`ಅಪರೂಪದ ಕಲಾಸಂಪತ್ತು ಉಜ್ಜಿನಿಯ ಶಿಖರ’
ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಶಿಖರ ತೈಲಾಭ್ಯಂಜನ ಉತ್ಸವ ಸೋಮವಾರ ವೈಭವದಿಂದ ನೆರವೇರಿತು.
ಕೊಟ್ಟೂರು, ಮೇ 13 – ತಾಲ್ಲೂಕಿನ ಉಜ್ಜಯಿನಿ ಮರುಳಾರಾಧ್ಯ ಪೀಠದ ವಿಶಿಷ್ಟ ಆಚರಣೆ ಆಗಿರುವ ಸ್ವಾಮಿಯ ಗೋಪುರದ ಶಿಖರಕ್ಕೆ ಗೋಧೂಳಿ ಲಗ್ನದಲ್ಲಿ ತೈಲಾಭಿಷೇಕ ಮಾಡುವ ಸಂಪ್ರದಾಯದ ಉತ್ಸವ ಅದ್ದೂರಿ ಯಾಗಿ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.
ಜಗದ್ಗುರು ಮರುಳಸಿದ್ಧ ರಾಜ ದೇಶೀಕೇಂದ್ರ ಸ್ವಾಮಿಗಳ ಸಮ್ಮುಖದಲ್ಲಿ ನಡೆದ ಈ ಉತ್ಸವದಲ್ಲಿ ಲಕ್ಷಾಂತರ ಭಕ್ತ ಸಮೂಹ ಹಾಗೂ ಸುತ್ತಲಿನ ಹತ್ತಾರು ಹಳ್ಳಿಗಳ ಜನರು ಪಾಲ್ಗೊಂಡು ವಿಜೃಂಭಿಸಿದರು.
ಪ್ರತಿವರ್ಷ ವೈಶಾಖ ಶುದ್ಧ ಷಷ್ಠಿಯಂದು ನಡೆಯುವ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕವು ದಕ್ಷಿಣ ಭಾರತದಲ್ಲಿಯೇ ವಿಶೇಷವಾಗಿದೆ. ಜರ್ಮಲಿ ಪಾಳೆಗಾರರ ವಂಶ ಸ್ಥರು ಪ್ರತಿವರ್ಷವೂ ಶಿಖರದ ತೈಲಾಭಿಷೇಕಕ್ಕೆ ತೈಲವನ್ನು ಕಳಿಸುವುದು ಸಂಪ್ರದಾಯ. ಅವರು ಕಳಿಸಿದ ತೈಲವನ್ನು ಮೊದಲಿಗೆ ಸ್ವಾಮಿಯ ಶಿಖರಕ್ಕೆ ಎರೆದ ನಂತರ ಉಳಿದ ಭಕ್ತರ ತೈಲವನ್ನು ಶಿಖರಕ್ಕೆ ಎರೆಯಲಾಗುವುದು.
ಪ್ರತಿವರ್ಷ ಜರ್ಮಲಿ ರಾಜರ ವಂಶಸ್ಥರು ನೇಮ, ನಿಷ್ಠೆ, ವ್ರತ, ಉಪವಾಸದಿಂದ ನಡೆದು ಬಂದು ತಂದ ತೈಲವನ್ನು ಶಿಖರಕ್ಕೆ ಸುರಿದ ಆನಂತರವೇ ಭಕ್ತರು ಹರಕೆಯಂತೆ ನೀಡಿದ ತೈಲವನ್ನು ಶಿಖರದ ಮೇಲೆ ಸುರಿಯುತ್ತಾರೆ.
ಇದು ಬಳಪದ ಕಲ್ಲಿನ ಗೋಪುರವಾಗಿದ್ದು, ಸೂಕ್ಷ್ಮ ಕೆತ್ತನೆಗಳ ಕಲೆ ಇದೆ. ಈ ಕಲೆ ಬಿಸಿಲು, ಮಳೆ, ಗಾಳಿಗೆ, ಹಾಳಾಗಬಾರದೆಂಬ ಉದ್ದೇಶದಿಂದ ಪ್ರತಿವರ್ಷ ಶಿಖರಕ್ಕೆ ತೈಲ ಮಜ್ಜನ ಮಾಡುವ ಮೂಲಕ ಅಪರೂಪದ ಕಲಾಸಂಪತ್ತು ಉಳಿಸುವ ಉದ್ದೇಶ ಇದಾಗಿದೆ ಎಂಬುದು ವಿಚಾರವಂತರು, ಕೆಲವು ಇತಿಹಾಸಕಾರ ಅಭಿಪ್ರಾಯ. ಶಿಖರ ತೈಲಾಭಿಷೇಕ ಕಣ್ಣುಂಬಿಸಿಕೊಳ್ಳಲು ಪ್ರತಿವರ್ಷ ಲಕ್ಷಗಟ್ಟಲೇ ಭಕ್ತರು ಆಚರಣೆ ನೋಡಲು ಬರುತ್ತಾರೆ.
ನೆರೆದ ಭಕ್ತ ಸಮೂಹವು ಕಣ್ತುಂಬಿಕೊಂಡು ಭಕ್ತಿಯಿಂದ ನಮಿಸಿದರು.ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.