8,831 ಪ್ರಕರಣಗಳು ಇತ್ಯರ್ಥಕ್ಕೆ ಅರ್ಹ, 5 ಸಾವಿರ ಇತ್ಯರ್ಥದ ಗುರಿ
ದಾವಣಗೆರೆ, ಜು. 9 – ಇದೇ ದಿನಾಂಕ 13ರ ಶನಿವಾರ ನಗರದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 40,713 ಪ್ರಕರಣಗಳು ಬಾಕಿ ಇವೆ. ಇವುಗಳ ಪೈಕಿ 8,871 ಪ್ರಕರಣಗಳು ರಾಜಿಗೆ ಅರ್ಹ ಎಂದು ಗುರುತಿಸಲಾಗಿದೆ. ಈ ಬಾರಿ 5-6 ಸಾವಿರ ಪ್ರಕರಣಗಳು ರಾಜೀ ಮಾಡುವ ಗುರಿ ಇದೆ ಎಂದು ಹೇಳಿದರು.
ಈ ಹಿಂದೆ ಮಾರ್ಚ್ 16ರಂದು ಲೋಕ್ ಅದಾಲತ್ ನಡೆದಾಗ 4,568 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿತ್ತು ಎಂದವರು ಹೇಳಿದರು.
ಈಗಾಗಲೇ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳ ಜೊತೆಗೆ, ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ರಾಜೀ ಸಂಧಾನಕ್ಕೆ ಒಳಪಡಿಸಲಾಗುವುದು.
ಲೋಕ್ ಅದಾಲತ್ ಮೂಲಕ ಶೀಘ್ರವಾಗಿ ಹಾಗೂ ಶುಲ್ಕ ರಹಿತವಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಾಧ್ಯ. ನ್ಯಾಯಾಲಯದ ತೀರ್ಪಿನಲ್ಲಿ ಒಬ್ಬರು ಮಾತ್ರ ಗೆಲ್ಲಲು ಸಾಧ್ಯ, ರಾಜೀ ಸಂಧಾನದಲ್ಲಿ ಇಬ್ಬರೂ ಕಕ್ಷಿದಾರರಿಗೆ ಗೆಲುವು ಸಿಗುತ್ತದೆ ಎಂದು ನ್ಯಾಯಾಧೀಶೆ ಹೆಗಡೆ ಹೇಳಿದರು.
ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿಸಲು ಅನುಕೂಲವಾಗಲೆಂದು ಶೇ.5ರ ರಿಯಾಯಿತಿಯನ್ನು ಸರ್ಕಾರದ ಆದೇಶದ ಮೂಲಕ ಜಾರಿಗೆ ತರಲಾಗಿದೆ. ಈ ಅವಕಾಶವನ್ನೂ ಸಾರ್ವಜನಿಕರು ಲೋಕ್ ಅದಾಲತ್ ಮೂಲಕ ಬಳಸಿಕೊಳ್ಳಬಹುದು ಎಂದರು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಪ್ರಕರಣಗಳಿಗೆ ವಿಶೇಷ ಅದಾಲತ್
ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಬಾಕಿ ಇರುವ ಹಾಗೂ ರಾಜಿಯಾಗಬಲ್ಲ ಪ್ರಕರಣ ಗಳಿಗೆ ಸಂಬಂಧಿಸಿದಂತೆ ವಿಶೇಷ ಲೋಕ್ ಅದಾಲತ್ ಅನ್ನು ಜು. 29ರಿಂದ ಆಗಸ್ಟ್ 3ರ ನಡುವೆ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಈ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯಗಳು ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದವರು ಹೇಳಿದರು. ಜಿಲ್ಲೆಯ ಒಟ್ಟು 31 ಇಂತಹ ಪ್ರಕರಣಗಳು ರಾಜೀ ಸಂಧಾನಕ್ಕೆ ಅರ್ಹವಾಗಿವೆ ಎಂದವರು ತಿಳಿಸಿದರು.
ಈ ಪ್ರಕರಣಗಳನ್ನು ಜಿಲ್ಲಾ ಹಂತದಲ್ಲೇ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳ ಬಹುದು. ಸುಪ್ರೀಂ ಕೋರ್ಟ್ನಲ್ಲೇ ಪ್ರಕರಣ ರಾಜೀ ಮಾಡಿಕೊಳ್ಳಲು ಬಯಸುವುದಾದರೆ, ಅದಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸೌಲಭ್ಯ ಕಲ್ಪಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ತಿಳಿಸಿದರು.
ರಾಜೀಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ಪರಿಹಾರ, ಬ್ಯಾಂಕ್ ಸಾಲ, ಎಂ.ಎಂ.ಡಿ.ಆರ್., ವಿಚ್ಛೇದನ ಹೊರತಾದ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು, ಪಿಂಚಣಿ, ವೇತನ, ವಿದ್ಯುತ್, ನೀರಿನ ಶುಲ್ಕ, ಕೈಗಾರಿಕಾ ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆಯಿಂದ ಬಗೆಹರಿಸಿಕೊಳ್ಳಬಹುದು ಎಂದವರು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಹಳೆ ನ್ಯಾಯಾಲಯದ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (ದೂ.: 08192 – 296364), ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ ದೂ.: 08192 – 296885, ಹೊನ್ನಾಳಿ ದೂ. :08188 251732, ಚನ್ನಗಿರಿ ದೂ. :08189 – 229195 ಹಾಗೂ ಜಗಳೂರು ದೂ. : 08196 227600 ಇವರನ್ನು ಸಂಪರ್ಕಿಸಬಹುದು.
ಜಿಲ್ಲಾ ವಕೀಲರ ಒಕ್ಕೂಟದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಮಾತನಾಡಿ, ಜಿಲ್ಲಾ ವಕೀಲರ ಒಕ್ಕೂಟದ ವತಿಯಿಂದ ಲೋಕ್ ಅದಾಲತ್ಗಳಿಗೆ ಹಿಂದಿನಿಂದಲೂ ಸಹಕಾರ ನೀಡುತ್ತಾ ಬರಲಾಗಿದೆ. ಕಕ್ಷಿದಾರರಿಗೆ ಲೋಕ್ ಅದಾಲತ್ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ, ಸಿ.ಜೆ.ಎಂ. ನ್ಯಾಯಾಧೀಶರಾದ ನಿವೇದಿತ, ಎಎಸ್ಪಿ ವಿಜಯ ಕುಮಾರ್ ಎಂ. ಸಂತೋಷ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಬಸವರಾಜ್ ಉಪಸ್ಥಿತರಿದ್ದರು.