ಭಾರತ ಎ.ಐ. ಅವಕಾಶ ಕಳೆದುಕೊಳ್ಳದಿರಲಿ

ಭಾರತ ಎ.ಐ. ಅವಕಾಶ ಕಳೆದುಕೊಳ್ಳದಿರಲಿ

ಇಂಜಿನಿಯರ್, ಸಂಶೋಧನಾ ಬಲದೊಂದಿಗೆ ಕೃತಕ ಬುದ್ಧಿವಂತಿಕೆಯಲ್ಲಿ ಮುನ್ನಡೆ ಸಾಧ್ಯ : ಡಾ. ಬಿ.ಇ. ರಂಗಸ್ವಾಮಿ 

ದಾವಣಗೆರೆ, ಮೇ 20 – ಭಾರತ ಈ ಹಿಂದೆ ಸೂಪರ್‌ ಕಂಡಕ್ಟಿವಿಟಿ ಹಾಗೂ ನ್ಯಾನೋ ತಂತ್ರಜ್ಞಾನದಲ್ಲಿ ಮುಂಚೂಣಿಗೆ ಬರುವ ಅವಕಾಶ ಕಳೆದುಕೊಂಡಿತ್ತು. ಈಗ, ಕೃತಕ ಬುದ್ಧಿವಂತಿಕೆ (ಎ.ಐ.) ಅವಕಾಶವನ್ನು ಭಾರತ ಕಳೆದುಕೊಳ್ಳಬಾರದು ಎಂದು ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಬಿ.ಇ. ರಂಗಸ್ವಾಮಿ ಹೇಳಿದರು.

ನಗರದ ಬಾಪೂಜಿ ಬಿ – ಸ್ಕೂಲ್ಸ್‌ನಲ್ಲಿ ಬಿ.ಐ.ಹೆಚ್.ಟಿ. ವತಿಯಿಂದ ಆಯೋಜಿಸಲಾಗಿದ್ದ ಕೃತಕ ಬುದ್ಧಿವಂತಿಕೆ ಕುರಿತ ಪ್ರಜ್ಞಾ – 3.0 ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸಂಶೋಧನಾ ವಲಯದ ಹೂಡಿಕೆಯ ಸಿಂಹಪಾಲು ಈಗ ಕೃತಕ ಬುದ್ಧಿವಂತಿಕೆಗೆ ದೊರೆಯುತ್ತಿದೆ. ನಾಲ್ಕೈದು ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ, ಎಲ್ಲ ವಲಯಗಳಲ್ಲಿ ಎ.ಐ. ಆವರಿಸಲಿದೆ. 2035ರ ವೇಳೆಗೆ ಮನೆಗಳಲ್ಲೂ ಹೆಚ್ಚಿನ ಮಟ್ಟದ ಎ.ಐ. ಬಳಕೆಯಾಗಲಿದೆ ಎಂದವರು ಹೇಳಿದರು.

ಕಳೆದ ಆರೇಳು ವರ್ಷಗಳಲ್ಲಿ ಕೃತಕ ಬುದ್ಧಿವಂತಿಕೆ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ. ಭಾರತ ಸಹ ಎ.ಐ. 2027ರ ವೇಳೆಗೆ ವಲಯದ ಸಂಶೋಧನೆಗಾಗಿ 17 ಶತಕೋಟಿ ರೂ.ಗಳ ಹೂಡಿಕೆಯ ಗುರಿ ಹೊಂದಿದೆ ಎಂದು ರಂಗಸ್ವಾಮಿ ಹೇಳಿದರು.

ಪ್ರಸ್ತುತ ಅಮೆರಿಕ ಎ.ಐ. ಹೂಡಿಕೆಯ ಮುಂಚೂಣಿಯಲ್ಲಿದೆ. ನಂತರದ ಸ್ಥಾನದಲ್ಲಿ ಚೀನಾ, ಜಪಾನ್ ಹಾಗೂ ಜರ್ಮನಿಗಳಿವೆ. ಆದರೆ, ಭಾರತದಲ್ಲಿ ಕೃತಕ ಬುದ್ಧಿವಂತಿಕೆ ವಲಯದಲ್ಲಿ ಕಾರ್ಯನಿರ್ವಹಿಸಲು ಸಾಕಷ್ಟು ಇಂಜಿನಿಯರ್‌ಗಳು ಲಭ್ಯವಿದ್ದಾರೆ. ಇದರ ಜೊತೆಗೆ ಸಂಶೋಧನಾ ವಲಯದಲ್ಲಿ ಭಾರತ ಮುಂಚೂಣಿಗೆ ಬರುತ್ತಿದ್ದು, 13.5 ಲಕ್ಷದಷ್ಟು ಸಂಶೋಧನಾ ಬರಹಗಳು ಪ್ರಕಟವಾಗುತ್ತಿವೆ. ಇದು ಭಾರತ ಎ.ಐ. ವಲಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ನೆರವಾಗಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಎ.ಐ. ಕಾರಣದಿಂದ ಉದ್ಯೋಗ ನಷ್ಟವಾಗುವ ಕಳವಳ ಇದೆ. ಜೊತೆಗೆ ವೈಯಕ್ತಿಕ ಗೌಪ್ಯ ಮಾಹಿತಿಗಳ ಸುರಕ್ಷತೆಯ ಬಗ್ಗೆಯೂ ಆತಂಕಗಳಿವೆ. ಇದರ ಹೊರತಾಗಿಯೂ ಎ.ಐ. ಕಾರಣದಿಂದ ಸಾಕಷ್ಟು ಉತ್ತಮ ಅಂಶಗಳಿವೆ. ಹೀಗಾಗಿ ಎ.ಐ. ಅಳವಡಿಕೆಯಲ್ಲಿ ಭಾರತ ದಾಪುಗಾಲು ಹಾಕಿ ಮುಂಚೂಣಿಗೆ ಬರಬೇಕಿದೆ ಎಂದವರು ಅಭಿಪ್ರಾಯ ಪಟ್ಟರು.

ಬಿ.ಐ.ಹೆಚ್.ಟಿ. ಪ್ರಾಂಶುಪಾಲ ಬಿ. ವೀರಪ್ಪ ಮಾತನಾಡಿ, ಕಂಪ್ಯೂಟರ್ ವಲಯದಲ್ಲಿ ಕಾರ್ಯನಿರ್ವಹಿಸಲು ಬಯಸುವವರಿಗೆ ಗಣಿತದ ಜ್ಞಾನ ಅತ್ಯುಪಯುಕ್ತ. ಗಣಿತದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಬಾಪೂಜಿ ಬಿ ಸ್ಕೂಲ್ಸ್ ನಿರ್ದೇಶಕ ಹೆಚ್.ವಿ. ಸ್ವಾಮಿ ತ್ರಿಭುವಾನಂದ ಮಾತನಾಡಿ, ವ್ಯಾಪಾರ, ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ವಲಯಗಳಲ್ಲಿ ಕೃತಕ ಬುದ್ಧಿವಂತಿಕೆಯಿಂದ ಅತಿ ಹೆಚ್ಚಿನ ಪರಿಣಾಮವಾಗಲಿದೆ. ಈ ಹಿಂದೆ ಕಂಪ್ಯೂಟರೀಕರಣದಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದರೆ, ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದವು. ಕೃತಕ ಬುದ್ಧಿವಂತಿಕೆಯೂ ಅದೇ ರೀತಿಯ ಪರಿಣಾಮ ಬೀರಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಚೇರ್ಮನ್ ಅಥಣಿ ಎಸ್. ವೀರಣ್ಣ, ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಅಲ್ಲದೆ ಸಾಮಾನ್ಯ ಪದವಿಯಲ್ಲೂ ಕೃತಕ ಬುದ್ಧಿಮತ್ತೆಯ ಶಿಕ್ಷಣದ ಅಗತ್ಯವಿದೆ ಎಂದರು. 

ಇದೇ ವೇಳೆ ಮಾರ್ಕೆಟಿಂಗ್ ಸ್ಟೋರೀಸ್ -2 ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ಬಿ.ಬಿ. ಮಂಜುನಾಥ್, ಬಿ.ವಿ.ಶ್ವೇತಾ, ಒ.ಹೆಚ್.ಲತಾ, ಎಂ.ಎಸ್.ನಾಗರಾಜ್‌, ಜ್ಞಾನೇಶ್ವರ ಸುಳಕೆ, ಟಿ.ಎಸ್. ಕಾಂಚನ, ಡಿ.ಪಿ. ನಿಶಾರಾಣಿ, ಎ.ಎನ್.ಮಂಜುಳಾ, ಡಿ.ಆರ್. ನರೇಂದ್ರ ವಿಚಾರ ಸಂಕಿರಣದ ಸಹಯೋಜಕರಾಗಿದ್ದರು.

ಎನ್.ಸಿ. ಪ್ರಜ್ಞಾ ಪ್ರಾರ್ಥಿಸಿದರು. ವಿ.ಎನ್. ಸಂಜನ ಹಾಗೂ ಎಂ.ಕೆ. ಆದಿತ್ಯ ನಿರೂಪಿಸಿದರು. ಜಿ.ಪಿ. ಸೈಯದ್ ಅರ್ಮಾನ್ ವಂದಿಸಿದರು.

error: Content is protected !!