ಜಗಳೂರು : ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ನ್ಯಾ. ಅಣ್ಣಯ್ಯನವರ್
ಜಗಳೂರು, ಆ.29- ದ್ವೇಷ, ಅಸೂಯೆ ಮತ್ತು ಸಿಟ್ಟು ಮನುಷ್ಯನನ್ನು ಸದಾ ಸಮಸ್ಯೆಗಳ ಸುಳಿಗೆ ದೂಡುತ್ತದೆ. ಸಂಯಮ, ತಾಳ್ಮೆ ಮತ್ತು ಸಹಾನುಭೂತಿಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಅಭಿಪ್ರಾಯಪಟ್ಟರು.
ಪಟ್ಟಣದ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಬುಧವಾರ ಲೋಕ್ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮೊದಲು ಮನಸ್ಸಿನಿಂದ ನಕಾರಾತ್ಮಕ ವಿಚಾರ ಗಳನ್ನು ತೆಗೆದುಹಾಕಬೇಕು. ಉರಿಯುವವನು ಉರಿಯಲಿ ಕೊನೆಗೆ ಬೂದಿಯಾಗುತ್ತಾನೆ. `ಕುದಿಯುವವನು ಕುದಿಯಲಿ ಬೆಂದು, ಸೀದು ಹೋಗುತ್ತಾನೆ’ ಎಂಬ ಸಂತರ ಅನುಭವದ ಮಾತು ಎಲ್ಲ ಕಾಲಕ್ಕೂ ಸತ್ಯವಾಗಿದೆ. ಜೀವನದಲ್ಲಿ ನೊಂದು, ಬೆಂದಾಗ ಮಾತ್ರ ತಾಳ್ಮೆ, ಸಂಯಮದ ಮಹತ್ವ ತಿಳಿಯುತ್ತದೆ. ರಾಗದ್ವೇಷವಿಲ್ಲದ ಸಂತಸದ ಜೀವನ ಮುಖ್ಯ ಎಂದರು.
ನ್ಯಾಯಾಲಯಗಳಲ್ಲಿ ಆಗಾಗ್ಗೆ ನಡೆಯುವ ಲೋಕ್ ಅದಾಲತ್ ಕಾರ್ಯಕ್ರಮಗಳು ಮಹತ್ವದ್ದಾಗಿವೆ. ನಾನೇ ಹೆಚ್ಚು ಎಂಬ ಅಹಮ್ಮಿಕೆ ಮನುಷ್ಯನಿಗೆ ಒಳ್ಳೆಯದಲ್ಲ. ಐಶ್ವರ್ಯ, ಅಂತಸ್ತಿಗಾಗಿ ಹಪಾಹಪಿಸಿ, ಕೊನೆಗೆ ಆರೋಗ್ಯ ಕಳೆದುಕೊಳ್ಳುತ್ತಾರೆ. ದುರಾಸೆಯಿಂದ ಸಂಕಷ್ಟ ತಪ್ಪಿದ್ದಲ್ಲ. ವಕೀಲರು ಕಕ್ಷಿದಾರರಿಗೆ ದಾರಿದೀಪವಾಗಬೇಕು. ನ್ಯಾಯಾಧೀಶರು, ವಕೀಲರು ಮತ್ತು ಕಕ್ಷಿದಾರರು ಹಣತೆ, ಎಣ್ಣೆ ಮತ್ತು ಬತ್ತಿಯಂತೆ ಒಂದಾದಲ್ಲಿ ದೀಪ ಉಜ್ವಲವಾಗಿ ಬೆಳಗಲು ಸಾಧ್ಯವಾಗುತ್ತದೆ ಎಂದು ನ್ಯಾಯಾಧೀಶ ಅಣ್ಣಯ್ಯನವರ್ ವಿಶ್ಲೇಷಿಸಿದರು.
ಕುಂಟುಂಬದಲ್ಲಿ ಶಾಂತಿ, ಸಾಮರಸ್ಯ ಇದ್ದಲ್ಲಿ ಯಾವುದೇ ವ್ಯಕ್ತಿ ತನ್ನ ಕ್ಷೇತ್ರದಲ್ಲಿ ಉತ್ತಮವಾದದ್ದನ್ನು ಸಾಧಿಸಬಹುದು. ನ್ಯಾಯಾಲಯಗಳಲ್ಲಿರುವ ಸಿವಿಲ್ ಮತ್ತು ಕ್ರಿಮಿನಲ್ ಸ್ವರೂಪದ ಪ್ರಕರಣಗಳನ್ನು ಲೋಕ್ ಅದಾಲತ್‌ಗಳ ಮೂಲಕ ರಾಜೀಸಂಧಾನ ಮಾಡಿಕೊಂಡಲ್ಲಿ ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಮಹಾವೀರ್ ಎಂ. ಕರೆಣ್ಣನವರ್ ಹೇಳಿದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರಶ್ಮಿ, ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲ ಯದ ನ್ಯಾಯಾಧೀಶ ಚೇತನ್, ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಟಿ.ಬಸವರಾಜ್, ಸಹಾಯಕ ಸರ್ಕಾರಿ ಅಭಿಯೋಜಕ ಮಂಜುನಾಥ್, ಹಿರಿಯ ವಕೀಲ ವೈ.ಹನುಮಂತಪ್ಪ ಇದ್ದರು.