ವೀರಶೈವ ಧರ್ಮ ವೃಕ್ಷದ ಬೇರು ರೇಣುಕರಾದರೆ ಆ ವೃಕ್ಷದ ಹಣ್ಣು ಬಸವಣ್ಣನವರು

ವೀರಶೈವ ಧರ್ಮ ವೃಕ್ಷದ ಬೇರು  ರೇಣುಕರಾದರೆ ಆ ವೃಕ್ಷದ ಹಣ್ಣು ಬಸವಣ್ಣನವರು

ಹರಿಹರ, ಜು. 9 – ವೀರಶೈವ ಧರ್ಮದ ಇತಿಹಾಸ ಪರಂಪರೆ ಪ್ರಾಚೀನವಾದುದು. ವೀರಶೈವ ಧರ್ಮ ವೃಕ್ಷದ ಬೇರು ರೇಣುಕಾದಿ ಪಂಚಾಚಾರ್ಯರಾದರೆ, ಆ ಧರ್ಮ ವೃಕ್ಷದ ಹಣ್ಣು ಬಸವಣ್ಣನವರು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇಂದು ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮಕ್ಕೊಂದು ಸಂವಿಧಾನವಿದೆ. 28 ಶಿವಾಗಮಗಳ ಉತ್ತರ ಭಾಗದಲ್ಲಿ ವೀರಶೈವ ಧರ್ಮದ ಹಿರಿಮೆ ಮತ್ತು ವಿಶ್ವ ಬಂಧುತ್ವದ ಚಿಂತನೆಗಳನ್ನು ಕಾಣಬಹುದು. ಈ 28 ಆಗಮಗಳ ಸಾರವನ್ನೊಳಗೊಂಡ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಬೋಧ ಮಾಡಿದ್ದಾರೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಶ್ರೇಷ್ಠ ಎಂಬುದನ್ನು ಅರಿಯಬೇಕಾಗುತ್ತದೆ ಎಂದರು.

ವೀರಶೈವ ಧರ್ಮ ಜಾತಿ, ಮತ, ಪಂಥಗಳ ಗಡಿ ಮೀರಿ ವಿಶ್ವ ಬಂಧುತ್ವದ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಿದೆ. ಪುಸ್ತಕದ ಪುಟ ಬದಲಾಯಿಸಬಹುದೇ ಹೊರತು, ಇತಿಹಾಸ ಪರಂಪರೆ ಮರೆ ಮಾಚುವುದು ಯಾರಿಂದಲೂ ಸಾಧ್ಯವಿಲ್ಲ. ಅಜ್ಞಾನ ಮನುಷ್ಯನನ್ನು ಸ್ವಾರ್ಥದ ಸೆಳೆತಗಳ ಸುಳಿಯಲ್ಲಿ ಸಿಲುಕಿಸುತ್ತದೆ ಎಂಬ ಮಾತಿನಂತೆ, ಕೆಲವರು ಸ್ವಾರ್ಥಕ್ಕಾಗಿ ಸಮಾಜವನ್ನು ಬಲಿ ತೆಗೆದುಕೊಳ್ಳುವುದು ಒಳಿತಾದುದಲ್ಲ. ನೂರು ಸಲ ಸುಳ್ಳು ಹೇಳಿದರೆ ಅದು ಸತ್ಯವಾಗಬಹುದೆಂಬ ಭ್ರಮೆ ಕೆಲವರಿಗುಂಟು. ಸಾವಿರ ಸಲ ಹೇಳಿದರೂ ಸುಳ್ಳು ಸುಳ್ಳೇ ಸತ್ಯ ಯಾವಾಗಲೂ ಸತ್ಯವೇ ಆಗಿರುತ್ತದೆ. ಜನ ಸಮುದಾಯದಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಕೆಲವು ಮಠಾಧೀಶರ ಮತ್ತು ರಾಜಕೀಯ ವ್ಯಕ್ತಿಗಳ ಬಗೆಗೆ ಶ್ರೀ ಜಗದ್ಗುರುಗಳು ಅಸಮಾಧಾನ ವ್ಯಕ್ತಪಡಿಸಿದರು. 

ಅಖಿಲ ಭಾರತ ವೀರಶೈವ ಮಹಾಸಭಾ ಲಿಂ. ಹಾನಗಲ್ಲ ಕುಮಾರಸ್ವಾಮಿಗಳ ಆದರ್ಶ ಚಿಂತನೆಗಳನ್ನು ಬೆಳೆಸುವ ಮತ್ತು ಮೂಲ ಧ್ಯೇಯೋದ್ಧೇಶಗಳಿಗೆ ಚ್ಯುತಿ ಬರದಂತೆ ಮುನ್ನಡೆಸಿಕೊಂಡು ಹೋಗುವ ಅಗತ್ಯವಿದೆ ಎಂದು ರಂಭಾಪುರಿ ಜಗದ್ಗುರುಗಳು ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವೀಯ ಸಂಬಂಧಗಳು ಶಿಥಿಲ ಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಜನ ಸಮುದಾ ಯಕ್ಕೆ ಸಂಸ್ಕಾರ ಮತ್ತು ಆದರ್ಶ ಶಿಕ್ಷಣ ಕೊಡಿಸುವ ಅಗತ್ಯವಿದೆ. ಸತ್ಯದ ತಳಹದಿಯ ಮೇಲೆ ಸೈದ್ಧಾಂತಿಕ ನಿಲುವು ಗಟ್ಟಿಗೊಳ್ಳಬೇಕಾಗಿದೆ ಎಂದರು. 

ಅ.ಭಾ.ವೀ. ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ಬಿಜೆಪಿ ಧುರೀಣ ಚಂದ್ರಶೇಖರ ಪೂಜಾರ,  ಕಾಂಗ್ರೆಸ್ ಮುಖಂಡ ಬಿ. ಹಾಲೇಶಗೌಡ, ತಪೋವನ ಛೇರ್ಮನ್ ಶಶಿಕುಮಾರ ಮೆಹರವಾಡೆ, ವೀರಶೈವ ಸಮಾಜದ ಧುರೀಣ ಕೊಂಡಜ್ಜಿ ಈಶ್ವರಪ್ಪ, ಮಲ್ಲಿಕಾರ್ಜುನ ಕಲ್ಮಠ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 

ಕು. ವರ್ಷಿಣಿ ಸಾಲಿಮಠ ಅವರಿಂದ ಭರತ ನಾಟ್ಯ ಜರುಗಿತು. ಕಾಂತರಾಜ ಮತ್ತು ವೀರೇಶ್ ಇವರಿಂದ ಪ್ರಾರ್ಥನಾ ಗೀತೆ ಜರುಗಿತು. ಹರಿಹರದ ಕುಮಾರಿ ಐಶ್ವರ್ಯ ಸ್ವಾಗತಿಸಿದರು. ಗುರುಬಸವರಾಜ ಮತ್ತು ಡಾ. ಶ್ವೇತಾ ಈಶ್ವರ ನಿರೂಪಿಸಿದರು. 

ಇದೇ ಸಂದರ್ಭದಲ್ಲಿ ‘ರಂಭಾಪುರಿ ಬೆಳಗು’ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ದಾವಣಗೆರೆಯ ಡಾ. ಸವಿತಾ ಮತ್ತು ಡಾ.ಮಹೇಶ್ ದಂಪತಿ ಅನ್ನ ದಾಸೋಹ ನೆರವೇರಿಸಿದರು.

error: Content is protected !!