಪಾಯವಿದೆ. ಆದ್ದರಿಂದ ಅಡಿಕೆ ಬೆಳೆಯ ಬದಲು ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರ ಮನವೊಲಿಸಿ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಡಿಕೆ ಬೆಳೆ ಮೇಲೆ ಅವಲಂಬನೆಯಾಗದಂತೆ ರೈತರಲ್ಲಿ ಜಾಗೃತಿ ಮೂಡಿಸುವಂತೆ ಹೇಳಿದರು.
ನೀರು ಕಡಿಮೆ ಬಳಕೆ ಮಾಡಿಕೊಂಡು ಹನಿ ಅಥವಾ ತುಂತುರು ನೀರಾವರಿ ಪದ್ಧತಿಯಲ್ಲಿ ಭತ್ತ ಬೆಳೆಯುವ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಸಂಸದರು ಸೂಚಿಸಿದಾಗ, ಕಳೆದ ವರ್ಷವೇ ಜಿಲ್ಲೆಯಲ್ಲಿ 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಡ್ರೈ ಅಂಡ್ ವೆಟ್ ಸಿಸ್ಟ್ಂನಲ್ಲಿ ಭತ್ತ ಬೆಳೆಯಲಾಗಿದೆ ಎಂದು ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದರು.
ಚಿಗಟೇರಿ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಾರ್ವಜನಿಕರ ಸುರಕ್ಷತೆಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಡಾ.ಪ್ರಭಾ ಹೇಳಿದಾಗ, ಜಿಲ್ಲಾಸ್ಪತ್ರೆಯ ಉಪ ಠಾಣೆಯಲ್ಲಿ ಇನ್ನೊಬ್ಬ ಸಿಬ್ಬಂದಿ ಹೆಚ್ಚಿಸಲಾಗಿದೆ. ಆಸ್ಪತ್ರೆ ಬಳಿ ರಾತ್ರಿ ವೇಳೆ ಸಶಸ್ತ್ರ ಮೀಸಲು ಪಡೆ ವಾಹನ ನಿಲ್ಲಿಸಿ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಉತ್ತರಿಸಿದರು.
ಸಂಸದರ ಆದರ್ಶ ಗ್ರಾಮ ಆಯ್ಕೆಗೆ ಸೂಚನೆ
ಜಿಲ್ಲೆಯಲ್ಲಿನ ಎಲ್ಲಾ ತಾಲ್ಲೂಕುಗಳಲ್ಲಿ ಒಂದು ಗ್ರಾಮವನ್ನು ಸಂಸದರ ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಬೇಕು. ಈ ಗ್ರಾಮ ಹೆಚ್ಚು ಜನಸಂಖ್ಯೆಯಿಂದ ಕೂಡಿದ್ದು, ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರಬೇಕು. ಅಂತಹ ಗ್ರಾಮ ಆಯ್ಕೆ ಮಾಡಬೇಕು, ಈ ಸಂಸದರ ಆದರ್ಶಗ್ರಾಮ ಯೋಜನೆಗೆ ಯಾವುದೇ ಪ್ರತ್ಯೇಕ ಅನುದಾನ ಇರುವುದಿಲ್ಲ. ಇರುವ ಯೋಜನೆಗಳನ್ನೇ ಬಳಕೆ ಮಾಡಿಕೊಂಡು ಅಲ್ಲಿ ಎಲ್ಲಾ ವಲಯಗಳಲ್ಲಿ ಅಭಿವೃದ್ದಿ ಮಾಡುವುದೇ ಇದರ ವಿಶೇಷವಾಗಿದೆ ಎಂದು ಸಂಸದರು ಹೇಳಿದರು.
ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಭದ್ರತಾ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸುವುದರ ಜತೆಗೆ ಗೃಹರಕ್ಷಕ ಸಿಬ್ಬಂದಿ ಗಳನ್ನು ಒದಗಿಸುವಂತೆ ಎಸ್ಪಿಯಲ್ಲಿ ಮನವಿ ಮಾಡಲಾಗಿದೆ. ಸದ್ಯ 62 ಸಿಸಿ ಕ್ಯಾಮರಾಗಳಿದ್ದು, ಇನ್ನಷ್ಟು ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಶೌಚಾಲಯಕ್ಕೆ ಅನುದಾನದ ಕೊರತೆ ಇಲ್ಲ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅಗತ್ಯ ಅನುದಾನ ಕಲ್ಪಿಸಲಾಗುತ್ತಿದೆ. ಎಲ್ಲಾ ತಾಲೂಕು ಕಚೇರಿಗಳಲ್ಲಿ ಜನರ ಬಳಕೆಗೆ ಶೌಚಾಲಯ ತೆರೆದಿರಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ದಸರಾ ಹಬ್ಬ ಸೇರಿದಂತೆ, ಅನೇಕ ಕಡೆ ಗಣೇಶಮೂರ್ತಿ ವಿಸರ್ಜನೆ ಇರುವುದರಿಂದ ಹೆಚ್ಚಿನ ನಿಗಾವಹಿಸಬೇಕು. ಕೆಲವು ಗ್ರಾಮೀಣ ಭಾಗದಲ್ಲಿ ಮನೆಯಿಂದ ಹೋದ ಒಂದು ಗಂಟೆಯಲ್ಲೇ ಕಳ್ಳತನ ಮಾಡಲಾಗಿದೆ ಎಂಬ ವರದಿಯಾಗಿದೆ. ಇದಾಗದಂತೆ ತಡೆಗಟ್ಟುವ ಮೂಲಕ ಮಹಿಳೆಯರ ಸರಗಳ್ಳತನ, ಮಹಿಳೆಯರು ಒಂಟಿಯಾಗಿ ಹೋಗುವಾಗ ಬೆದರಿಕೆ ಒಡ್ಡುವವರ ಮೇಲೆ ನಿಗಾವಹಿಸಲು ಕ್ಯಾಮೆರಾಗಳನ್ನು ಹೆಚ್ಚಳ ಮಾಡಲು ತಿಳಿಸಿ ಇದಕ್ಕಾಗಿ ಅಗತ್ಯವಿರುವ ಅನುದಾನದ ಅವಕಾಶ ಮಾಡಿಕೊಳ್ಳುವಂತೆ ಸಂಸದರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.