ಲಂಬೋದರನಿಗೆ ಅದ್ಧೂರಿ ಸ್ವಾಗತ

ಲಂಬೋದರನಿಗೆ ಅದ್ಧೂರಿ ಸ್ವಾಗತ

ಮನೆಗಳಲ್ಲಿ, ಗಲ್ಲಿಗಳಲ್ಲಿ ಹಲವು ಬಗೆಯ ಮೂರ್ತಿಗಳ ಪ್ರತಿಷ್ಠಾಪನೆ, ಸಂಭ್ರಮ

ದಾವಣಗೆರೆ, ಸೆ.8- ನಗರದಲ್ಲಿ ಗಣೇಶ ಚತುರ್ಥಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ವಿವಿಧೆಡೆಯ ಸಾರ್ವಜನಿಕ ಗಣೇಶೋ­ತ್ಸವ ಸಮಿತಿ ವತಿಯಿಂದ ನವನವೀನ ಭಂಗಿಯಲ್ಲಿನ ಬೃಹತ್ ಮೂರ್ತಿಗಳನ್ನು ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿದರೆ, ಮನೆಗಳಲ್ಲಿ ಚಿಕ್ಕ ಮೂರ್ತಿಗಳನ್ನು ತಂದು ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಗಿದೆ.

ಡಿಜೆ ನೃತ್ಯ, ಸಂಗೀತ ಹಾಗೂ ಪಟಾಕಿ ಸಿಡಿಸಿ ಗಣೇಶ­ನನ್ನು ಬರಮಾಡಿಕೊಂಡು, ವಿವಿಧ ಹೂವು, ವಿದ್ಯುತ್ ಬೆಳಕಿನಿಂದ ಅಲಂಕ­ರಿ­ಸಿದ ಮಂಟಪದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಲಂಬೋದರನಿಗೆ ಪ್ರಿಯ­ವಾದ ಕಡುಬು, ಪಂಚಕಜ್ಜಾಯ, ಮೋದಕ ಸೇರಿದಂತೆ ವಿವಿಧ ಬಗೆಯ ನೈವೇದ್ಯ ಸಮರ್ಪಿಸಿದರು.

ಹಿರಿಯರು ಕಿರಿಯರೆನ್ನದೇ ಎಲ್ಲ ವಯೋಮಾನದವರು ಹೊಸ ಬಟ್ಟೆ ತೊಟ್ಟು, ದೇವರಿಗೆ ಆರತಿ ಬೆಳಗಿ ಸಂಭ್ರಮಿಸಿ, ಗಣೇಶೋತ್ಸವದಲ್ಲಿ ಭಾಗಿಯಾಗಿದ್ದರು.

ಸಾಮಾನ್ಯವಾಗಿ ವಿವಿಧೆಡೆ ಒಂದು ದಿನ, ಮೂರು ದಿನ, ಐದು, ಏಳು, ಒಂಬತ್ತು ಹಾಗೂ ಹನ್ನೊಂದು ದಿನಗಳವರೆಗೆ ಗಣೇಶನನ್ನು ಪೂಜಿಸಲಾಗುತ್ತದೆ. ಕೆಲವು ಕಡೆ ಅನಂತ ಚತುರ್ದಶಿ ತನಕ ಪೂಜಿಸುವ ವಾಡಿಕೆ ಇದೆ. 

ಶನಿವಾರ ಪ್ರಥಮ ದಿನ ಬೆಳಿಗ್ಗೆಯೇ ಏಕದಂತನನ್ನು ಪ್ರತಿಷ್ಠಾಪಿಸಿದವರು ರಾತ್ರಿ ವಿಸರ್ಜಿಸಿದರು. ಸಾರ್ವಜನಿಕ ಸ್ಥಳ ಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ತೆರೆದ ವಾಹನದಲ್ಲಿ ಸಿಂಗ ರಿಸಿದ ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಡಿಜೆ ಸದ್ದಿನ ಆರ್ಭಟವಿತ್ತು. ಯುವಕರು ಕುಣಿದು ಕುಪ್ಪಳಿಸುತ್ತಲೇ ಪಾಲ್ಗೊಂಡಿದ್ದರು.

ನಗರದ ಗಣೇಶ ದೇವಸ್ಥಾನಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಗಣೇಶ ಚತುರ್ಥಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಗಣೇಶ ದೇವಸ್ಥಾನಗಳಿಗೆ ತೆರಳಿ ಸರತಿಯಲ್ಲಿ ಗಣೇಶ ದರ್ಶನ ಪಡೆದರು.

ದೊಡ್ಡಪೇಟೆಯ ದೇವಸ್ಥಾನದಲ್ಲಿ 200 ಕೆ.ಜಿ.ಗೂ ಹೆಚ್ಚಿನ ಒಣ ಕೊಬ್ಬರಿ ಗಿಟುಕುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಸಾರ್ವಜನಿಕ ವೀಕ್ಷಣೆಗೆ ಸೆ.11ರ ಬುಧವಾರ ಕೊನೆಯ ದಿನವಾಗಿದೆ.

ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ  ಕಾಶಿವಿಶ್ವನಾಥ ದೇವಾಲಯದ ಮಾದರಿ ನಿರ್ಮಾಣ ಮಾಡಲಾಗಿದೆ. 18ಅಡಿ ಎತ್ತರದ ಆಕರ್ಷಕ ಶಿವರೂಪಿ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಲಾಯಿತು.

ತೊಗಟವೀರ ಸಮುದಾಯ ಭವನದಲ್ಲಿ ಹಿಂದೂ ಯುವ ಶಕ್ತಿ ವತಿಯಿಂದ 33ನೇ ವರ್ಷದ ಶ್ರೀ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಈ ಬಾರಿ 51 ಕೆ.ಜಿ. ಒಣ ದ್ರಾಕ್ಷಿ  ಬಳಸಿ  ನಿರ್ಮಿಸಿದ 12 ಅಡಿ ಎತ್ತರದ ಗಣೇಶನ ನ್ನುಪ್ರತಿಷ್ಠಾಪಿಸಲಾಗಿದೆ. ಸೆ.17ರವರೆಗೆ ವೀಕ್ಷಣೆಗೆ ಅವಕಾಶವಿದೆ.

ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತದಲ್ಲಿ 32ನೇ ವರ್ಷದ ವಿನಾಯಕ ಮ ಹೋತ್ಸವದ ಅಂಗವಾಗಿ 8 ಎಡಿ ಎತ್ತರದ, ವಿರಾಜಮಾನವಾಗಿ ಕುಳಿತಿರುವ  ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಪ್ರತಿ ದಿನ ಸಂಜೆ `ಭಗೀರಥ ಪ್ರಯತ್ನ’ ಕುರಿತ ನೃತ್ಯ ರೂಪಕ ಇರಲಿದೆ. ಸೆ.11ರಂದು ಅನ್ನ ಸಂತರ್ಪಣೆ, ಸೆ.17 ರಂದು ವಿಸರ್ಜನೆ ನಡೆಯಲಿದೆ.

ಎಸ್.ಕೆ.ಪಿ.ದೇವಸ್ಥಾನ ರಸ್ತೆಯಲ್ಲಿರುವ ವಾಸವಿ ಯುವಜನ ಸಂಘದಿಂದ 43ನೇ ವಿನಾಯಕ ಮಹೋತ್ಸವ ಆಚರಿಸಲಾಯಿತು.  ದಿ.15ರ ಭಾನುವಾರ ವಿಸರ್ಜನೆ ನಡೆಯಲಿದ್ದು, ಅಲ್ಲಿಯವರೆಗೆ ಪ್ರತಿ ದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಲೇಸರ್ ಶೋ ಮೂಲಕ ಶಿವ ಪಾರ್ವತಿ ಕಲ್ಯಾಣೋತ್ಸವ ಪ್ರದರ್ಶನ ನಡೆಯಲಿದೆ.

ಎಂ.ಸಿ.ಸಿ. ಎ ಬ್ಲಾಕ್‌ ಸೂಪರ್ ಮಾರ್ಕೆಟ್ ಬಳಿಯ ಹಿಂದೂ ಯುವ ಸೇನೆ ವತಿಯಿಂದ 17ನೇ ವರ್ಷದ  ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದೆ.17 ರಂದು ಸಂಜೆ 7ಕ್ಕೆ ವಿಶೇಷ ದೀಪೋತ್ಸವವಿದೆ. ದಿ.20 ರಂದು ಅನ್ನ ಸಂತರ್ಪಣೆ ನಂತರ. ಸೆ.22ರಂದು ಬೃಹತ್ ಶೋಭಾಯಾತ್ರೆ ಮೂಲಕ ವಿಸರ್ಜನೆ ನಡೆಯಲಿದೆ.

error: Content is protected !!