ಎಸ್ಸೆಸ್ಸೆಲ್ಸಿ ಫಲಿತಾಂಶ : ಜಿಲ್ಲೆಯಲ್ಲಿ ಕುಸಿತ-ಶೇ.74.28ರಷ್ಟು ಉತ್ತೀರ್ಣ, ರಾಜ್ಯದಲ್ಲಿ 23ನೇ ಸ್ಥಾನಕ್ಕೆ ಇಳಿಕೆ

ಎಸ್ಸೆಸ್ಸೆಲ್ಸಿ ಫಲಿತಾಂಶ : ಜಿಲ್ಲೆಯಲ್ಲಿ ಕುಸಿತ-ಶೇ.74.28ರಷ್ಟು ಉತ್ತೀರ್ಣ, ರಾಜ್ಯದಲ್ಲಿ 23ನೇ ಸ್ಥಾನಕ್ಕೆ ಇಳಿಕೆ

ಐಎಎಸ್ ಕನಸಿನಲ್ಲಿ ಜಿಲ್ಲಾ ಟಾಪರ್ ಗಾನವಿ

ದಾವಣಗೆರೆ, ಮೇ 9 – ತರಗತಿಯ ಮೊದಲ ದಿನದಿಂದಲೇ ಪರಿಶ್ರಮ, ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನದಿಂದಾಗಿ ಉತ್ತಮ ಅಂಕಗಳು ದೊರೆತಿವೆ ಎಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿರುವ ಹೆಚ್.ಜಿ. ಗಾನವಿ ತಿಳಿಸಿದ್ದಾರೆ.

ಸಿದ್ದಗಂಗಾ ಶಾಲೆಯ ವಿದ್ಯಾರ್ಥಿನಿಯಾಗಿರುವ ಗಾನವಿ, 625ಕ್ಕೆ 620 ಅಂಕಗಳನ್ನು ಗಳಿಸಿದ್ದಾರೆ. ಅವರು ರಾಜ್ಯ ಮಟ್ಟದಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದಾರೆ.

ಎ.ಪಿ.ಎಂ.ಸಿ. ವರ್ತಕ ಹೆಚ್.ಎನ್. ಗಿರೀಶ್ ಹಾಗೂ ಗೃಹಿಣಿ ಡಿ.ಎಸ್. ಜ್ಯೋತಿ ಅವರ ಪುತ್ರಿಯಾಗಿರುವ ಗಾನವಿ, ಕನ್ನಡದಲ್ಲಿ 124, ಇಂಗ್ಲಿಷ್‌ನಲ್ಲಿ 98, ಹಿಂದಿಯಲ್ಲಿ 100, ಗಣಿತ 100, ವಿಜ್ಞಾನ 98 ಹಾಗೂ ಸಮಾಜದಲ್ಲಿ 100 ಅಂಕಗಳೊಂದಿಗೆ ಶೇ.99.20ರಷ್ಟು ಅಂಕ ಪಡೆದಿದ್ದಾರೆ.

ಚಿಕ್ಕಂದಿನಿಂದಲೂ ಓದಿನಲ್ಲಿ ತಾಯಿ ಮಾರ್ಗದರ್ಶನ ನೀಡುತ್ತಿದ್ದರು. ಸಿದ್ದಗಂಗಾ ಶಾಲೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ಅಧ್ಯಯನಕ್ಕೆ ನೀಡುತ್ತಿದ್ದ ಮಾರ್ಗದರ್ಶನ ಹೆಚ್ಚು ಅಂಕ ಗಳಿಕೆಗೆ ನೆರವಾಗಿದೆ. ಮುಂದೆ ಐ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಜನ ಸೇವೆ ಮಾಡುವ ಬಯಕೆ ಇದೆ ಎಂದವರು ತಿಳಿಸಿದ್ದಾರೆ.

ದಾವಣಗೆರೆ, ಮೇ 9 – ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಶೇ.74.28ರ ಫಲಿತಾಂಶ ದೊರೆತಿದ್ದು, ರಾಜ್ಯದಲ್ಲಿ 23ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶ ಹಾಗೂ ಸ್ಥಾನ ಎರಡರಲ್ಲೂ ಕುಸಿತವಾಗಿದೆ.

ಕಳೆದ ವರ್ಷ ಜಿಲ್ಲೆ ಶೇ.92.55ರ ಫಲಿತಾಂಶದೊಂದಿಗೆ 14ನೇ ಸ್ಥಾನದಲ್ಲಿತ್ತು. ಈ ಬಾರಿ ಫಲಿತಾಂಶದಲ್ಲಿ ಶೇ.18.27 ರ ಭಾರೀ ಇಳಿಕೆಯಾಗಿದೆ.

ಈ ಬಾರಿ ಜಿಲ್ಲೆಯಲ್ಲಿ 20,602 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 15,303 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.

ನಗರದ ಸಿದ್ಧಗಂಗಾ ಪ್ರೌಢ ಶಾಲೆಯ ಹೆಚ್. ಗಾನವಿ ಹಾಗೂ ಚನ್ನಗಿರಿ ತಾಲ್ಲೂ ಕಿನ ತ್ಯಾವಣಗಿಯ ಎಂ.ಎನ್. ಸೃಷ್ಟಿ ಅವರು 620 ಅಂಕ ಗಳಿಸುವ ಮೂಲಕ ಜಿಲ್ಲೆಯ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಜಿಲ್ಲೆಯ 361 ವಿದ್ಯಾರ್ಥಿಗಳು ಕನ್ನಡ ದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿದ್ದಾರೆ.

9,992 ಬಾಲಕರ ಪೈಕಿ 6,547 ಉತ್ತೀರ್ಣರಾಗಿದ್ದು, ಶೇ. 65.52ರಷ್ಟು ಫಲಿತಾಂಶ ದೊರೆತಿದೆ. ಬಾಲಕಿಯರಲ್ಲಿ ಹಾಜರಾದ 10,610ರ ಪೈಕಿ 8,756 ಉತ್ತೀರ್ಣರಾಗಿದ್ದು, ಶೇ.82.53ರ ಫಲಿತಾಂಶ ದೊರೆತಿದೆ.

ಶೈಕ್ಷಣಿಕ ವಲಯಗಳ ಪೈಕಿ ದಾವಣ ಗೆರೆ ದಕ್ಷಿಣ ಮೊದಲ ಸ್ಥಾನದಲ್ಲಿದ್ದು, ಶೇ.81 .63ರ ಫಲಿತಾಂಶ ಪಡೆದಿದೆ. ಹೊನ್ನಾಳಿ ಶೇ.80.72, ದಾವಣಗೆರೆ ಉತ್ತರ ಶೇ.74. 34, ಜಗಳೂರು ಶೇ.70.01, ಚನ್ನಗಿರಿ ಶೇ.70, ಹರಿಹರ ಶೇ.64.05 ಫಲಿತಾಂಶ ದೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಕನ್ನಡ ಮಾಧ್ಯಮ ಶಾಲೆಗಳು ಶೇ.64.15, ಇಂಗ್ಲಿಷ್ ಮಾಧ್ಯಮ ಶಾಲೆಗಳು ಶೇ.88.25 ಹಾಗೂ ಉರ್ದು ಮಾಧ್ಯಮ ಶಾಲೆಗಳು ಶೇ.65.45ರ ಫಲಿತಾಂಶ ಪಡೆದಿವೆ.

ನಗರ ಪ್ರದೇಶಗಳಲ್ಲಿ ಶೇ.77.64 ಹಾಗೂ ಗ್ರಾಮೀಣ ಭಾಗದಲ್ಲಿ ಶೇ.72.13ರ ಫಲಿತಾಂಶ ದೊರೆತಿದೆ.

ಜಿಲ್ಲೆಯ ಒಟ್ಟು 36 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಇವುಗಳಲ್ಲಿ 26 ಅನುದಾನ ರಹಿತ, ಒಂಭತ್ತು ಸರ್ಕಾರಿ ಶಾಲೆ ಹಾಗೂ ಒಂದು ಅನುದಾನಿತ ಶಾಲೆಯಾಗಿದೆ.

ನಗರದ ಭಾರತ್ ಕಾಲೋನಿಯಲ್ಲಿರುವ ನೇತಾಜಿ ಸುಭಾಷ್‌ಚಂದ್ರ ಬೋಸ್ ಶಾಲೆ, ಎಸ್.ಎಸ್. ಬಡಾವಣೆ ಬಿ ಬ್ಲಾಕ್‌ನಲ್ಲಿರುವ ರಾಘವೇಂದ್ರ ವಿದ್ಯಾನಿಕೇತನ ಹಾಗೂ ಹೊನ್ನಾಳಿಯ ಸಾಸ್ವೆಹಳ್ಳಿಯ ಎ.ಡಿ.ವಿ.ಎಸ್. ಹೈಸ್ಕೂಲ್‌ಗಳು ಶೂನ್ಯ ಫಲಿತಾಂಶ ಪಡೆದಿವೆ.

ಜಿಲ್ಲೆಯ 47 ಶಾಲೆಗಳಲ್ಲಿ ಶೇ.40ಕ್ಕೂ ಕಡಿಮೆ ಫಲಿತಾಂಶ ದಾಖಲಾಗಿದೆ. ಇವುಗಳಲ್ಲಿ 33 ಅನುದಾನಿತ, ಎಂಟು ಸರ್ಕಾರಿ ಹಾಗೂ ಆರು ಅನುದಾನ ರಹಿತ ಶಾಲೆಗಳಾಗಿವೆ.

error: Content is protected !!