ಮಹಲಿಂಗರಂಗ ಕ್ಷೇತ್ರದ ಅಭಿವೃದ್ಧಿಗೆ ನೆರವು

ಮಹಲಿಂಗರಂಗ ಕ್ಷೇತ್ರದ ಅಭಿವೃದ್ಧಿಗೆ ನೆರವು

ಎಸ್. ಮಲ್ಲಿಕಾರ್ಜುನಪ್ಪ ಅವರ ಕೃತಿ ಲೋಕಾರ್ಪಣೆಯಲ್ಲಿ ಶಾಸಕ ದೇವೇಂದ್ರಪ್ಪ

ಜಗಳೂರು, ಆ.6- ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಕೊಣಚಗಲ್ ಶ್ರೀ ರಂಗನಾಥ ಸ್ವಾಮಿ ಕ್ಷೇತ್ರದ ತಪ್ಪಲಿನಲ್ಲಿರುವ 17ನೇ ಶತಮಾನದ ಅನುಭಾವ ಕವಿ ಮಹಲಿಂಗರಂಗ ಸಮಾಧಿ ಸೇರಿ ದಂತೆ, ಕೊಣಚಗಲ್ ಬೆಟ್ಟವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಲು ಅಗತ್ಯ ನೆರವು ನೀಡುವುದಾಗಿ ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ತಾಲ್ಲೂಕಿನ ಕೊಣಚಗಲ್ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ಹಿರಿಯ ಸಾಹಿತಿ ಎಸ್. ಮಲ್ಲಿಕಾರ್ಜುನಪ್ಪ ಬರೆದಿರುವ ಅನುಭಾವಾಮೃತ ಕೃತಿಯ ಅಮರ ಕನ್ನಡ ಕವಿ ಮಹಲಿಂಗರಂಗ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಾಹಿತಿ ಮಲ್ಲಿಕಾರ್ಜುನಪ್ಪ ಅವರು, 17ನೇ ಶತಮಾನದ ಅನುಭಾವ ಕವಿ ಮಹಲಿಂಗರಂಗರು ಕನ್ನಡ ಭಾಷೆಗೆ ಕೊಟ್ಟ ಕೊಡುಗೆಯನ್ನು ತಿಳಿಸಿದ್ದಾರೆ. ಅವರ ಸಮಾಧಿ ಅನ್ವೇಷಣೆ ಮಾಡಿ 5 ಕೃತಿಗಳನ್ನು ಸಂಶೋಧ ನಾತ್ಮಕವಾಗಿ ಹೊರತಂದಿದ್ದಾರೆ ಎಂದು ಶ್ಲ್ಯಾಘಿಸಿದರು.

ಸಮಾಧಿ ಸ್ಥಳ ಅಭಿವೃದ್ಧಿಗಾಗಿ ಒಂದು ಸಮಿತಿ ರಚಿಸಿ, ಅಲ್ಲಿ ಕೈ ಗೊಳ್ಳಬೇಕಾದ ಕೆಲಸಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿ ಮನವಿ ಸಲ್ಲಿಸಿದರೆ, ಅಭಿವೃದ್ಧಿ ಮಾಡಲು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ಪುಸ್ತಕ ಕುರಿತು ವಿಶ್ರಾಂತ ಪ್ರಾಚಾರ್ಯ ಡಾ.ಎಲ್.ಎಂ. ಪ್ರಭಾಕರ್ ಲಕ್ಕೊಳ್ ಮಾತನಾಡಿ, ಹಿರಿಯ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಹೊರ ತಂದಿರುವ ಕೃತಿ ನಿಜಕ್ಕೂ ವಾಸ್ತವಾಂಶವನ್ನು ಪ್ರತಿಪಾದಿಸುತ್ತದೆ ಎಂದರು. ಮಹಲಿಂಗರಂಗ ಕನ್ನಡದ ಶ್ರೇಷ್ಠ ಕವಿ. ಮಹಲಿಂಗರಂಗರ ಇತಿಹಾಸ ತಿರುಚುವವರಿಗೆ ಈ ಪುಸ್ತಕ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮಹಲಿಂಗರಂಗರ ಸಮಾಧಿ ವಿವಾದ ಮತ್ತು ಜನ್ಮ ಸ್ಥಳ ಕುರಿತು ಇರುವ ಗೊಂದಲ, ಶೈವ ಸಂಸ್ಕೃತಿ ಮತ್ತು ಕನ್ನಡದಲ್ಲಿ ಮಹಲಿಂಗರಂಗರು ಬರೆದ ಪದ್ಯಗಳ ಕುರಿತು ದಾಖಲೆ ಸಹಿತ ಉತ್ತರಿಸಿದ್ದಾರೆ ಎಂದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತ ನಾಡಿ, ಈ ನೆಲದ ಸಂಸ್ಕೃತಿಯ ಮಹಲಿಂಗರಂಗರು ಐಕ್ಯವಾಗಿರುವ ಈ ಜಾಗ ನಿಜಕ್ಕೂ ಪಾವನ. ವಿದ್ಯಾರ್ಥಿಗಳು ಈ ಸೊಬಗನ್ನು ಸವಿಯಬೇಕು.

ಕೃತಿಯ ಲೇಖಕ, ಹಿರಿಯ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಮಾತನಾಡಿ, ನಾಗರೀಕತೆ ಬೆಳೆದಂತೆ ಸಂಸ್ಕೃತಿ, ಸಂಸ್ಕಾರ ನಾಶವಾಗುತ್ತದೆ. ನಮ್ಮ ಈ ನೆಲದ ಕನ್ನಡದ ಅನುಭಾವ ಕವಿ ಮಹಲಿಂಗರಂಗರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯವಾದುದು. ಮಹಲಿಂಗರಂಗರ ಜನ್ಮಸ್ಥಳ ವಿವಾದ ಮತ್ತು ಸಮಾಧಿ ಸ್ಥಳ ವಿವಾದ ಬಗೆಹರಿಸುವ ಪ್ರಯತ್ನವನ್ನು ಈ ಕೃತಿಯ ಮೂಲಕ ಮಾಡಿದ್ದೇನೆ ಎಂದರು.  

ಹಿರಿಯ ಸಾಹಿತಿ ಎನ್.ಟಿ.ಎರ್ರಿಸ್ವಾಮಿ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ್ ಕುರ್ಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಿ.ಡಿ ರವಿಚಂದ್ರ, ಎಚ್.ಎಲ್.ಹಾಲೇಶ್ ಮಾತನಾಡಿದರು. 

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಗುತ್ತಿದುರ್ಗ ಗ್ರಾಪಂ ಅಧ್ಯಕ್ಷ ಮಾನಸ ಲಿಂಗರಾಜ್,  ಸಾಹಿತಿ ಡಾ.ರಾಜಪ್ಪ ನಿಬಗೂರು, ಡಿ.ಸಿ.ಮಲ್ಲಿಕಾರ್ಜುನ್, ಮಹಲಿಂಗರಂಗ ವೇದಿಕೆ ಹಜರತ್ ಅಲಿ, ಎಸ್.ಎಂ. ಸೋಮನಗೌಡ ಇತರರಿದ್ದರು.

error: Content is protected !!