ದಾವಣಗೆರೆ, ಏ.26- ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ತಾಂತ್ರಿಕ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಸರ್ಕಾರಿ ಡಿಪ್ಲೋಮಾ ಹಾಗೂ ವೃತ್ತಿಪರ ಕೋರ್ಸ್ಗಳ ಪ್ರಾರಂಭಕ್ಕೆ ಒತ್ತು ನೀಡಲಾಗುವುದು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.
ಆನಗೋಡು, ಬಾಡಾ, ಮಾಯಕೊಂಡ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಮತ ಬೇಟೆ ನಡೆಸಿ ಮಾತನಾಡಿದ ಅವರು, ಮಾಯಕೊಂಡ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ವೃತ್ತಿಪರ ಕೋರ್ಸ್ ಹಾಗೂ ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಕೇಂದ್ರ ಪ್ರಾರಂಭಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರ ಯಾವಾಗಲೂ ಬಿಜೆಪಿ ಪರ ಅಲೆ ಇರುವಂತಹ ಕ್ಷೇತ್ರ. ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕ ಬಸವರಾಜ ನಾಯ್ಕ, ಪ್ರೊ.ಎನ್.ಲಿಂಗಣ್ಣ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈಗಿನ ಕಾಂಗ್ರೆಸ್ ಶಾಸಕರು, ಸಚಿವರು ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಕಾಂಗ್ರೆಸ್ ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಶೂನ್ಯ ರಾಜ್ಯ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಅವರು ತ್ಯಾವಣಗಿಯಲ್ಲಿ ಬೀಜೋತ್ಪಾದನಾ ಕೇಂದ್ರದ ಬಲವರ್ಧನೆಗೆ 1.50 ಕೋಟಿ, ಬಸವಾಪಟ್ಟಣ, ತ್ಯಾವಣಗಿ ಯಲ್ಲಿ ರೈತ ಸಂಪರ್ಕ ಕಟ್ಟಡಗಳ ನಿರ್ಮಾಣಕ್ಕೆ 1.20 ಕೋಟಿ ಅನುದಾನ ನೀಡಿದ್ದಾರೆ. ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಸಮುದಾಯ ಭವನ, ಸಹಕಾರ ಸಂಘದ ಕಟ್ಟಡ, ಸಿಸಿ ರಸ್ತೆ, ರಂಗಮಂದಿರ, ಶಾಲಾ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ, ಬಸ್ ತಂಗುದಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮ ಸೇವೆ ಮಾಡುವುದಕ್ಕೆ ನನಗೆ ಅವಕಾಶ ಮಾಡಿಕೊಡಿ. ನನ್ನ ಕ್ರಮ ಸಂಖ್ಯೆ 1, ಗುರುತು ಕಮಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡುವ ಮೂಲಕ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ನಾರಿ ಶಕ್ತಿ ಬೆನ್ನಿಗೆ ನಿಂತ ಮೋದಿ ಜೀ
ಮತಯಾಚನೆ ವೇಳೆ ಮಾತನಾಡಿದ ಗಾಯತ್ರಿ ಸಿದ್ದೇಶ್ವರ ಅವರು, ಪ್ರಧಾನಿ ನರೇಂದ್ರ ಮೋದಿ ಜೀ ಅವರು ಸದಾ ನಾರಿ ಶಕ್ತಿಯ ಬೆನ್ನಿಗೆ ನಿಂತಿದ್ದಾರೆ. ಮೋದಿ ಜೀ ಅವರು ಶಿವಮೊಗ್ಗಕ್ಕೆ ಬಂದಾಗಲೂ ಸಹೋದರಿ ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಿ ದೆಹಲಿ ಕಳುಹಿಸಿ ಎಂದಿದ್ದರು. ಈಗ ಮತ್ತೊಮ್ಮೆ ನಾಡಿದ್ದು ದಿನಾಂಕ 28 ರಂದು ಖುದ್ದು ನಗರಕ್ಕೆ ಬಂದು ನನ್ನ ಪರ ಮತಯಾಚಿಸುತ್ತಿದ್ದಾರೆ ಎಂದರೆ ಅದು ನನ್ನ ಸೌಭಾಗ್ಯ. ಅವರು ಕೇವಲ ಬಾಯಿ ಮಾತಿನಲ್ಲಿ ನಾರಿ ಶಕ್ತಿ ಬಗ್ಗೆ ಹೇಳಿಲ್ಲ. ನನ್ನಂತಹ ನಾರಿಯ ಪರ ಖುದ್ದು ಬಂದು ಮತ ಯಾಚಿಸುತ್ತಿದ್ದಾರೆ. ಏಪ್ರಿಲ್ 28 ರಂದು ಮೋದಿ ಜೀ ಅವರನ್ನು ಕಾಣಲು, ಅವರ ಭಾಷಣ ಕೇಳಲು ಲಕ್ಷಾಂತರ ಮಂದಿ ತುದಿಗಾಲಿನಲ್ಲಿ ನಿಂತಿದ್ದಾರೆ. ನೀವು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬುವುದನ್ನು ತೋರಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ ಮಾತನಾಡಿ, ಸಂಸದ ಸಿದ್ದೇಶಣ್ಣ, ನಾನು ಏನು ಕೇಳಿದರೂ ಇಲ್ಲ ಎನ್ನುವಂತೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಸಿದ್ದೇಶ್ವರ ಅವರ ಸೇವಾ ಮನೋಭಾವ ಅವರನ್ನು 20 ವರ್ಷಗಳ ಕಾಲ ನಮ್ಮ ಜೊತೆಯಲ್ಲಿ ಇರುವಂತೆ ಮಾಡಿತ್ತು. ಈಗ ಅವರ ಧರ್ಮಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಕ್ಷೇತ್ರಕ್ಕೆ ಮಾತೃ ಸ್ವರೂಪಿಯಾಗಿ ಬಂದಿದ್ದಾರೆ. ಅವರನ್ನು ಗೆಲ್ಲಿಸಿ ಕಳುಹಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಕಾರ್ಯಕರ್ತರು ಇನ್ನೂ 10 ದಿನ ಸೈನಿಕರಂತೆ ಮೋದಿ ಜೀ ಹಾಗೂ ಗಾಯತ್ರಿ ಸಿದ್ಧೇಶ್ವರ ಅವರ ಪರ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಬಸವರಾಜ ನಾಯ್ಕ ಮಾತನಾಡಿ, ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆಗಬೇಕು ಎಂದು ಇಡೀ ವಿಶ್ವವೇ ಎದುರು ನೋಡುತ್ತಿದೆ. ಅಲ್ಲಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದರೆ ಇಲ್ಲಿ ಗಾಯತ್ರಿ ಅವರನ್ನು ಬಹುಮತದಿಂದ ಗೆಲ್ಲಿಸಿ ಕಳುಹಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡ ಆನಂದಪ್ಪ ಮಾತನಾಡಿ, ಗಾಯತ್ರಿ ಸಿದ್ದೇಶ್ವರ ಅವರ ಪರ ಕ್ಷೇತ್ರದ ಜನ ಜಾತ್ಯತೀತವಾಗಿ, ಧರ್ಮಾತೀತವಾಗಿ ಬೆಂಬಲ ನೀಡುತ್ತಿದ್ದಾರೆ. ಜಿ.ಎಂ.ಸಿದ್ದೇಶ್ವರ ಹಾಗೂ ಗಾಯತ್ರಿ ಸಿದ್ದೇಶ್ವರ ಅವರ ಪರ ಅಲ್ಪಸಂಖ್ಯಾತರು ಬೆಂಬಲ ನೀಡುತ್ತಿದ್ದಾರೆ. ನಮ್ಮ ಎನ್ಡಿಎ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ಮೋದಿ ಅವರು ಪ್ರಧಾನಿ ಆಗುವುದು ಖಚಿತ ಎಂದರು.
ಬಿಜೆಪಿ ಮುಖಂಡರಾದ ಅಣಬೇರು ಜೀವನಮೂರ್ತಿ, ಯುವ ಮೋರ್ಚಾ ಉಪಾಧ್ಯಕ್ಷ ಜಿ.ಎಸ್. ಶ್ಯಾಮ್, ಮಂಡಲದ ಅಧ್ಯಕ್ಷ ದೇವೇಂದ್ರಪ್ಪ, ಹನುಮಂತನಾಯ್ಕ, ಮಂಜಾನಾಯ್ಕ್, ಗಂಗಾನಾಯ್ಕ, ಗ್ಯಾರಳ್ಳಿ ಶಿವಯೋಗಿ, ಹನುಮಂತಪ್ಪ ಮತ್ತು ಇತರರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.