ಕೃತಕ ಬುದ್ಧಿಮತ್ತೆಯು ತಂತ್ರಾಂಶ ಅಭಿವೃದ್ಧಿಯನ್ನೂ ಮೀರಬಹುದು

ಕೃತಕ ಬುದ್ಧಿಮತ್ತೆಯು ತಂತ್ರಾಂಶ ಅಭಿವೃದ್ಧಿಯನ್ನೂ ಮೀರಬಹುದು

ಬಾಪೂಜಿ ಎಂಬಿಎ ಕಾಲೇಜಿನಲ್ಲಿನ ಆಕ್ಟಾಗನ್ 2024 ಕಾರ್ಯಕ್ರಮದಲ್ಲಿ ಸಿ.ವಿ.ಗೌಡರ್

ದಾವಣಗೆರೆ, ಜೂ.20- ಕೃತಕ  ಬುದ್ಧಿಮತ್ತೆಯು ಈಗಿನ್ನೂ ಆರಂಭಿಕ ಹಂತದಲ್ಲಿದ್ದು, ಮುಂದೆ ವ್ಯಾಪಕವಾದಲ್ಲಿ  ತಂತ್ರಾಂಶ ಅಭಿವೃದ್ಧಿ ಅಂದರೆ ಸಾಫ್ಟ್‌ವೇರ್ ಡೆವಲೆಪ್‌ಮೆಂಟ್ ಸಹಾ ಒಂದು ಕೌಶಲ್ಯವಾಗಿರದೇ ಸಾಮಾನ್ಯವೆನ್ನಿಸಬಹುದು. ಆದ್ದರಿಂದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಇರುವವರು ಕೃತಕ ಬುದ್ಧಿಮತ್ತೆಯ ಚಿಕ್ಕ ಚಿಕ್ಕ ಕೋರ್ಸ್‌ಗಳನ್ನು ಈಗಿಂದಲೇ ಮಾಡುವುದು ಕ್ಷೇಮಕರ ಎಂದು ಬೆಂಗಳೂರಿನ ಎಂಪ್ಲೇ ಇನ್ಕಾರ್ಪೊರೇಷನ್‌ನ ಮುಖ್ಯ ವಿಶ್ಲೇಷಣಾಧಿಕಾರಿ ಸಿ.ವಿ.ಗೌಡರ್ ಕಿವಿಮಾತು ಹೇಳಿದರು.

ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಇಂದು ಏರ್ಪಾಡಾಗಿದ್ದ ರಾಜ್ಯಮಟ್ಟದ ಅಂತರ ಕಾಲೇಜು ಯುವೋತ್ಸವ `ಆಕ್ಟಾಗನ್ 2024′ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕೃತಕ ಬುದ್ಧಿಮತ್ತೆಯು ಮಾನವರಂತೆಯೇ  ಕಾರ್ಯನಿರ್ವಹಿಸುತ್ತದೆಯಾದರೂ ಅತ್ಯಂತ ಚುರುಕಾಗಿ ಹಾಗೂ ನಿಖರವಾಗಿ ನಿರ್ವಹಿಸುತ್ತದೆ. ಚಾಲಕನಿಲ್ಲದ ಸ್ವಯಂ ಚಾಲಿತ ಕಾರುಗಳು, ವೈದ್ಯರಿಲ್ಲದೇ ವೈದ್ಯಕೀಯ ತಪಾಸಣೆ, ತತ್‌ಕ್ಷಣದ ಭಾಷಾಂತರ ವ್ಯವಸ್ಥೆ, ಯಂತ್ರಗಳೇ ನಿರ್ವಹಿಸುವ ಷೇರು ವ್ಯವಹಾರ ಮುಂತಾಗಿ ಏನೆಲ್ಲವೂ ಕೌತುಕಮಯವಾಗಬಹುದು. ಆದರೂ ಗಾಬರಿಬೇಡ, ಆಸಕ್ತಿಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆ ಬಗ್ಗೆ ಈಗಿಂದಲೇ ಆಲೋಚನೆ ಮತ್ತು ಸಂಶೋಧನೆಗಳನ್ನು ವೈಯಕ್ತಿಕವಾಗಿ ಕೈಗೊಳ್ಳುವುದು ಕ್ಷೇಮಕರ. ಕೃತಕ ಬುದ್ಧಿಮತ್ತೆಯು ದೊಡ್ಡ ಶಕ್ತಿಯಾಗಬಹುದಾದರೂ ಅದರ ಸದುಪಯೋಗ ಮುಖ್ಯ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಎಂಬಿಎ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ  ತ್ರಿಭುವನಾನಂದ ಮಾತನಾಡಿ, `ಆಕ್ಟಾಗನ್’ ಅಂದರೆ ಅಷ್ಟಕೋನ ಎಂಬ ಈ ಉತ್ಸವದಲ್ಲಿ ಜೀವನಾವಶ್ಯಕ ಎಂಟು ಸಾಂಬಾರು ಪದಾರ್ಥಗಳ ಹೆಸರುಗಳನ್ನು ಎಂಟು ಸ್ಪರ್ಧೆಗಳಿಗೆ ಇಟ್ಟಿದ್ದು, ರಾಜ್ಯದ 23ಕ್ಕೂ ಹೆಚ್ಚು ಕಾಲೇಜುಗಳಿಂದ ಸ್ಪರ್ಧಾರ್ಥಿಗಳು ಬಂದಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಛೇರ್ಮನ್ ಡಾ. ಅಥಣಿ ಎಸ್.ವೀರಣ್ಣ ಮಾತನಾಡಿ, ಕೃತಕ ಬುದ್ಧಿಮತ್ತೆಯು ಭವಿಷ್ಯದಲ್ಲಿ
ಉದ್ಯೋಗಗಳನ್ನು ಕಸಿಯುತ್ತದೆ ಎಂಬ ಆತಂಕ ಬೇಡ. ಇದು ಹೊಸ ಹೊಸ ಉದ್ಯೋಗಗಳನ್ನು
ಸೃಷ್ಟಿಸಿಕೊಡುವ ಸಾಧ್ಯತೆಗಳಿವೆ. ಆದ್ದರಿಂದಲೇ ತಮ್ಮ ಸಂಸ್ಥೆಯಲ್ಲಿ ಪಠ್ಯದಲ್ಲಿಲ್ಲದಿದ್ದರೂ ಕೃತಕ ಬುದ್ಧಿಮತ್ತೆಯ ವಿಷಯವನ್ನು ಅತಿಥಿ ಉಪನ್ಯಾಸಕರ ಮೂಲಕ ವಿದ್ಯಾರ್ಥಿಗಳಿಗೆ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ವಿಭಾಗ ಮುಖ್ಯಸ್ಥ ಡಾ.ಎಸ್.ಹೆಚ್.ಸುಜಿತ್ ಕುಮಾರ್, ಅಧ್ಯಾಪಕರುಗಳಾದ ಡಾ.ಶ್ರುತಿ ಮಾಕನೂರು, ಡಾ. ಪ್ರಕಾಶ್ ಅಳಲಗೇರಿ, ಕೆ.ವಿಜಯ್, ಡಾ. ಚೈತ್ರಾ, ಸರೋಜಾ, ವನಿತಾ ಪಾಟೀಲ್, ರಾಯ್ಕರ್ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

ಸುಪ್ರಿಯಾ ದಿವಾಕರ್ ಹಾಗೂ ಅಯೇಷಾ ಸಿದ್ದಿಕಾ ನಿರೂಪಿಸಿದ ಕಾರ್ಯಕ್ರಮದಲ್ಲಿ, ಪ್ರಾರ್ಥನೆಯನ್ನು ಭಾವನಾ ಹಾಡಿದರೆ, ಅತಿಥಿಗಳ ಪರಿಚಯವನ್ನು ಅನುಷಾ ಧನು ಅಮೂಲ್ಯ ನಿವೇದಿತಾ ಮಾಡಿದರು. ಆಕ್ಟಾಗನ್ 2024ರ ಪಾರಿತೋಷಕಗಳನ್ನು ಅಧ್ಯಕ್ಷರು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು.

error: Content is protected !!