ಹರಿಹರ, ಮೇ 5 – ನಾಲ್ಕು ಬಾರಿ ಸಂಸದರಾಗಿದ್ದ ಜಿ.ಎಂ.ಸಿದ್ದೇಶ್ವರ ಅವರ ಕೈಯ್ಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಆಗಲಿಲ್ಲ. ಇನ್ನೂ ಅಡುಗೆ ಮಾಡುವ ಮಹಿಳೆ ಹೇಗೆ ದಾವಣಗೆರೆ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತಾರೆ ? ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಶಿಕ್ಷಣವಂತರು, ಜನರ ಕಷ್ಟಗಳಿಗೆ ಸ್ಪಂದಿಸುವ ಒಳ್ಳೆಯ ಗುಣವನ್ನು ಹೊಂದಿದ್ದು, ಸಂಸತ್ ಭವನದಲ್ಲಿ ಜನರ ಧ್ವನಿಯಾಗಿ ಸೇವೆ ಮಾಡುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ. ಅವರನ್ನು ಬಹುಮತದೊಂದಿಗೆ ಗೆಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ನಗರದ ಗಾಂಧಿ ಮೈದಾನದಲ್ಲಿ ನಡೆದ ಲೋಕಸಭಾ ಚುನಾವಣೆಯ ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಪ್ರಜಾಧ್ವನಿ 2 ಪ್ರಚಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರ ಧರ್ಮ ಧರ್ಮದ ಮಧ್ಯೆ, ಜಾತಿ-ಜಾತಿಗಳ ಮಧ್ಯೆ ಕಲಹ ಸೃಷ್ಟಿ ಮಾಡಿ, ಜನರ ನೆಮ್ಮದಿ ಹಾಳು ಮಾಡುವಂತೆ ಮಾಡಿದೆ. ಹಿಂದುಳಿದ ವರ್ಗಗಳ ಮೀಸಲಾತಿ ತೆಗೆದು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿಸಲಾಗಿದೆ ಎಂದು ಸುಳ್ಳು ಸೃಷ್ಟಿ ಮಾಡಿ ಮತವನ್ನು ಪಡೆಯವಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಕಳೆದ 30 ವರ್ಷದ ಕೆಳಗೆ ಚಿನ್ನಪ್ಪ ರೆಡ್ಡಿ ವರದಿಯಂತೆ ಅಲ್ಪಸಂಖ್ಯಾತರಿಗೆ ಶೇ.4 ರಷ್ಟು ಮೀಸಲಾತಿ ಹಂಚಿಕೆಯನ್ನು ಮಾಡಲಾಗಿದೆಯೇ ವಿನಃ ನಮ್ಮ ಸರ್ಕಾರ ಮಾಡಿಲ್ಲ. ಮಾಡಿದ್ದರೆ ನಾವು ಅವರನ್ನು ಟೀಕೆ ಮಾಡುವುದನ್ನು ಕೈ ಬಿಡುತ್ತೇವೆ. ಬಿಜೆಪಿಯವರು ದಲಿತ ಹಿಂದುಳಿದ ವರ್ಗದವರು ಹಾಗೂ ಮುಸ್ಲಿಂ ಸಮುದಾಯದ ಮಧ್ಯೆ ಬಿರುಕು ಸೃಷ್ಟಿ ಮಾಡುವಂತಹ ಕೆಲಸಕ್ಕೆ ಮುಂದಾಗಿದೆ. ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಶೇ.10 ರಷ್ಟು ಮೀಸಲಾತಿಯನ್ನು ಬ್ರಾಹ್ಮಣ ಸಮಾಜಕ್ಕೆ ನೀಡುವಂತಹ ಕೆಲಸವನ್ನು ಮಾಡಿದರು. ಸಂವಿಧಾನವು ಸಮ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನವನ್ನು ಸರಿಯಾಗಿ ಓದದೇ ಇರುವುದಕ್ಕೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಇದುವರೆಗೂ ಬಿಜೆಪಿ ಪಕ್ಷಕ್ಕೆ ಬೆಂಬಲಿಸುವ ಆರ್.ಎಸ್.ಎಸ್. ಮತ್ತು ಇತರೆ ಸಂಘಟನೆಗಳು ಮೀಸಲಾತಿ ವಿರೋಧ ಮಾಡಿಕೊಂಡು ಬಂದಿವೆ. ಜೊತೆಗೆ ರಾಮ್ ಜೋಯಿಷರು ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿ ವಿಚಾರಕ್ಕೆ ಅರ್ಜಿಯನ್ನು ಹಾಕಿದ್ದರು. ಆದರೆ, ಸುಪ್ರೀಂ ಕೋರ್ಟ್ ಅದನ್ನು ರದ್ದುಪಡಿಸಿತು. ನಮ್ಮ ಸರ್ಕಾರ ದಲಿತರಿಗೆ ಹಿಂದುಳಿದ ವರ್ಗದವರಿಗೆ, ಶಿಕ್ಷಣ ಮತ್ತು ಇತರೆ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಮೀಸಲಾತಿ ಕೊಟ್ಟರೆ ಅದನ್ನು ವಿರೋಧ ಮಾಡಿದರು. ಅಲ್ಪಸಂಖ್ಯಾತ ವರ್ಗದವರು ಟೋಪಿ, ಬುರ್ಕಾ ಹಾಕಿದರೆ ಅದನ್ನು ವಿರೋಧ ಮಾಡಿದರು. ಇವರಿಗೆ ನೈತಿಕತೆ ಇದೇನಾ ? ಎಂದು ಪ್ರಶ್ನಿಸಿದರು.
ಹರಿಹರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ : ಸಿಎಂ
ಚುನಾವಣೆ ಮುಗಿದ ನಂತರ ಹರಿಹರ ತಾಲ್ಲೂಕಿನ ಅತ್ಯವಶ್ಯಕವಾಗಿರುವ ಬೈರನಪಾದ ನೀರಾವರಿ ಯೋಜನೆಗೆ ಆದಷ್ಟು ಬೇಗ ಟೆಂಡರ್ ಕರೆಯವ ಮೂಲಕ ತಾಲ್ಲೂಕಿನ 5200 ಹೆಕ್ಟೇರ್ ಜಮೀನಿಗೆ ನೀರು ಹರಿಸುವ ಕೆಲಸಕ್ಕೆ ಮುಂದಾಗುವೆ ಮತ್ತು ತಾಲ್ಲೂಕಿನ ಕೊಂಡಜ್ಜಿ ಹಾಗೂ ಅಗಸನಕಟ್ಟೆ ಕೆರೆ ಅಭಿವೃದ್ಧಿ ಜೊತೆಗೆ ಹರಿಹರ ನಗರದ ಶಾಶ್ವತ ಕುಡಿಯುವ ನೀರಿನ ಶೇಖರಣಾ ಘಟಕ ಸ್ಥಾಪಿಸಿ, ಇಲ್ಲಿನ ಜನತೆಯ ಸಮಸ್ಯೆಯನ್ನು ಚುನಾವಣೆ ಮುಗಿದ ತಕ್ಷಣವೇ ಪರಿಹರಿಸುವುದರ ಮೂಲಕ ಇಲ್ಲಿನ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ ಎಂದು ಸಿ.ಎಂ. ಸಿದ್ದರಾಮಯ್ಯ ಹರಿಹರ ತಾಲ್ಲೂಕಿನ ಜನತೆಗೆ ಭರವಸೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಮ್ಮ ಹತ್ತು ವರ್ಷಗಳಲ್ಲಿ ಸಾಧನೆ ಮಾಡಿದ್ದು, ಅದಾನಿ – ಅಂಬಾನಿಯವರ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದರು. ರೈತರು ದೇಶದ ಆಸ್ತಿ ಎಂದು ಹೇಳುತ್ತಾರೆ. ಆದರೆ, ರೈತರ ಸಾಲಮನ್ನಾ ಮಾಡಲಿಲ್ಲ. ಹಾಗಾಗಿ ಇವರು ಬಡವರ ಪರವಾಗಿ ಇಲ್ಲದೇ ಇರುವುದರಿಂದ ಬಿಜೆಪಿ ಪಕ್ಷದವರಿಗೆ ಮತವನ್ನು ಹಾಕಬೇಡಿ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಹರಿಹರ – ದಾವಣಗೆರೆ ನಗರಗಳ ಸಹೋದರರು ಇದ್ದಂತೆ. ಇಲ್ಲಿನ ನಾಯಕರು ಏನೋ ಸಣ್ಣ ಪುಟ್ಟ ವ್ಯತ್ಯಾಸಗಳು ಇದ್ದರೆ ಅವುಗಳನ್ನು ಬದಿಗಿಟ್ಟು ಒಳ್ಳೆಯ ಲೀಡ್ ಕೊಟ್ಟು ಡಾ. ಪ್ರಭಾ ಮಲ್ಲಿಕಾರ್ಜುನ್ ರವರಿಗೆ ಹೆಚ್ಚು ಮತವನ್ನು ಹಾಕಿಸಬೇಕು. ಅಭ್ಯರ್ಥಿ ಪ್ರಭಾ ಅವರು ಸಂಸದರಾಗಿ ಆಯ್ಕೆಯಾದರೆ, ಮುಖ್ಯವಾಗಿ ನೀರಾವರಿಗೆ ಹೆಚ್ಚು ಆದ್ಯತೆ ಕೊಟ್ಟು, ತುಂಗಭದ್ರಾ ನದಿ ಪಕ್ಕದಲ್ಲಿ ಹರಿಹರ ಇರುವುದರಿಂದ ಕುಡಿಯುವ ನೀರಿನ ಶೇಖರಣಾ ಘಟಕ ಸ್ಥಾಪಿಸಿ, ಇಲ್ಲಿನ ಜನರ ನೀರಿನ ಸಮಸ್ಯೆಯನ್ನು ಪರಿಹರಿಸಲು ಮುಂದಾಗಲಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಕೆ.ಪಿ.ಸಿ.ಸಿ. ರಾಜ್ಯ ವಕ್ತಾರೆ ಯು.ಟಿ.ಫರ್ಜಾನಾ, ಕೆಪಿಸಿಸಿ ಸದಸ್ಯ ಡಿ. ಬಸವರಾಜ್ ಮಾತನಾಡಿದರು.
ಈ ಸಂದರ್ಭದಲ್ಲಿ ಹೆಚ್.ಎಂ.ರೇವಣ್ಣ, ಮಾಜಿ ಎಂ.ಎಲ್.ಸಿ. ಮೋಹನ್ ಕೊಂಡಜ್ಜಿ, ಹೆಚ್.ಎಸ್.ನಾಗರಾಜ್, ಗುತ್ತೂರು ಜಿ.ಬಿ. ಹಾಲೇಶಗೌಡ್ರು, ಎಂ.ನಾಗೇಂದ್ರಪ್ಪ, ಕೃಷ್ಣ ಸಾ ಭೂತೆ, ಡಿ.ಬಸವರಾಜ್, ಹಳ್ಳಳ್ಳಿ ಬಸಪ್ಪ, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ಕೆ.ಜಿ. ಸಿದ್ದೇಶ್, ರಜನಿಕಾಂತ್, ಅಲಿಂ, ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ, ನಿಖಿಲ್ ಕೊಂಡಜ್ಜಿ, ಡಿ.ಕುಮಾರ್, ಎಲ್.ಬಿ.ಹನುಮಂತಪ್ಪ, ಅಬೀದ್ ಅಲಿ, ಬಿ.ಎಂ.ವಾಗೀಶ್ ಸ್ವಾಮಿ, ಟಿ.ಜೆ.ಮುರುಗೇಶಪ್ಪ, ಸಿ.ಎನ್.ಹುಲುಗೇಶ್, ಅಮರಾವತಿ ರೇವಣಸಿದ್ದಪ್ಪ, ಮಂಜುನಾಥ್ ಪಾಟೀಲ್, ಏಜಾಜ್ ಆಹ್ಮದ್, ಎಂ.ಬಿ.ಅಣ್ಣಪ್ಪ, ಕೆ.ಬಿ.ರಾಜಶೇಖರ್, ಜಿಗಳಿ ಆನಂದಪ್ಪ, ಮಲ್ಲೇಶ್ ಕಮಲಾಪುರ, ಕಿರಣ್ ಭೂತೆ, ಮಂಜುನಾಥ್, ಸಂತೋಷ್ ನೋಟದರ್, ಬೀರೇಶ್ ಮಾಸ್ಟರ್, ಸಚಿನ್ ಕೊಂಡಜ್ಜಿ, ವಿಜಯಕುಮಾರ್ ರಟ್ಟಿಹಳ್ಳಿ, ಕಿರಣ ಬೊಂಗಾಳೆ, ಹಬೀಬ್ ಉಲ್ಲಾ, ದಾದಾಪೀರ್ ಭಾನುವಳ್ಳಿ, ಕುಂಬಳೂರು ವಿರೂಪಾಕ್ಷಪ್ಪ, ಬಿ.ಫೈರೋಜ್, ಮಹಮ್ಮದ್ ಸಿಗ್ಬತ್‌ವುಲ್ಲಾ, ಬಿ.ಕೆ.ಸೈಯದ್ ರೆಹಮಾನ್, ಸೈಯದ್ ಜಾಕೀರ್, ನಾಗಮ್ಮ, ವಿದ್ಯಾ, ನೇತ್ರಾವತಿ, ಭಾಗ್ಯಮ್ಮ, ಮಲೇಬೆನ್ನೂರು ಶಿವಕುಮಾರ್, ಕೆ.ಪಿ.ಗಂಗಾಧರ್, ಭೋವಿ ಕುಮಾರ್, ಆದಾಪುರ ವೀರಭದ್ರಪ್ಪ, ನಸ್ರುಲ್ಲಾ, ಇತರರು ಹಾಜರಿದ್ದರು.