7ನೇ ವೇತನ ಆಯೋಗ ಜಾರಿಗಾಗಿ ಆಗ್ರಹ

7ನೇ ವೇತನ ಆಯೋಗ ಜಾರಿಗಾಗಿ ಆಗ್ರಹ

7ನೇ ವೇತನ ಆಯೋಗ ಜಾರಿಗಾಗಿ ಆಗ್ರಹ - Janathavani

ಸರ್ಕಾರಿ ನೌಕರರ ಸಂಘದಿಂದ ಬೈಕ್ ರಾಲಿ, ಸಚಿವರು, ಶಾಸಕರು, ಡಿಸಿಗೆ ಮನವಿ 

ದಾವಣಗೆರೆ, ಜು. 12- ಸರ್ಕಾರಿ ನೌಕರರಿಗೆ ಸಂಬಂಧಿಸಿದ ಏಳನೇ ವೇತನ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೊಳಿಸುವುದೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಇಂದು ನಗರದಲ್ಲಿ ಬೈಕ್ ರಾಲಿ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕರುಗಳಾದ ಡಾ.ಶಾಮನೂರು ಶಿವಶಂಕರಪ್ಪ, ಕೆ.ಎಸ್. ಬಸವಂತಪ್ಪ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರ 2017ರಲ್ಲಿ ರಚಿಸಿದ್ದ ವೇತನ ಆಯೋಗದ ವರದಿಯನ್ನು ಸಲ್ಲಿಸಿದ 6 ತಿಂಗಳಲ್ಲೇ ಜಾರಿಗೊಳಿಸಲಾಗಿತ್ತು. ಅದು ಅನುಷ್ಠಾನಗೊಂಡು 5 ವರ್ಷವಾಗಿರುವುದರಿಂದ ನೌಕರರ ವೇತನ ಮತ್ತು ಭತ್ಯೆಗಳನ್ನು 2022 ಜುಲೈ ತಿಂಗಳಿಂದ ಪರಿಷ್ಕರಿಸಬೇಕಾಗಿತ್ತು. ಸಂಘದ ಒತ್ತಡದಿಂದಾಗಿ ಹಿಂದಿನ ಸರ್ಕಾರ ಅದೇ ವರ್ಷದ ನವೆಂಬರ್‌ನಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿದ ಕೆ. ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಿ, ಆರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಿತ್ತು.

ಆರು ತಿಂಗಳೊಳಗೆ ವರದಿ ‍ಪಡೆಯದ ಸರ್ಕಾರ ಆಯೋಗವನ್ನು ಎರಡು ಸಲ ಆರು ತಿಂಗಳ ಅವಧಿಗೆ ವಿಸ್ತರಿಸಿದೆ. ಈ ವರ್ಷ ಮಾರ್ಚ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಇದರೊಂದಿಗೆ ಆಯೋಗ ರಚನೆಯಾಗಿ 19 ತಿಂಗಳು ಕಳೆದಿವೆ. ಇದರ ಮಧ್ಯೆ ಸಂಘ ಕೈಗೊಂಡ ಮುಷ್ಕರದಿಂದಾಗಿ ಸರ್ಕಾರ ಶೇ. 17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಅಲ್ಲದೆ, ನೌಕರರ ಸ‌ಮ್ಮೇಳನದದಲ್ಲಿ ಮುಖ್ಯಮಂತ್ರಿ ನೀಡಿದ್ದ ವರದಿ ಅನುಷ್ಠಾನದ ಭರವಸೆ ಇನ್ನೂ ಈಡೇರಿಲ್ಲ. ಈಗಲಾದರೂ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಆಯೋಗದ ವರದಿ ಜಾರಿ ಜೊತೆಗೆ ಎನ್‌ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಬೇಕು. ರಾಜ್ಯದಲ್ಲಿ 2.60 ಲಕ್ಷ ಖಾಲಿ ಹುದ್ದೆಗಳಿವೆ. ಹಾಲಿ ನೌಕರರಿಗೆ ಕಾರ್ಯಭಾರ ಹೆಚ್ಚಾಗಿ ಒತ್ತಡಕ್ಕೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ, ಕೂಡಲೇ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಒಡೇನಪುರ, ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ, ಖಜಾಂಚಿ ತಿಪ್ಪೇಸ್ವಾಮಿ, ನಿಕಟ ಪೂರ್ವ
ಅಧ್ಯಕ್ಷ ಪಿ. ಪಾಲಾಕ್ಷಿ, ಗೌರವಾಧ್ಯಕ್ಷರುಗಳಾದ ಹೆಚ್. ಬಸವರಾಜಪ್ಪ, ಕಾಟಿಹಳ್ಳಿ ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಪರಶುರಾಮಪ್ಪ, ರಾಜ್ಯ
ಪರಿಷತ್ ಸದಸ್ಯೆ ಮಂಜಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಮಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮುಬಾರಕ್ ಅಲಿ, ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಸಿ.ಬಿ. ರವಿ ಸೇರಿದಂತೆ
ವಿವಿಧ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

error: Content is protected !!