ಮತ ಎಣಿಕೆ ಕೇಂದ್ರದ ಸಿದ್ದತೆಯ ಪರಿಶೀಲನೆ

ಮತ ಎಣಿಕೆ ಕೇಂದ್ರದ ಸಿದ್ದತೆಯ ಪರಿಶೀಲನೆ

ಜೂನ್ 4 ರಂದು ತೋಳಹುಣಸೆ ದಾವಿವಿಯಲ್ಲಿ ಮತ ಎಣಿಕೆ

ದಾವಣಗೆರೆ, ಏ.30- ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬರುವ ಮೇ 7 ರಂದು ಮತದಾನ ನಡೆಯಲಿದೆ. ಮತ ಎಣಿಕೆಯು ಜೂನ್ 4 ರಂದು ಬೆಳಗ್ಗೆ 8 ಗಂಟೆಯಿಂದ ತೋಳಹುಣಸೆಯಲ್ಲಿನ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ನಡೆಯಲಿದ್ದು, ಇವಿಎಂ ಭದ್ರತಾ ಕೊಠಡಿ ಮತ್ತು ಎಣಿಕೆ ಕೇಂದ್ರದ ಸಿದ್ದತೆಯನ್ನು ಏಪ್ರಿಲ್ 29 ರಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಪರಿಶೀಲಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಹರಪನಹಳ್ಳಿ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಎಲ್ಲಾ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಶಿವಗಂಗೋತ್ರಿಯಲ್ಲಿ ನಡೆಯಲಿದೆ. ಇಲ್ಲಿನ ಕಾಮರ್ಸ್ ಬ್ಲಾಕ್ ನೆಲಮಹಡಿಯಲ್ಲಿ 4 ಕ್ಷೇತ್ರ ಮತ್ತು ರಾಜ್ಯಶಾಸ್ತ್ರ ಬ್ಲಾಕ್‍ನ ಮೊದಲ ಮಹಡಿಯಲ್ಲಿ 4 ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. 

ಮೇ 7 ರಂದು ಮತದಾನ ನಡೆಯುವು ದರಿಂದ ಮತದಾನ ನಂತರ ಇವಿಎಂಗಳನ್ನು ಡಿಮಸ್ಟರಿಂಗ್ ಕೇಂದ್ರದಿಂದ ಭದ್ರತೆಯೊಂದಿಗೆ ಎಣಿಕಾ ಕೇಂದ್ರಕ್ಕೆ ತಂದು ಭದ್ರತಾ ಕೊಠಡಿಯಲ್ಲಿ ಮತಪೆಟ್ಟಿಗೆಯನ್ನು ಕಾಯ್ದಿರಿಸಲಾಗುತ್ತದೆ. ಮೇ 8 ರಿಂದ ಎಣಿಕೆ ನಡೆಯುವವರೆಗೆ ಅರೆ ಸೇನಾಪಡೆಯ ಭದ್ರತೆಯೊಂದಿಗೆ ಜೂನ್ 4 ರಂದು ನಡೆಯುವ ಎಣಿಕೆವರೆಗೆ ಸಂಪೂರ್ಣ ಸರ್ಪಗಾವಲಿನ ಭದ್ರತಾ ವ್ಯವಸ್ಥೆ ಮಾಡಲಾಗಿರುತ್ತದೆ. ಮತದಾನದ ನಂತರ ಇವಿಎಂಗಳನ್ನು ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸುವುದರಿಂದ ಎಣಿಕೆ ಸಿದ್ದತೆಯನ್ನು ಈಗಲೇ ಮಾಡಿಕೊಳ್ಳಬೇಕಾಗಿದ್ದು ಸಿದ್ದತೆಯನ್ನು ಪರಿಶೀಲಿಸಲಾಯಿತು. 

ಎಣಿಕೆ ಪೂರ್ವ ಇವಿಎಂ ಭದ್ರತೆಗೆ ಟುಟೈರ್ ಪದ್ದತಿ: ಮತದಾನದ ನಂತರ ಇವಿಎಂ ಸಂಗ್ರಹಿಸಲಾದ ಎಣಿಕೆ ಕೇಂದ್ರದಲ್ಲಿ ಸಿಸಿಟಿವಿ ಕಣ್ಗಾವಲು ಜೊತೆಗೆ 100 ಮೀಟರ್ ವ್ಯಾಪ್ತಿಯೊಳಗೆ ಸಿಎಪಿಎಫ್ ಕೇಂದ್ರ ಸಶಸ್ತ್ರ ಪೊಲೀಸ್ ಫೋರ್ಸ್ ಭದ್ರತೆಯನ್ನು ನೀಡಲಾಗುತ್ತದೆ ಮತ್ತು ನಂತರ ರಾಜ್ಯ ಸಶಸ್ತ್ರ ಮೀಸಲು ಪಡೆಯ ಭದ್ರತೆ ಒದಗಿಸಲಾಗಿರುತ್ತದೆ. ಚುನಾವಣಾಧಿಕಾರಿಗಳು ಪ್ರತಿದಿನ ಎರಡು ಭಾರಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುವರು. 

ಇವಿಎಂ ಭದ್ರತಾ ಕೊಠಡಿ ಪರಿಶೀಲನೆಗೆ ಅಭ್ಯರ್ಥಿಗಳಿಗೂ ಅವಕಾಶ: ಮೇ 7 ರಂದು ನಡೆಯುವ ಮತದಾನ ನಂತರ 1946 ಮತಗಟ್ಟೆಗಳಲ್ಲಿನ ಮತಪೆಟ್ಟಿಗೆಗಳನ್ನು ಎಣಿಕೆ ಕೇಂದ್ರದಲ್ಲಿನ ಭದ್ರತಾ ಕೊಠಡಿಗಳಲ್ಲಿ ಕ್ಷೇತ್ರವಾರು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಎಲ್ಲಾ ಭದ್ರತಾ ಕೊಠಡಿಗಳ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಎಲ್ಲಾ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಸೀಲ್ ಮಾಡಲಾಗಿರುತ್ತದೆ ಮತ್ತು ಪ್ರತಿ ಭದ್ರತಾ ಕೊಠಡಿಗೂ ಕೇಂದ್ರ ಸಶಸ್ತ್ರ ಪೊಲೀಸ್ ಫೋರ್ಸ್ ಕಾವಲಿರುತ್ತದೆ. ಭದ್ರತಾ ವ್ಯವಸ್ಥೆ ಪರಿಶೀಲಿಸಲು ಸಿಸಿಟಿವಿ ಅಳವಡಿಸಲಾಗಿದ್ದು, ಇದೆಲ್ಲದರ ನಿಯಂತ್ರಣಕ್ಕಾಗಿ ಕಂಟ್ರೋಲ್ ರೂಂ ಸ್ಥಾಪಿಸಲಾಗುತ್ತದೆ. ಇಲ್ಲಿ ಎಲ್ಲಾ ಕಡೆಯ ಸಿಸಿಟಿವಿಗಳ ಪ್ರದರ್ಶನ ಇರಲಿದೆ. ಅಭ್ಯರ್ಥಿಗಳು ಕಂಟ್ರೋಲ್ ರೂಂಗೆ ಬಂದು ಪರಿಶೀಲಿಸಬಹುದಾಗಿದೆ. ಆದರೆ ಆಗಮಿಸುವ ಬಗ್ಗೆ 24 ಗಂಟೆ ಮುಂಚಿತವಾಗಿ ಮಾಹಿತಿ ನೀಡಿ ಬರಬೇಕಾಗುತ್ತದೆ. ಅವರು ಅಲ್ಲಿಯೇ ಇದ್ದು ನೋಡಲು ಸಹ ಅವಕಾಶ ಇರುತ್ತದೆ. 

ಪರಿಶೀಲನೆ ವೇಳೆ ಅಪರ ಜಿಲ್ಲಾಧಿಕಾರಿ ಸೈಯದಾ ಅಫ್ರಿನ್ ಭಾನು ಎಸ್.ಬಳ್ಳಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು. 

error: Content is protected !!