ಭಾರತ ಶ್ರೀಲಂಕಾದ ಸಾಂಸ್ಕೃತಿಕ ವಿನಿಮಯ ಉದ್ಘಾಟಕ ಡಾ.ಎಚ್.ಬಿ.ಮಂಜುನಾಥ
ದಾವಣಗೆರೆ, ಮೇ 24- ಆಸ್ತಿ, ಅಂತಸ್ತು, ಅಧಿಕಾರ, ಹಣದಿಂದ ಸಂತೋಷ ಪಡೆಯಬಹುದೇ ಹೊರತು ಆನಂದ ಪಡೆಯಲು ಸಾಧ್ಯವಿಲ್ಲ. ಶಾಸ್ತ್ರೀಯ ನೃತ್ಯ ಸಂಗೀತಗಳು ಆನಂದ ನೀಡಬಲ್ಲವು ಎಂದು ಹಿರಿಯ ಪತ್ರಕರ್ತ ಡಾ.ಹೆಚ್.ಬಿ.ಮಂಜುನಾಥ ಹೇಳಿದರು.
ಅವರಿಂದು ನಗರದ ನಮನ ಅಕಾಡೆಮಿ ಹಾಗೂ ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಅಂಡ್ ಲೀಶರ್ ಜಂಟಿಯಾಗಿ ಏರ್ಪಾಡಿಸಿದ್ದ ಇಂಡೋ – ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ `ನಮನಶ್ರೀ’ ಪ್ರಶಸ್ತಿ, ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಭಾರತ ಕೇವಲ ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಷ್ಟೇ ಅಲ್ಲ. ಜಗತ್ತೇ ಪೂಜ್ಯ ಭಾವನೆಯಿಂದ ಗೌರವಿಸುವ ಶಾಸ್ತ್ರೀಯ ಕಲಾ ಸಂಪತ್ತು ನಮ್ಮಲ್ಲಿದೆಯಾದರೂ, ಬೇರೆ ದೇಶಗಳ ಕಲಾ ಪ್ರಕಾರಗಳನ್ನು ಗೌರವಿಸುವ ಔದಾರ್ಯತೆ ನಮ್ಮದು ಎಂದು ಹೆಚ್.ಬಿ.ಮಂಜುನಾಥ್ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಅಂಡ್ ಲೀಶರ್‌ನ ರೋಷನ್ ಸಿಲ್ವ, ಹಿಮಾಲಿ ಉಪೇಕ್ಷಾ ಜಯತಿಲಕಾ, ಮರಿನಾ ಪೆರೇರಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಮನ ಅಕಾಡೆಮಿಯ ಗೋಪಾಲಕೃಷ್ಣ ಸ್ವಾಗತ ಕೋರಿದರೆ, ಮಾಧವಿ ಗೋಪಾಲಕೃಷ್ಣ ಪ್ರಾಸ್ತಾವಿಕ ನುಡಿಗಳೊಂದಿಗೆ ವರದಿ ವಾಚಿಸಿದರು.
ಮಾನಸಿ, ಶ್ರೀಧರ್ ನಿರೂಪಿಸಿದರೆ, ಪಿ.ಸಿ.ರಾಮನಾಥ್ ವಂದನೆ ಸಲ್ಲಿಸಿದರು. ಅನಿಲ್ ಬಾರೆಂಗಳ್ ಮುಂತಾದವರು ಭಾಗವಹಿಸಿದ್ದರು.
ಶ್ರೀಲಂಕಾ ಹಾಗೂ ಭಾರತೀಯ ಶಾಸ್ತ್ರೀಯ, ಲಘು ಶಾಸ್ತ್ರೀಯ ನೃತ್ಯ ಪ್ರಸ್ತುತಿಗಳು ಸಭಾಸದರ ಮನಸೂರೆಗೊಳಿ ಸಿದವು. ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು.