ಶನೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ, ತೊಟ್ಟಿಲೋತ್ಸವ, ರಥೋತ್ಸವ, ಅನ್ನ ಸಂತರ್ಪಣೆ
ದಾವಣಗೆರೆ, ಜೂ.6- ನಗರದ ಶನೇಶ್ವರ ದೇವಾಲಯಗಳಲ್ಲಿ ಗುರುವಾರ ಶನೇಶ್ವರ ಸ್ವಾಮಿಯ ಜಯಂತ್ಯುತ್ಸವವನ್ನು ಶ್ರದ್ಧಾ – ಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಶನೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ, ನಾನಾ ಅಭಿಷೇಕ, ತೊಟ್ಟಿಲೋತ್ಸವ, ರಥೋತ್ಸವ, ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಡೆದವು. ಹನುಮಾನ್ ಮಂದಿರಗಳಲ್ಲೂ ವಿಶೇಷ ಪೂಜೆಗಳು ನಡೆದವು.
ಎಸ್‌ಓಜಿ ಕಾಲೋನಿಯಲ್ಲಿರುವ ಕರ್ಮಫಲದಾತ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆಯೇ ಪಂಚಾಮೃತ ಅಭಿಷೇಕ, ತೈಲಾಭಿಷೇಕ, ಪುಷ್ಪಾಲಂಕಾರ ನಡೆಯಿತು. ನಂತರ ಪುಣ್ಯ, ನಂದಿ, ಹೋಮಗಳು ನಡೆದವು.
ಪಿ.ಬಿ. ರಸ್ತೆ ಕರೂರು ಬಳಿಯ ಪಂಚ ದೇವಸ್ಥಾನಗಳ ಮಹಾಕ್ಷೇತ್ರದಲ್ಲಿ ಶ್ರೀ ಶನೇಶ್ವರ ಸ್ವಾಮಿಯ 30ನೇ ವರ್ಷದ ಜಯಂತ್ಯುತ್ಸವ ನಡೆಯಿತು. ಶ್ರೀ ಕಾಶಿ ವಿಶ್ವನಾಥಲಿಂಗ ಹಾಗೂ ಶ್ರೀ ಶನೇಶ್ವರ ಸ್ವಾಮಿಗೆ ತೈಲಾಭಿಷೇಕ, ಅಭಿಷೇಕಗಳು ನಡೆದವು. ನಂತರ ತೊಟ್ಟಿಲು ಪೂಜೆ, ಶನೇಶ್ವರ ಸಹಿತ ನವಗ್ರಹ ಶಾಂತಿ ಹೋಮ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು.
ಕೆ.ಟಿ. ಜಂಬಣ್ಣ ನಗರದ ಎರಡನೇ ಕ್ರಾಸ್‌ನ ಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಜಯಂತ್ಯುತ್ಸವ ನೆರವೇರಿತು. ಬೆಳಗ್ಗೆ 6 ರಿಂದಲೇ ತೈಲಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನಂತರ ತೊಟ್ಟಿಲೋ ತ್ಸವ ನಡೆಯಿತು.
ಕೆಟಿಜೆ ನಗರದ 10ನೇ ಕ್ರಾಸ್‌ನಲ್ಲಿರುವ ಶ್ರೀ ಶನೈಶ್ಚರ ಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ವಿದ್ಯಾಗಣಪತಿ, ಅಭಯಹಸ್ತ ಆಂಜನೇಯ, ಜಗದಾಂಬ, ನವಗ್ರಹ ಸಹಿತ ಶನೈಶ್ಚರ ದೇವಾಲಯದಲ್ಲಿ ಶನೈಶ್ಚರ ಜಯಂತಿ ಹಾಗೂ ರಥೋತ್ಸವ ನಡೆಯಿತು.
ಹದಡಿ ರಸ್ತೆಯ ಕೊಪ್ಪದಾಂಬ ಸೇವಾ ಟ್ರಸ್ಟ್‌ನ ಶ್ರೀ ಕ್ಷೇತ್ರ ನವಸ್ಥಾನದಲ್ಲೂ ವಿಶೇಷ ಪೂಜೆಗಳು ಜರುಗಿದವು. ಬೆಳಗ್ಗೆ ಪಂಚಾಮೃತ ಅಭಿಷೇಕ, ತೈಲಾಭಿಷೇಕ, ಅಲಂಕಾರ ಸೇವೆ, ನಂತರ ತೊಟ್ಟಿಲೋತ್ಸವ ನಡೆಯಿತು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ರಥೋತ್ಸವಕ್ಕೆ ಚಾಲನೆ ನೀಡಿದರು. ಕುಂಭ ಹೊತ್ತ ಮಹಿಳೆಯರ ಮೆರವಣಿಗೆ ರಥೋತ್ಸವಕ್ಕೆ ಮೆರಗು ನೀಡಿತು. ನಂತರ ಅನ್ನ ಸಂತರ್ಪಣೆ ನಡೆಯಿತು.
ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷ ಬಿ.ಎನ್.ಮಲ್ಲೇಶ್, ಸಹ ಕಾರ್ಯದರ್ಶಿ ಡಿ.ಎನ್.ಜಗದೀಶ್, ಕಾರ್ಯದರ್ಶಿ ಎ.ವೈ.ಕೃಷ್ಣಮೂರ್ತಿ, ಖಜಾಂಚಿ ನಂಜುಂಡಪ್ಪ, ನಿರ್ದೇಶಕರಾದ ಅಶೋಕ್, ರಾಜಣ್ಣ, ಎನ್.ಶ್ರೀನಿವಾಸ್, ಐರಣಿ ತಿಮ್ಮಯ್ಯ, ತಿಮ್ಮಪ್ಪ ಹುಲಿಕೆರೆ, ಇಎಸ್‌ಐ ಶ್ರೀನಿವಾಸ್, ಷಣ್ಮುಖಪ್ಪ, ಮೀನಾಕ್ಷಮ್ಮ, ಚೌಧರಿ ರಂಗಪ್ಪ ಇತರರು ಇದ್ದರು.