ಸ್ವಾತಂತ್ರ್ಯೋತ್ಸವ ಸಂಭ್ರಮ : ಹರ್ ಘರ್ ತಿರಂಗಾ ಅಭಿಯಾನ

ಸ್ವಾತಂತ್ರ್ಯೋತ್ಸವ ಸಂಭ್ರಮ : ಹರ್ ಘರ್ ತಿರಂಗಾ ಅಭಿಯಾನ

ವಿದ್ಯಾರ್ಥಿಗಳಿಗೆ ಸ್ಪರ್ಧೆ, ಸೈಕಲ್ ಜಾಥಾ, ತಿರಂಗಾ ಮ್ಯಾರಥಾನ್

ಗ್ಲಾಸ್‌ಹೌಸ್‌ನಲ್ಲಿ  ಇಂದು ಮತ್ತು ನಾಳೆ ಸಂಗೀತ ಕಾರಂಜಿ

ದಾವಣಗೆರೆ, ಅ. 13 – ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ  ‘ಹರ್‌ ಘರ್‌ ತಿರಂಗಾ’ ಅಭಿಯಾನದ ಅನ್ವಯ  ನಾಳೆ ದಿನಾಂಕ 14 ಹಾಗೂ 15ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು.

ಎಲ್ಲ ತಾಲ್ಲೂಕುಗಳಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಲಿದ್ದಾರೆ ಎಂದರು. 

ನಾಳೆ ದಿನಾಂಕ 14ರ ಬುಧವಾರ ಬೆಳಿಗ್ಗೆ 6.30ಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾಡಳಿತ ಭವನದಿಂದ ಪಿ.ಬಿ.ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣ ದವರೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. 

ಸಂಜೆ 4.30ಕ್ಕೆ ಹೈಸ್ಕೂಲ್ ಮೈದಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ತಿರಂಗಾ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರಧ್ವಜದೊಂದಿಗಿನ ಸೆಲ್ಫಿ ಚಿತ್ರವನ್ನು https://harghartiranga.com ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬಹುದು. ಎಲ್ಲಾ ತಾಲ್ಲೂಕುಗಳಲ್ಲೂ ಸೆಲ್ಫಿ ಪಾಯಿಂಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯಿಂದ ನಗರದ  ಗ್ಲಾಸ್‌ಹೌಸ್‌ನಲ್ಲಿ ಆ.13ರಿಂದ 15ರ ವರೆಗೆ ಪ್ರತಿ ದಿನ ಸಂಜೆ 5 ಗಂಟೆಗೆ ಸಂಗೀತ ಕಾರಂಜಿ ಆಯೋಜಿಸಲಾಗಿದೆ. ಕೆಎಸ್‌ಆರ್‌ಟಿಸಿ ವತಿಯಿಂದ 400ಕ್ಕೂ ಅಧಿಕ ಬಸ್‌ಗಳ ಮೇಲೆ ಹರ್ ಘರ್ ತಿರಂಗಾ ಅಭಿಯಾನದ ಪೋಸ್ಟರ್ ಅಂಟಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಬಿ. ಇಟ್ನಾಳ್,  ಗ್ರಾ.ಪಂ.ಗಳ ವ್ಯಾಪ್ತಿಯಲ್ಲೂ ‘ಹರ್ ಘರ್ ತಿರಂಗಾ’ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಗ್ರಾ.ಪಂ. ಗ್ರಂಥಾಲಯಗಳಲ್ಲಿ ತ್ರಿವರ್ಣ ಧ್ವಜ ಮತ್ತು ಬ್ಯಾಡ್ಜ್‌ಗಳನ್ನು ತಯಾರಿಸುವ ಚಟುವಟಿಕೆ ನಡೆಯುತ್ತಿದೆ.

‘ಸಂವಿಧಾನ ಓದು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಡಿದ್ದು ದಿನಾಂಕ 15ರ ಗುರುವಾರ ಜಿಲ್ಲೆಯ ಅಮೃತ ಸರೋವರಗಳ ದಡದಲ್ಲಿ ಧ್ವಜಾರೋಹಣ ಮಾಡಲಾಗುವುದು ಎಂದರು.

ಜಿಲ್ಲೆಯ 24 ಪೊಲೀಸ್ ಠಾಣೆಗಳಲ್ಲೂ ರಾಷ್ಟ್ರಧ್ವಜ ಹಾರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಗರಿಕರು ಧ್ವಜ ಸಂಹಿತೆಯನ್ನು ಪಾಲಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!