ತಾ.ಪಂ. ಕೆ.ಡಿ.ಪಿ. ಸಭೆಯಲ್ಲಿ ಶಾಸಕ ಬಸವಂತಪ್ಪ ತರಾಟೆ
ದಾವಣಗೆರೆ, ಆ. 13 – ಅರಣ್ಯ ಇಲಾಖೆಯ ಇಂಗು ಗುಂಡಿ ಹಾಗೂ ಸಸಿ ನೆಡುವ ಕಾಮಗಾರಿಗಳಲ್ಲಿ ಕೋಟಿಗಟ್ಟಲೆ ಅಕ್ರಮ ನಡೆದಿದೆ. ಇಲಾಖೆಯ ಕಾಮಗಾರಿಗಳ ಬಗ್ಗೆ ಕಳೆದ ಏಳು ತಿಂಗಳಿನಿಂದ ಮಾಹಿತಿ ಕೇಳಿದರೂ ಅಧಿಕಾರಿಗಳು ವಿವರ ನೀಡದೇ ನುಣುಚಿಕೊಳ್ಳುತ್ತಿದ್ದಾರೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ತಾಲ್ಲೂಕು ಪಂಚಾಯ್ತಿ ಮೊದಲ ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರಣ್ಯ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ವರದಿ ನೀಡುವಂತೆ ಕಳೆದ ಜನವರಿಯಲ್ಲೇ ಕೇಳಿದ್ದೆ. ಇದುವರೆಗೂ ಮಾಹಿತಿ ನೀಡಿಲ್ಲ ಎಂದು ಶಾಸಕರು ಆಕ್ಷೇಪಿಸಿದರು.
ಹೆಬ್ಬಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೂರು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಪ್ರತಿ ಇಂಗು ಗುಂಡಿಗೆ ಹತ್ತು ಲಕ್ಷ ರೂ.ಗಳಷ್ಟು ದುಬಾರಿ ವೆಚ್ಚ ತೋರಿಸಲಾಗಿದೆ. ನರಗನಹಳ್ಳಿ, ಹೆಬ್ಬಾಳು, ಆನಗೋಡು, ಗುಡಾಳು, ಹುಲಿಕಟ್ಟೆ ಪಂಚಾಯ್ತಿಗಳಲ್ಲಿ ಇಂಗು ಗುಂಡಿ ತೆರೆದಿರುವುದರ ಬಗ್ಗೆ ಕಾಮಗಾರಿಯ ಪರಿಶೀಲನೆ ನಡೆದಿಲ್ಲ ಎಂದರು. ಗಿಡಗಳಿಗಾಗಿ ರಸ್ತೆ ಬದಿ ಸಾವಿರಾರು ಗುಂಡಿ ತೆಗೆದಿರುವುದಾಗಿ ಲೆಕ್ಕದಲ್ಲಿ ಮಾತ್ರ ತೋರಿಸಲಾಗಿದೆ. ಇವುಗಳ ರಕ್ಷಣೆಗೆ ಸಿಬ್ಬಂದಿ ನೇಮಿಸಿಲ್ಲ. ಇವೆಲ್ಲವೂ ಹಾಳಾಗಿ ಹೋಗಿವೆ ಎಂದರು.
ಪೋಕ್ಸೋಗೆ ಬೇಕು ಇನ್ನೊಂದು ಜೈಲು!
ಕಾನೂನಿನ ಅರಿವಿಲ್ಲದೇ ಶಾಲೆ ಹಾಗೂ ಕಾಲೇಜು ಹಂತದಲ್ಲಿನ ಯುವಕ – ಯುವತಿಯರು ಪೋಕ್ಸೋ ಪ್ರಕರಣಗಳಲ್ಲಿ ಸಿಲುಕುತ್ತಿದ್ದಾರೆ. ಇದರಿಂದಾಗಿ ಹೆಣ್ಣು ಮಕ್ಕಳು ಮನೆಯಲ್ಲಿ ಹಾಗೂ ಹುಡುಗರು ಜೈಲಿನಲ್ಲಿರುವಂತಾಗಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ವಿಷಾದಿಸಿದ್ದಾರೆ.
ಪ್ರತಿ ಪೊಲೀಸ್ ಠಾಣೆಯಲ್ಲಿ 7-8 ಪೋಕ್ಸೋ ಪ್ರಕರಣಗಳಿವೆ. ಪ್ರತಿದಿನ ಠಾಣೆಯಲ್ಲಿ ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಜೈಲು ತುಂಬಾ ಪೋಕ್ಸೋ ಪ್ರಕರಣದ ಹುಡುಗರಿದ್ದಾರೆ ಎಂದವರು ಹೇಳಿದರು.
ಪೋಕ್ಸೋ ಕಾಯ್ದೆಯ ಬಗ್ಗೆ ಶಾಲೆ ಹಾಗೂ ಕಾಲೇಜು ಹಂತದಲ್ಲಿ ಅರಿವು ಮೂಡಿಸಬೇಕು. ಆಗ ಮಾತ್ರ ಜೈಲು ಖಾಲಿಯಾಗುತ್ತದೆ. ಇಲ್ಲದಿದ್ದರೆ ಇನ್ನೊಂದು ಜೈಲು ಬೇಕಾಗಲಿದೆ ಎಂದು ಶಾಸಕ ಬಸವಂತಪ್ಪ ಹೇಳಿದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಕಟಿಂಗ್ ಮೇಲಿರಲಿ ಕಣ್ಣು!
ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ಗುರುತು ಪತ್ತೆಗಾಗಿ ನಡೆಸುವ ಪರೇಡ್ನಲ್ಲಿ ಎಸ್ಎಸ್ಎಲ್ಸಿ, ಪಿಯುಸಿಯ ಚಿತ್ರ ವಿಚಿತ್ರ ಕಟಿಂಗ್ ಮಾಡಿಸಿಕೊಂಡ ಹದಿಹರೆಯದವರು ಕಂಡು ಬಂದಿದ್ದಾರೆ ಎಂದು ತಹಶೀಲ್ದಾರ್ ಎಂ.ಬಿ.ಅಶ್ವತ್ಥ್ ತಿಳಿಸಿದರು.
ಶಾಲೆಯ ಶಿಸ್ತು ಧಿಕ್ಕರಿಸುವಂತೆ ಕೆಲ ವಿದ್ಯಾರ್ಥಿಗಳು ಕಟಿಂಗ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತಿಳಿ ಹೇಳುವ ಶಿಕ್ಷಕರ ಮೇಲೆ ದಬಾಯಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇವರಿಗೆ ಕೌನ್ಸೆಲಿಂಗ್ ಮಾಡಿಸಲು ಹಾಗೂ ಸರಿಯಾದ ದಾರಿ ತೋರಿಸಲು ಶಿಕ್ಷಣ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಬಾತಿ ಬಿಟ್ಟ ಹೆಗಡೆ ನಗರ ವಾಸಿಗಳು
ಹೆಗಡೆ ನಗರದ ನಿವಾಸಿಗಳನ್ನು ದೊಡ್ಡಬಾತಿ ಬಳಿಯ ಆವರಗೊಳ್ಳಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಮಳೆಗಾಲದ ಹಿನ್ನೆಲೆಯಲ್ಲಿ ತಾತ್ಕಾಲಿಕ ಶೆಡ್ಗಳಲ್ಲಿ ಇರಲಾಗದು ಎಂದು ಜನರು ಅಲ್ಲಿಂದ ಬೇರೆಡೆ ತೆರಳಿದ್ದಾರೆ. ಹೀಗಾಗಿ ಅಲ್ಲಿನ ಶೆಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿಯನ್ನು ನಿಜಲಿಂಗಪ್ಪ ಬಡಾವಣೆಗೆ ವರ್ಗಾಯಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಹೆಬ್ಬಾಳು ಬಳಿ 2023-24ರ ಸಾಲಿನಲ್ಲಿ ಹತ್ತು ಸಾವಿರ ಗಿಡಗಳನ್ನು ನೆಡಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಆದರೆ, ಗಿಡಗಳು ಯಾವ ಮಟ್ಟಕ್ಕೆ ಬಂದಿವೆ ಎಂಬುದರ ಮಾಹಿತಿ ಇಲ್ಲ. ದುಡ್ಡು ಯಾರ ಜೇಬಿಗೆ ಹೋಯಿತು? ಪ್ರಗತಿ ನೋಡದೇ ಹಣ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಬಸವಂತಪ್ಪ ಆಕ್ಷೇಪಿಸಿದರು.
ಅಗಸನಕಟ್ಟೆ – ಗುಡಾಳ್ ಮಾರ್ಗದಲ್ಲಿ ಕಳೆದ ಹತ್ತು ವರ್ಷಗಳಿಂದ ಪದೇ ಪದೇ ಗಿಡ ನೆಡುವುದಾಗಿ ತಿಳಿಸಲಾಗುತ್ತಿದೆ. ಒಂದೇ ಮಾರ್ಗದಲ್ಲಿ ಎಷ್ಟು ಬಾರಿ ಸಸಿ ನೆಡುತ್ತೀರಿ? ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಮೂರು ವರ್ಷಗಳ ಕಾಮಗಾರಿ ಮಾಹಿತಿ ಕೇಳಿದರೆ ಇನ್ನೂ ಕೊಟ್ಟಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕು ಪಂಚಾಯ್ತಿ ಆಡಳಿತಾಧಿಕಾರಿ ಎಲ್.ಎ. ಕೃಷ್ಣನಾಯ್ಕ ಮಾತನಾಡಿ, ಅನುಪಾಲನಾ ವರದಿ ಸಲ್ಲಿಸದಿರುವುದು ಹಾಗೂ ಅಧಿಕಾರಿಗಳು ಕೆ.ಡಿ.ಪಿ. ಸಭೆಗೆ ಗೈರಾಗುವುದು ಕಂಡು ಬರುತ್ತಿದೆ. ಈ ವಿಷಯಗಳ ಬಗ್ಗೆ ಹೇಳಿಸಿಕೊಳ್ಳದೇ ಕಾರ್ಯ ನಿರ್ವಹಿಸಬೇಕು. ಬೆಳಗಾವಿ ಜಿಲ್ಲೆ ಈ ವಿಷಯದಲ್ಲಿ ಮಾದರಿಯಾಗಿದೆ. ಅಲ್ಲಿ ಅಧಿಕಾರಿಗಳು ಪಾರದರ್ಶಕವಾಗಿ ಹಾಗೂ ಸಮಯೋಚಿತ ವಾಗಿ ಕಾರ್ಯನಿರ್ವಹಿಸುವುದರಿಂದ ಕೆ.ಡಿ.ಪಿ. ಸಭೆ ಗಂಟೆಯಲ್ಲೇ ಪೂರ್ಣವಾಗುತ್ತಿದೆ ಎಂದು ಹೇಳಿದರು.
ವಿಕೋಪ ನಿರ್ವಹಣೆ ಕುರಿತು ಪಂಚಾಯ್ತಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ ಮಳೆ ಹಾನಿ, ಡೆಂಗ್ಯೂ ಸಮಸ್ಯೆ ಇತ್ಯಾದಿಗಳ ಬಗ್ಗೆ ಮಾಹಿತಿ ಕೇಳಿದರೆ, ಮೂರು ಪಂಚಾಯ್ತಿಗಳು ಮಾತ್ರ ಸಲ್ಲಿಸಿವೆ ಎಂದು ತಹಶೀಲ್ದಾರ್ ಎಂ.ಬಿ.ಅಶ್ವತ್ಥ್ ಆಕ್ಷೇಪಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಸಿಇಒ ರಾಮಭೋವಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.