ಸಿರಿಗೆರೆ, ಏ. 26 – ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಗ್ರಾಮಸ್ಥರು ಲೋಕ ಸಭಾ ಚುನಾವಣೆಗೆ ಬಹಿಷ್ಕಾರ ಹಾಕಿದ್ದರಾದರೂ, ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮನವೊಲಿಕೆಯ ನಂತರ ಮತ ಚಲಾವಣೆ ಮಾಡಿದ್ದಾರೆ.
ಗ್ರಾಮವು ಗಣಿಗಾರಿಕೆಯಿಂದ ಹಲವು ತೊಂದರೆಗಳನ್ನು ಎದುರಿಸುತ್ತಿದೆ. ಆದರೂ, ಗಣಿಗಾರಿಕೆ ಯಲ್ಲಿ ತೊಡಗಿರುವ ಸಂಸ್ಥೆಗಳಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಡಿ.ಎಂ.ಎಫ್. ನಿಧಿಯಲ್ಲಿ ತಾರತಮ್ಯ ಮಾಡ ಲಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರ ಬೇಡಿಕೆಗೆ ಜಿಲ್ಲಾಡಳಿತದ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದರು.
ಈ ವಿಷಯ ತಿಳಿದ ತರಳಬಾಳು ಶ್ರೀಗಳು, ಗ್ರಾಮಕ್ಕೆ ತೆರಳಿ ಅಲ್ಲಿನ ದೇವಾಲಯದಲ್ಲಿ ಜನರೊಂದಿಗೆ ಸುಮಾರು 40 ನಿಮಿಷಗಳ ಕಾಲ ಚರ್ಚೆ ನಡೆಸಿದರು.
ಗ್ರಾಮಸ್ಥರು ಹೇಳುತ್ತಿರುವ ದೂರುಗಳ ಲ್ಲಿ ಸತ್ಯಾಂಶವಿದೆ. ಸುಮಾರು 12 ಪ್ರಮುಖ ಸಮಸ್ಯೆಗಳನ್ನು ಗ್ರಾಮಸ್ಥರು ಎದುರಿಸುತ್ತಿ ದ್ದಾರೆ ಎಂಬುದನ್ನು ಶ್ರೀಗಳು ಮನಗಂಡರು.
ಆದರೆ, ಚುನಾವಣೆಗೆ ಬಹಿಷ್ಕಾರ ಹಾಕುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಇದರಿಂದ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕು ಕಳೆದು ಕೊಳ್ಳುತ್ತೀರಿ ಎಂದು ಶ್ರೀಗಳು ಗ್ರಾಮಸ್ಥರಿಗೆ ತಿಳಿಸಿದರು.
ನಾನು ಯಾವುದೇ ಪಕ್ಷದ ಪರ ಇಲ್ಲವೇ ವಿರುದ್ಧ ವಾಗಿ ಪ್ರಚಾರ ಮಾಡಲು ಬಂದಿಲ್ಲ. ನೀವು ನಿಮ್ಮ ಆಯ್ಕೆ ಯ ಅಭ್ಯರ್ಥಿಗೆ ಮತ ನೀಡಿ. ಆದರೆ, ಮತದಾನವನ್ನು ಮಾತ್ರ ಮಾಡಲೇಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.
ನಂತರ ಶ್ರೀಗಳು ಇಲ್ಲಿನ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲೇ ಕುಳಿತುಕೊಂಡರು. ಗ್ರಾಮಸ್ಥರು ಸಂಜೆ 5 ಗಂಟೆಯವರೆಗೆ ಸರದಿಯಲ್ಲಿ ಬಂದು ಮತದಾನ ಮಾಡಿದರು.