ಎಸ್ಸೆಸ್ಸೆಲ್ಸಿ : ವೆಬ್‌ಕಾಸ್ಟಿಂಗ್‌ ಕಲಿಕೆಗೆ ಹಿಡಿದ ಕನ್ನಡಿ – ನಕಲಿಗೆ ಬಿತ್ತು ಕಡಿವಾಣ, ಕುಸಿಯಿತು ಫಲಿತಾಂಶ, ಹೆಚ್ಚಾಯಿತು ಪರೀಕ್ಷೆಯ ಗುಣಮಟ್ಟ

ಎಸ್ಸೆಸ್ಸೆಲ್ಸಿ : ವೆಬ್‌ಕಾಸ್ಟಿಂಗ್‌ ಕಲಿಕೆಗೆ ಹಿಡಿದ ಕನ್ನಡಿ – ನಕಲಿಗೆ ಬಿತ್ತು ಕಡಿವಾಣ, ಕುಸಿಯಿತು ಫಲಿತಾಂಶ, ಹೆಚ್ಚಾಯಿತು ಪರೀಕ್ಷೆಯ ಗುಣಮಟ್ಟ

ಗಂಭೀರತೆ ಹೆಚ್ಚಾದರೆ ಫಲಿತಾಂಶ ಉತ್ತಮ

ಮೂರು ದಿನಗಳ ಹಿಂದಷ್ಟೇ ಪ್ರಕಟವಾದ ಐ.ಸಿ.ಎಸ್.ಇ. 10ನೇ ತರಗತಿಯ ಫಲಿತಾಂಶದಲ್ಲಿ ಬಾಲಕರು ಶೇ.99.31 ಹಾಗೂ ಬಾಲಕಿಯರು ಶೇ.99.65ರಷ್ಟು ಫಲಿತಾಂಶ ಪಡೆದಿ ದ್ದರು. ಉಭಯರ ಫಲಿತಾಂಶದಲ್ಲಿ ಹೆಚ್ಚು ವ್ಯತ್ಯಾಸ ಇರಲಿಲ್ಲ.

ಆದರೆ, ಕರ್ನಾಟಕದಲ್ಲಿ ಹತ್ತನೇ ತರಗತಿಯಲ್ಲಿ ಬಾಲಕಿಯರು ಶೇಕಡ 81.11ರಷ್ಟು, ಬಾಲಕರು ಶೇಕಡ 65.90 ರಷ್ಟು ತೇರ್ಗಡೆಯಾಗಿದ್ದಾರೆ. ವ್ಯತ್ಯಾಸ ಶೇ.15ರಷ್ಟಿದೆ. ಕಲಿಕೆಯಲ್ಲಿ ಗಂಭೀರತೆ ಕಡಿಮೆಯಾಗುವುದೇ ಫಲಿತಾಂಶ ಇಳಿಕೆಯಾಗಲು ಕಾರಣ. ಐ.ಸಿ.ಎಸ್.ಇ. ವಿದ್ಯಾರ್ಥಿಗಳಲ್ಲಿ ಗಂಭೀರತೆ ಹೆಚ್ಚಾಗಿರುತ್ತದೆ. ಅದೇ ಗಂಭೀರತೆ ರಾಜ್ಯ ಮಂಡಳಿ ಪರೀಕ್ಷೆಯ ಬಾಲಕರಲ್ಲಿ ಕಂಡು ಬರುತ್ತಿಲ್ಲ ಎಂದು ಶಿಕ್ಷಣ ಪರಿಣಿತ ಜಗನ್ನಾಥ ನಾಡಿಗೇರ್ ಅಭಿಪ್ರಾಯ ಪಡುತ್ತಾರೆ.

ಪರೀಕ್ಷಾ ಸಮಯದಲ್ಲಿ ಐ.ಪಿ.ಎಲ್. ಬರುತ್ತದೆ. ಕ್ರಿಕೆಟ್ ಮೇಲೆ ಬಾಲಕರಿಗೆ ಹೆಚ್ಚು ಹುಚ್ಚು. ಇದು ಪರೀಕ್ಷಾ ಕಲಿಕೆಯ ಮೇಲೆ ಗಮನ ಕೇಂದ್ರೀಕರಿಸಲು ಅಡ್ಡಿಯಾಗುತ್ತಿದೆ ಎಂದೂ ಅವರು ತಿಳಿಸುತ್ತಾರೆ.

ದಾವಣಗೆರೆ, ಮೇ 9 – ಜಿಲ್ಲೆಯಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ. ಫಲಿತಾಂಶದ ಪ್ರಮಾಣ ಹಾಗೂ ರಾಜ್ಯದಲ್ಲಿ ಶ್ರೇಯಾಂಕ ಎರಡೂ ತೀವ್ರ ಕುಸಿತ ಕಂಡಿದೆ. 

ಕಳೆದ ವರ್ಷ ಜಿಲ್ಲೆಯಲ್ಲಿ ಶೇ.92.55ರಷ್ಟು ಫಲಿತಾಂಶ ದೊರೆತಿತ್ತು. ಈ ಬಾರಿ ಶೇ.74.28ರ ಫಲಿತಾಂಶ ದೊರೆತಿದೆ. ಕಳೆದ ವರ್ಷ ಜಿಲ್ಲೆಯ ಫಲಿತಾಂಶದಲ್ಲಿ 14ನೇ ಸ್ಥಾನದಲ್ಲಿತ್ತು. ಈ ಬಾರಿ 23ನೇ ಸ್ಥಾನಕ್ಕೆ ಕುಸಿದಿದೆ. 2022ರಲ್ಲಿ ಜಿಲ್ಲೆ ಫಲಿತಾಂಶದಲ್ಲಿ 10ನೇ ಸ್ಥಾನದಲ್ಲಿತ್ತು.

ಕೇವಲ ದಾವಣಗೆರೆ ಜಿಲ್ಲೆಯಲ್ಲಷ್ಟೇ ಅಲ್ಲದೇ, ಇಡೀ ರಾಜ್ಯದಲ್ಲಿ ಫಲಿತಾಂಶದಲ್ಲಿ ತೀವ್ರ ಕುಸಿತವಾಗಿದೆ. ಇದಕ್ಕೆ ಕಟ್ಟುನಿಟ್ಟಿನ ಪರೀಕ್ಷೆಯೇ ಕಾರಣ ಎಂದು ಶಿಕ್ಷಣ ಮಂಡಳಿಯೇ ಪರೋಕ್ಷವಾಗಿ ಹೇಳುತ್ತಿದೆ. 

ವೆಬ್‌ಕಾಸ್ಟಿಂಗ್‌ ನಿಗಾ ವಹಿಸಿದ ಕಾರಣ, ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕೆ ದೊಡ್ಡ ಪ್ರಮಾಣದ ಕಡಿವಾಣ ಬಿದ್ದಿತ್ತು. ಹೀಗಾಗಿ ಹಲವಾರು ಜಿಲ್ಲೆಗಳ ಶ್ರೇಯಾಂಕದಲ್ಲಿ ಭಾರೀ ಏರಿಳಿತವಾಗಿದೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಚಿತ್ರದುರ್ಗ, ಈ ಬಾರಿ 21ನೇ ಸ್ಥಾನಕ್ಕೆ ಕುಸಿದಿದೆ.

ಕರಾವಳಿ ಭಾಗದಲ್ಲಿ ನಕಲು ಮಾಡುವ ಪಿಡುಗು ಕಡಿಮೆ. ಹೀಗಾಗಿ ಈ ಬಾರಿ ನಕಲಿಗೆ ಕಡಿವಾಣ ಹಾಕಿದ್ದು, ಕರಾವಳಿ ಜಿಲ್ಲೆಗಳಿಗೆ ಲಾಭ ತಂದಿರುವ ಹಾಗಿದೆ. ಉಡುಪಿ 14ನೇ ಸ್ಥಾನದಿಂದ 1ನೇ ಸ್ಥಾನಕ್ಕೆ ಬರಲು ಹಾಗೂ ದಕ್ಷಿಣ ಕನ್ನಡ 17ನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಬರಲು ಇದೇ ಪ್ರಮುಖ ಕಾರಣ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಫಲಿತಾಂಶ ಸುಧಾರಣೆಗಾಗಿ ವರ್ಷವಿಡೀ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬಂದಿರುವುದಾಗಿ ಶಿಕ್ಷಣ ಇಲಾಖೆ ತಿಳಿಸಿತ್ತು. ಕಡಿಮೆ ಫಲಿತಾಂಶದ ಶಾಲೆಗಳ ಮೇಲೆ ನಿಗಾ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್‌ ಬೋಧನೆ, ವಿಷಯ ತಜ್ಞರಿಂದ ಕಲಿಕೆ, ಶಿಕ್ಷಕರಿಗೆ ತರಬೇತಿ, ಪರೀಕ್ಷಾ ಭಯ ನಿವಾರಣೆಗೆ ಕ್ರಮ ಮುಂತಾದ ಹೆಜ್ಜೆಗಳನ್ನು ಇಡಲಾಗಿತ್ತು. ಆದರೆ, ಅಂತಿಮ ಫಲಿತಾಂಶ ಮಾತ್ರ ನಿರೀಕ್ಷೆಗೆ ವಿರುದ್ಧವಾಗಿದೆ.

ಪರೀಕ್ಷೆಯ ಫಲಿತಾಂಶ ಸುಧಾರಣೆ ಕೇವಲ ಶಿಕ್ಷಕರು ಇಲ್ಲವೇ ಅಧಿಕಾರಿಗಳನ್ನು ಅವಲಂಬಿಸಿಲ್ಲ. ಪೋಷಕರು ಹಾಗೂ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಇಡೀ ವ್ಯವಸ್ಥೆಯ ಸುಧಾರಿಸಿದಾಗ ಮಾತ್ರ ಫಲಿತಾಂಶ ಉತ್ತಮ ಪಡಿಸಲು ಸಾಧ್ಯ ಎಂದು ಶಿಕ್ಷಣ ಪರಿಣಿತರು ಅಭಿಪ್ರಾಯ ಪಡುತ್ತಾರೆ.

ಬಾಲಕರು ಹಾಗೂ ಬಾಲಕಿಯರ ಫಲಿತಾಂಶದ ನಡುವೆಯೂ ಗಣನೀಯ ವ್ಯತ್ಯಾಸ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಬಾಲಕಿಯರು ಉತ್ತೀರ್ಣರಾಗುವ ಪ್ರಮಾಣ ಶೇ.82.53ರಷ್ಟಿದೆ. ಬಾಲಕರ ಉತ್ತೀರ್ಣ ಪ್ರಮಾಣ ಕೇವಲ ಶೇ.65.52ರಷ್ಟಿದೆ. ಬಾಲಕರು ಹಾಗೂ ಬಾಲಕಿಯರ ನಡುವಿನ ಉತ್ತೀರ್ಣತೆ ವ್ಯತ್ಯಾಸ ಶೇ.17ರಷ್ಟಿದೆ. ಕಲಿಕೆಯಲ್ಲಿ ಬಾಲಕರ ಗಮನ ನಿರೀಕ್ಷೆಯ ಮಟ್ಟದಲ್ಲಿ ಇಲ್ಲ ಎಂಬುದನ್ನು ಈ ಫಲಿತಾಂಶ ತೋರಿಸುತ್ತದೆ. ಬಾಲಕರ ಫಲಿತಾಂಶದಲ್ಲಿ ಸುಧಾರಣೆಯಾಗದೇ, ಒಟ್ಟಾರೆ ಫಲಿತಾಂಶವೂ ಏರಿಕೆಯಾಗದು ಎಂಬುದು ಸ್ಪಷ್ಟ.

ನಕಲು ಮಾರ್ಗದ ಮೂಲಕ ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಿಸಿಕೊಂಡು ಬೀಗುತ್ತಿದ್ದ ಜಿಲ್ಲೆಗಳು, ಈ ಬಾರಿ ಕಹಿ ವಾಸ್ತವ ಪರಿಸ್ಥಿತಿ ಎದುರಿಸಿವೆ. 

ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಲಿದೆ. ನಕಲು ಮಾಡಲು ಅವಕಾಶವಿಲ್ಲದ ಕಾರಣ, ಶೈಕ್ಷಣಿಕ ವರ್ಷದ ಆರಂಭದಿಂದಲೇ ಕಲಿಕೆಗೆ ಒತ್ತು ನೀಡಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ದೇಶದಲ್ಲೇ ಮೊದಲ ಬಾರಿಗೆ ವೆಬ್‌ಕಾಸ್ಟಿಂಗ್ ಅನ್ನು ಪರಿಣಾಮಕಾರಿ ಯಾಗಿ ಜಾರಿಗೆ ತರಲಾಗಿದೆ. ಈ ಬಗ್ಗೆ ಬೇರೆ ಕೆಲ ರಾಜ್ಯಗಳಲ್ಲೂ ಆಸಕ್ತಿ ಕಂಡು ಬಂದಿದೆ. ವೆಬ್‌ಕಾಸ್ಟಿಂಗ್ ಕಾರಣದಿಂದ ಫಲಿತಾಂಶ ಕಡಿಮೆಯಾದರೂ, ಗುಣಮಟ್ಟದಲ್ಲಿ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದರಿಂದ ಸಕಾರಾತ್ಮಕ ಪರಿಣಾಮವಾಗಲಿದೆ ಎಂದು ಇಲಾಖೆಯ ಮೂಲಗಳು ಹೇಳಿವೆ.

error: Content is protected !!