ತ್ರಿಕೋನ ಸ್ಪರ್ಧೆಯಲ್ಲಿ ನಾನೇ ಮುಂದು : ವಿನಯ್

ತ್ರಿಕೋನ ಸ್ಪರ್ಧೆಯಲ್ಲಿ ನಾನೇ ಮುಂದು : ವಿನಯ್

ಚನ್ನಗಿರಿ, ಮೇ 1- ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಅವರು ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ನೂರಾರು ಗ್ರಾಮಸ್ಥರು ವಿನಯ್ ಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ಜನರಿಂದ ಭಾರೀ ಬೆಂಬಲ ವ್ಯಕ್ತವಾಯಿತು. 

ವಿನಯ್ ಕುಮಾರ್ ಅವರು ಸಂತೇಬೆನ್ನೂರಿಗೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಸಂಭ್ರಮಿಸಿದ ಗ್ರಾಮಸ್ಥರು, ಹೂವಿನ ಹಾರ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು. 

ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ  ವಿನಯ್ ಕುಮಾರ್ ಅವರು,  ಸಂತೇಬೆನ್ನೂರು ಪುಷ್ಕರಣೆ ತುಂಬಾನೇ ಪ್ರಸಿದ್ಧಿ. ಇದನ್ನು ಐತಿಹಾಸಿಕ ತಾಣವನ್ನಾಗಿಸಲು, ಯುವಕರಿಗೆ ಉದ್ಯೋಗ ದೊರ ಕುವಂತೆ ಮಾಡಲು ದೊಡ್ಡ ಕೈಗಾರಿಕೆಯನ್ನಾಗಲೀ, ಬಡ ಮಕ್ಕಳೂ ಸೇರಿದಂತೆ ಎಲ್ಲಾ ವರ್ಗದವರಿಗೆ ಅನುಕೂಲವಾಗುವಂತೆ ಹೈಟೆಕ್ ಶಾಲೆ, ಕಾಲೇಜುಗಳಾಗಲೀ ಇಲ್ಲ. ನೀವೆಲ್ಲರೂ ಇಲ್ಲಿಗೆ ಬರುವ ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಶ್ನೆ ಕೇಳಿ. ಅಧಿಕಾರದಲ್ಲಿದ್ದರೂ ಯಾಕೆ ಈ ಕೆಲಸ ಮಾಡಿಲ್ಲ ? ಎಂದು ಪ್ರಶ್ನಿಸಿ ಎಂದರು. 

ಶಾಮನೂರು ಕುಟುಂಬ ಹಾಗೂ ಜಿ.ಎಂ. ಸಿದ್ದೇಶ್ವರ ಕುಟುಂಬದವರು ಹೊಸ ನಾಯಕ ಹುಟ್ಟ ಬಾರದು ಎಂಬ ನಿರ್ಧಾರ ಮಾಡಿದ್ದಾರೆ. ಯಾರೂ ಬೆಳೆಯದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದು ಕೊನೆಯಾಗಬೇಕೆಂದರೆ ನನಗೆ ಮತ ನೀಡಿ ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು. ದಾವಣಗೆರೆ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹಾಗೂ ಪಕ್ಷೇತರ ಅಭ್ಯರ್ಥಿಯಾದ ನನ್ನ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಇಬ್ಬರನ್ನೂ ಹಿಂದಿಕ್ಕಿ ನಾನು ಮುಂದೆ ಇದ್ದೇನೆ. ಇದು ಸಾಧ್ಯವಾಗಿರುವುದು ಕ್ಷೇತ್ರದ ಜನರ ಆಶೀರ್ವಾದದಿಂದ ಎಂದು ತಿಳಿಸಿದರು. 

ಈ ವೇಳೆ ಸಂತೇಬೆನ್ನೂರು ಗ್ರಾಮದ ಮುಖಂಡರಾದ ಇರ್ಫಾನ್, ರಾಘಣ್ಣ, ಗಂಗಣ್ಣ, ರಾಜೀವ್,  ಖಾದರ್, ಫೈರೋಜ್, ಸಾಹಿಂ, ಜೌಬಿ ಸಾಬ್, ಜಬೀರ್, ಜಾಕೀರ್, ಯಂಕೇಶ್ವರಪ್ಪ, ನಾಗರಾಜ್ ಮತ್ತಿತರರು ಹಾಜರಿದ್ದರು.

error: Content is protected !!