ನೀವೇ ಯೋಚಿಸಿ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ದಾವಣಗೆರೆ, ಏ. 26 – ಕಳೆದ ಬಾರಿ ಆಯ್ಕೆಯಾದ ಸಂಸದರು ಕೊಂಡಜ್ಜಿ ಕೆರೆ ಎಲ್ಲಿದೆ ಎಂದು ಕೇಳುತ್ತಾರೆ, ಮಳೆ ಬಂದ್ರೆ ಕೆರೆ ತುಂಬುತ್ತೆ ಅಂತಾರೆ ಎಂದರೆ ನೀವೇ ಅರ್ಥಮಾಡಿಕೊಳ್ಳಿ ಅಂತಹ ಸಂಸದರು ಬೇಕೇ ? ಎಂದು ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಜಂಟಿ ಕಾರ್ಯದರ್ಶಿಗಳೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಪ್ರಶ್ನಿಸಿದರು.
ನಗರದ ಶ್ರೀ ಡಾ. ಸದ್ಯೋಜಾತ ಶಿವಾಚಾರ್ಯ ಹಿರೇಮಠದಲ್ಲಿ ಇಂದು ಹಮ್ಮಿಕೊಂಡಿದ್ದ ಜೆ.ಜೆ.ಎಂ.ಎಂ.ಸಿ ಹಾಗೂ ಬಾಪೂಜಿ ವಿದ್ಯಾಸಂಸ್ಥೆಗಳ ಅಧಿಕಾರಿ ಸಿಬ್ಬಂದಿಗಳೊಂದಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಬೆಂಬಲ ಸೂಚಿಸುವ ಸಭೆಯಲ್ಲಿ ಮಾತನಾಡಿದರು.
ಮೋದಿ, ವಾಜಪೇಯಿ ಹೆಸರು ಹೇಳಿ ಕಳೆದ ಮೂರು ಬಾರಿ ದಾವಣಗೆರೆಯಲ್ಲಿ ಸಂಸದರಾಗಿರು ವವರ ಸಾಧನೆ ಶೂನ್ಯ, ಒಂದು ಉತ್ತಮ ಅಭಿವೃದ್ದಿ ಕಾರ್ಯ ಯಾವುದಿದೆ ತೋರಿಸಿ? ಎಂದು ಪ್ರಶ್ನೆ ಮಾಡಿದ ಸಚಿವರು ಬಿಜೆಪಿ ಸರ್ಕಾರ ಕೊರೊನಾ ಸಮಯದಲ್ಲಿ ನೂರಾರು ರೂ. ಕೋಟಿ ಲೂಟಿ ಎಂದರು.
ಕ್ವಾರಂಟೈನ್, ಆಕ್ಸಿಜನ್, ಕೋವಿಡ್ ಲಸಿಕೆ ಹೆಸರಲ್ಲಿ ಒಬ್ಬ ರೋಗಿಯಿಂದ 4 ರಿಂದ 10 ಸಾವಿರ, ಒಬ್ಬ ವೈದ್ಯರಿಗೆ 30 ರಿಂದ 40 ಸಾವಿರ ಹೀಗೆ ಲೂಟಿ ಮೇಲೆ ಲೂಟಿ ಮಾಡಲಾಗಿದೆ. ಲಸಿಕೆ ನೀಡುವಾಗಲೂ ರೋಗಿಯ ಕ್ಷೇಮ ಗಮನಿಸದೇ ಇವರು ಲಸಿಕೆಯಲ್ಲಿ ರಾಜಕೀಯ ಮಾಡಿದರು. ಈ ವ್ಯವಸ್ಥೆಯಿಂದ ನಾವು ವೈಯಕ್ತಿಕವಾಗಿ 10 ಕೋಟಿ ಡಿಪಾಸಿಟ್ ಮಾಡಿ ಲಸಿಕೆಯನ್ನು ತರಿಸಿದೆವು. ನಮ್ಮ ವೈದ್ಯರುಗಳು ಹಗಲಿರುಳು ರೋಗಿಗಳ ಕ್ಷೇಮದಲ್ಲಿ ಮಗ್ನರಾಗಿದ್ದರು ಎಂದರು.
ರೂ. 20 ಕೋಟಿ ಬಡ ರೋಗಿಗಳ ಅಭಿವೃದ್ದಿಗೆ ಮೀಸಲಿಟ್ಟಿದ್ದೇವೆ ಎಂದ ಸಚಿವರು, ಬಾಪೂಜಿ ಆರೋಗ್ಯ ಕ್ಯಾಂಪ್ಗಳಿಂದ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಬೆಳಕಿಗೆ ಬಂದಿದ್ದಾರೆ. ಪೌಷ್ಟಿಕಾಂಶ ಒದಗಿಸಲು ಕಾಂಗ್ರೆಸ್ ಸರ್ಕಾರ ಬದ್ದವಾಗಿದೆ. ಜಿಲ್ಲೆಯಲ್ಲಿ ಅರೋಗ್ಯ, ನೀರಾವರಿ ಹಾಗೂ ವಿವಿಧ ಮೂಲ ಸೌಕರ್ಯಗಳಿಗೆ ಉತ್ತಮ ಯೋಜನೆ ರೂಪಿಸಬೇಕು. ಬಿಜೆಪಿಯ ವರಿಗೆ ಬುದ್ದಿ ಇದೇನಾ? ಡಿಸಿಎಂ ಟೌನ್ಶಿಪ್, ಅಶೋಕ ರಸ್ತೆ ಕಾಮಗಾರಿಗಳು ಅವೈಜ್ಞಾನಿಕವಾಗಿವೆ ಎಂದು ದೂರಿದ ಸಚಿವರು ನಾವು ಅವರು ಮಾಡುವ ಕಾರ್ಯಕ್ಕಿಂತ ಹೆಚ್ಚಿನ ಅನುದಾನ ತಂದು ಕಾರ್ಯ ಮಾಡಿರುತ್ತೇವೆ ಎಂದರು.
ಜಿಲ್ಲೆಯ 57 ಕೆರೆ ತುಂಬಿಸುವ ಯೋಜನೆಯು ಕಳಪೆ ಕಾಮಗಾರಿಯಿಂದ 10 ವರ್ಷ ಕಳೆದರೂ ಸಹ ಪೂರ್ಣಗೊಂಡಿಲ್ಲ.
ಕಳೆದ ಚುನಾವಣೆಯಲ್ಲಿ ಉತ್ತರ ಕ್ಷೇತ್ರದಲ್ಲಿ ಕಡಿಮೆ ಮತದಾನವಾಗಿದೆ. ಮೋದಿ ಮೋದಿ ಎನ್ನು ವವರ ತಲೆ ತಿಕ್ಕಬೇಕಿದೆ. ಮೋದಿ ಎನ್ನುವವರಿಗೆ ಅ ವರಪ್ಪನಂತವರು ಬರುವರು ಎಂದು ತೊರಿಸಬೇಕಿದೆ.
ವೈದ್ಯಕೀಯ ಸೇವೆಯಲ್ಲಿ ಹೆಚ್ಚು ಕಾರ್ಯಗಳಾಗ ಬೇಕಿದೆ. ಜಿಲ್ಲಾ ಆಸ್ಪತ್ರೆಯ ಕಥೆ ಹೇಳಿದರೆ ದಿನಗಟ್ಟಲೇ ಬೇಕಾಗುವುದು, ಜಿಲ್ಲೆಯಲ್ಲಿ 1800 ಬೆಡ್ ಇರುವ ಉತ್ತಮ ಆಸ್ಪತ್ರೆ ಕಟ್ಟುತ್ತಿದ್ದೇವೆ. ಮುಂದಿನ ದಿಗಳಲ್ಲಿ ಉತ್ತಮ ಸೇವೆ ಲಭಿಸುವುದು, ಮೂರು ಬಾರಿ ಲೋಕಸಭಾ ಸದಸ್ಯರಾದರೂ ಗುಂಡುಪಿನ್ನಿನ ಸೇವೆ ಮಾಡಿಲ್ಲ ಎಂದು ಟೀಕಿಸಿದರು.
ಚುನಾವಣೆಗೆ ಸಮಯ ಬಹಳ ಕಡಿಮೆ ಇದೆ. ಕಳೆದ ಎಂಎಲ್ಎ ಚುನಾವಣೆಯಲ್ಲಿ ನೀಡಿದ ಸಹಕಾರದಂತೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಸಹಕಾರ ಇರಲಿ. ಪ್ರಭಾ ನಿಮ್ಮ ಮನೆಮಗಳು, ಕಕ್ಕರಗೊಳ್ಳದವರಾಗಿದ್ದು ಬಿಜಾಪುರದಲ್ಲಿ ಡೆಂಟಲ್ ಸೀಟ್ ಸಿಕ್ಕಿದ್ರು ದಾವಣಗೆರೆಯಲ್ಲಿ ಓದಿದ್ರು. ಈಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಅವರಿಗೆ ಮತದಾರರೆಲ್ಲ ಕುಟುಂಬ ಸಮೇತರಾಗಿ ಆಗಮಿಸಿ ಮತ ನೀಡಿ ಗೆಲ್ಲಿಸಿ ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಬಾಪೂಜಿ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ. ರವೀಂದ್ರ ಬಣಕಾರ್ ಪ್ರಾಸ್ತಾವಿಕ ಮಾತನಾಡಿದರು. ಜೆ.ಜೆ.ಎಂ.ಎಂ.ಸಿ ಆಡಳಿತ ಅಧಿಕಾರಿ ಟಿ. ಸತ್ಯನಾರಾಯಣ, ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಆಲೂರು, ಪ್ರಾಂಶುಪಾಲರಾದ ಡಾ. ಶುಕ್ಲಾಶೆಟ್ಟಿ, ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕುಮಾರ್.ಡಿ.ಎಸ್., ಬಾಪೂಜಿ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ.ಗುರುಪ್ರಸಾದ್, ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರು ಇದ್ದರು.
ಜೆ.ಜೆ.ಎಂ.ಎಂ.ಸಿಯ ಸಹ ಪ್ರಾಧ್ಯಾಪಕ ಡಾ.ಧನ್ಯಕುಮಾರ್ ಜಿ. ನಿರೂಪಿಸಿದರು. ವೈದ್ಯೆ ನೀತು ವಂದನಾರ್ಪಣೆ ಮಾಡಿದರು.